ADVERTISEMENT

ವಿಧಾನಸಭೆ: ಶರ್ಟ್ ಬಿಚ್ಚಿ ಅಗೌರವ; ಒಂದು ವಾರ ಶಾಸಕ ಸಂಗಮೇಶ್ವರ್ ಕಲಾಪದಿಂದ ಅಮಾನತು

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2021, 8:57 IST
Last Updated 4 ಮಾರ್ಚ್ 2021, 8:57 IST
ವಿಧಾನಸೌಧ ಸಾಂದರ್ಭಿಕ ಚಿತ್ರ
ವಿಧಾನಸೌಧ ಸಾಂದರ್ಭಿಕ ಚಿತ್ರ   

ಬೆಂಗಳೂರು: ಕರ್ನಾಟಕ 15ನೇ ವಿಧಾನಸಭೆಯ 9ನೇ ಅಧಿವೇಶನ ಗುರುವಾರ ಆರಂಭವಾಗಿದೆ. 'ಒಂದು ದೇಶ ಒಂದು ಚುನಾವಣೆ' ಚರ್ಚೆಗೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿ ಧರಣಿ ನಡೆಸಿದರು. ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ವರ್ ಸದನದ ಬಾವಿಗಿಳಿದು, ಶರ್ಟ್‌ ಬಿಚ್ಚಿ ಘೋಷಣೆ ಕೂಗಿದರು.

ಸಂಗಮೇಶ್ವರ್ ವರ್ತನೆಗೆ ಆಕ್ಷೇಪ ವ್ಯಕ್ತಪಡಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಮೊದಲಿಗೆ ಕಲಾಪವನ್ನು ಮುಂದೂಡಿದ್ದರು. ಮತ್ತೆ ಸದನ ಸೇರುತ್ತಿದ್ದಂತೆ, ಸಂಗಮೇಶ್ವರ್ ಅವರು ಅಗೌರವದಿಂದ ನಡೆದುಕೊಂಡಿರುವುದರ ವಿರುದ್ಧ ಪ್ರಸ್ತಾವನೆ ಮಂಡಿಸಲಾಯಿತು.

ಧ್ವನಿ ಮತದ ಮೂಲಕ ಪ್ರಸ್ತಾವನೆಗೆ ಒಪ್ಪಿಗೆ ಪಡೆದ ಕಾಗೇರಿ ಅವರು, 'ಸಂಗಮೇಶ್ವರ್ ಅಸಭ್ಯತೆ ಮತ್ತು ಅಗೌರವದಿಂದ ನಡೆದು ಕೊಂಡಿರುವುದರಿಂದ ಒಂದು ವಾರಗಳ ಕಾಲ ಸದನದಿಂದ ಹೊರ ನಡೆಯುತ್ತಾರೆ' ಎಂದು ಪ್ರಕಟಿಸಿದರು.

ADVERTISEMENT
ಶಾಸಕ ಬಿ.ಕೆ.ಸಂಗಮೇಶ್ವರ್

ಕರ್ನಾಟಕ ವಿಧಾನಸಭೆಯ ಕಾರ್ಯ ವಿಧಾನ ಮತ್ತು ನಿಯಮಾವಳಿಗಳ ನಿಯಮ 348ರ ಮೇರೆಗೆ ತಕ್ಷಣದಿಂದ ಜಾರಿಗೆ ಬರುವಂತೆ ಮಾರ್ಚ್‌ 12ರ ವರೆಗೂ ಸಂಗಮೇಶ್ವರ್ ಅವರು ಸದನದ ಕಲಾಪಕ್ಕೆ ಹಾಜರಾಗುವುದರಿಂದ ತಡೆಯಲಾಗಿದೆ.

ಸದನವನ್ನು ಮಧ್ಯಾಹ್ನ 3 ಗಂಟೆಗೆ ಸೇರುವಂತೆ ಮುಂದೂಡಲಾಗಿದೆ.

ನೇರಪ್ರಸಾರ–

ಬೆಳಿಗ್ಗೆ 11ಕ್ಕೆ ಆರಂಭವಾದ ಸದನದಲ್ಲಿ 'ಒಂದು ದೇಶ ಒಂದು ಚುನಾವಣೆ' ಆರಂಭಿಸಲಾಯಿತು. ಆದರೆ, ಕಾಂಗ್ರೆಸ್‌ ಸದಸ್ಯರು ಧರಣಿ ನಡೆಸಿದರು. 'ಚರ್ಚೆಗೆ ಒಪ್ಪಿಕೊಂಡು ಈಗ ವಿರೋಧ ವ್ಯಕ್ತಪಡಿಸುತ್ತಿರುವುದು ಸರಿಯಾದ ಕ್ರಮ ಅಲ್' ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.

'ಒಂದು ದೇಶ ಒಂದು ಚುನಾವಣೆ ಯೋಚನೆಯೇ ಅವಾಸ್ತವಿಕ' ಎಂದು ಸಿದ್ದರಾಮಯ್ಯ ವಿರೋಧ ವ್ಯಕ್ತಪಡಿಸಿದರು. ಕಾಂಗ್ರೆಸ್‌ನ ಘೋಷಣೆಯ ನಡುವೆಯೇ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾಷಣ ಮಾಡಿದರು.

ಪ್ರಸ್ತಾಪ ವಿರೋಧಿಸಿ ಕಾಂಗ್ರೆಸ್ ಧರಣಿ ಮುಂದುವರಿದಿದ್ದರಿಂದ ಕಲಾಪವನ್ನು ಸಭಾಧ್ಯಕ್ಷ ಕಾಗೇರಿ 15 ನಿಮಿಷ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.