ADVERTISEMENT

ಸಿಎಂ ನಿವಾಸದಲ್ಲಿ ಚರ್ಚೆ: ಬಿಜೆಪಿ– ಜೆಡಿಎಸ್‌ ಪಾದಯಾತ್ರೆಗೆ ಪ್ರತಿ ಹೋರಾಟ

​ಪ್ರಜಾವಾಣಿ ವಾರ್ತೆ
Published 30 ಜುಲೈ 2024, 6:57 IST
Last Updated 30 ಜುಲೈ 2024, 6:57 IST
<div class="paragraphs"><p>ಸಿಎಂ ಸಿದ್ದರಾಮಯ್ಯ</p></div>

ಸಿಎಂ ಸಿದ್ದರಾಮಯ್ಯ

   

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ (ಮುಡಾ) ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆಗೆ ಆಗ್ರಹಿಸಿ ಆಗಸ್ಟ್‌ 3ರಿಂದ ಪಾದಯಾತ್ರೆ ಹಮ್ಮಿಕೊಳ್ಳಲು ಬಿಜೆಪಿ– ಜೆಡಿಎಸ್‌ ನಿರ್ಧರಿಸಿರುವ ಬೆನ್ನಲ್ಲೆ, ಅದಕ್ಕೆ ಪ್ರತಿಯಾಗಿ ಪ್ರಬಲ ಹೋರಾಟ ನಡೆಸಲು ಕಾಂಗ್ರೆಸ್ ಮುಂದಾಗಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನಿವಾಸದಲ್ಲಿ ಸಚಿವರು ಈ ಕುರಿತು ಸುದೀರ್ಘ ಚರ್ಚೆ ನಡೆಸಿದ್ದು,  ಬಿಜೆಪಿ– ಜೆಡಿಎಸ್ ಆರೋಪಗಳಿಗೆ ತಿರುಗೇಟು ನೀಡಲು ತೀರ್ಮಾನಿಸಿದ್ದಾರೆ.

ADVERTISEMENT

ಪಾದಯಾತ್ರೆ ಆರಂಭದ ದಿನದಿಂದಲೇ ರಾಜ್ಯದ ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಸಮಾವೇಶಗಳನ್ನು  ನಡೆಸಿ, ಮೈಸೂರಿನಲ್ಲಿ ಬೃಹತ್ ಸಮಾವೇಶ ನಡೆಸಲು ಸಮಾಲೋಚನೆ ನಡೆಸಿದ್ದಾರೆ. ಮೈಸೂರು ಸಮಾವೇಶದಲ್ಲಿ ಭಾರಿ ಸಂಖ್ಯೆಯಲ್ಲಿ ಕಾರ್ಯಕರ್ತರನ್ನು ಸೇರಿಸಲು ಕೂಡಾ ಚರ್ಚೆ ನಡೆದಿದೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಬಿಜೆಪಿ ಅವಧಿಯಲ್ಲಿ ನಡೆದಿರುವ ಅಕ್ರಮಗಳನ್ನು ದಾಖಲೆಗಳ ಸಹಿತ ಬಹಿರಂಗಪಡಿಸಿ, ಎಲ್ಲ ಜಿಲ್ಲಾ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವುದು, ವಿರೋಧ ಪಕ್ಷಗಳು ನಡೆಸುವ ಪಾದಯಾತ್ರೆ ಸಾಗುವ ದಾರಿಯಲ್ಲಿ ಪ್ರಮುಖ ಕೇಂದ್ರಗಳಲ್ಲಿ ಸುದ್ದಿಗೋಷ್ಠಿ ನಡೆಸುವ ಬಗ್ಗೆಯೂ ಸಮಾಲೋಚನೆ ನಡೆದಿದೆ. 

ಬಿಜೆಪಿ ಅವಧಿಯಲ್ಲಿ ಮುಡಾ ನಿವೇಶನ ಹಂಚಿಕೆ ಆಗಿರುವುದನ್ನು ಬಿಚ್ಚಿಡುವ ಜೊತೆಗೆ, ಕಾನೂನು ಹೋರಾಟದ ಮೂಲಕವೂ ತಿರುಗೇಟು ನೀಡುವ ಕುರಿತು ಸಮಾಲೋಚನೆ ನಡೆದಿದೆ ಎಂದು ಗೊತ್ತಾಗಿದೆ. 

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಜಿ. ಪರಮೇಶ್ವರ, ಎಚ್.ಸಿ. ಮಹಾದೇವಪ್ಪ, ಎಂ.ಸಿ. ಸುಧಾಕರ್, ವೆಂಕಟೇಶ್, ಸತೀಶ ಜಾರಕಿಹೊಳಿ, ಜಮೀರ್ ಅಹಮ್ಮದ್, ಕೃಷ್ಣ ಬೈರೇಗೌಡ, ಬೈರತಿ ಸುರೇಶ್ ಸೇರಿದಂತೆ ಹಲವರು ಸಮಾಲೋಚನೆ ನಡೆಸಿದರು ಎಂದೂ ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.