ADVERTISEMENT

ಸಿದ್ದು ಬಣದ ನಿರ್ಲಕ್ಷ್ಯಕ್ಕೆ ಬೇಸತ್ತು ಡಿಕೆಶಿ ಕಾಂಗ್ರೆಸ್ ಬಿಡಲಿದ್ದಾರೆ: ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 1 ಜೂನ್ 2022, 7:36 IST
Last Updated 1 ಜೂನ್ 2022, 7:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ‘ಕಾಂಗ್ರೆಸ್‌ನಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಣದ ನಿರ್ಲಕ್ಷದಿಂದ ಬೇಸತ್ತಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್‌ ತ್ಯಜಿಸಬಹುದಾದ ದಿನ ದೂರವಿಲ್ಲ’ ಎಂದು ಬಿಜೆಪಿ ವ್ಯಂಗ್ಯವಾಡಿದೆ.

ಕಾಂಗ್ರೆಸ್‌ ನಾಯಕರು ಪಕ್ಷ ಬಿಡುತ್ತಿರುವ ವಿಚಾರ ಪ್ರಸ್ತಾಪಿಸಿ ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ‘ವಿಧಾನ ಪರಿಷತ್ ಟಿಕೆಟ್‌, ರಾಜ್ಯಸಭಾ ಟಿಕೆಟ್‌, ಪದಾಧಿಕಾರಿಗಳ ಪಟ್ಟಿ ಹೀಗೆ ಪಕ್ಷದ ವಿಚಾರದಲ್ಲಿ ಸಿದ್ದರಾಮಯ್ಯ ಛಾಪು ಎದ್ದು ಕಾಣುತ್ತಿದೆ. ಕೆಪಿಸಿಸಿ ಅಧ್ಯಕ್ಷರು ಸಿದ್ದರಾಮಯ್ಯ ಬಣದಿಂದ ನಿರ್ಲಕ್ಷ್ಯಕ್ಕೆ ಒಳಗಾಗಿ ಮುಂದೊಂದು ದಿನ ಕಾಂಗ್ರೆಸ್‌ ತ್ಯಜಿಸಬಹುದಾದ ದಿನ ದೂರವೇನು ಇಲ್ಲ. ಎಚ್ಚರ ಡಿಕೆಶಿ ಎಚ್ಚರ!’ ಎಂದು ಲೇವಡಿ ಮಾಡಿದೆ.

‘ಡಿಜಿಟಲ್ ಅಭಿಯಾನದಲ್ಲಿ ಲಕ್ಷ ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಅಂಕಿ-ಸಂಖ್ಯೆ ಬಿಡುಗಡೆ ಮಾಡಿದ ಡಿ.ಕೆ.ಶಿವಕುಮಾರ್ ಅವರೇ, ಈಗ ಅನೇಕರು ಪಕ್ಷ ತ್ಯಜಿಸುತ್ತಿದ್ದು, ನಾಳೆ ನಡೆಯಲಿರುವ ರಾಜ್ಯ ಚಿಂತನ ಶಿಬಿರದಲ್ಲಿ ಮುಂದೆ ಪಕ್ಷ ತ್ಯಜಿಸುವವರಿಗಾಗಿ ಹೊಸ ಅಭಿಯಾನ ಘೋಷಿಸುವಿರಾ’ ಎಂದು ಬಿಜೆಪಿ ಪ್ರಶ್ನಿಸಿದೆ. ‌

‘ಕಪಿಲ್ ಸಿಬಲ್, ಆರ್.ಪಿ.ಎನ್. ಸಿಂಗ್, ಅಶ್ವಿನಿ ಕುಮಾರ್, ಹಾರ್ದಿಕ್ ಪಟೇಲ್, ಸಿಎಂ ಇಬ್ರಾಹಿಂ, ಪ್ರಮೋದ್ ಮಧ್ವರಾಜ್,ಮುಖ್ಯಮಂತ್ರಿ ಚಂದ್ರು... ಈಗ ಬ್ರಿಜೇಶ್ ಕಾಳಪ್ಪ! ಕಾಂಗ್ರೆಸ್ಸಿಗರೇ, ನಿಮ್ಮದು ಭಾರತ್‌ ಜೋಡೋ ಅಭಿಯಾನವೋ, ಕಾಂಗ್ರೆಸ್‌ ಛೋಡೋ ಅಭಿಯಾನವೋ’ ಎಂದು ಬಿಜೆಪಿ ಟೀಕಿಸಿದೆ.

‘ಕೆಪಿಸಿಸಿ ಅಧ್ಯಕ್ಷರೇ, ನಿಮ್ಮ ಭಾರತ್‌ ಜೋಡೋ ಅಭಿಯಾನ ಮತ್ತು ಸದಸ್ಯತ್ವ ಅಭಿಯಾನ ಹೇಗಿದೆ?, ಅಭಿಯಾನದ ಮೂಲಕ ಕಾಂಗ್ರೆಸ್‌ ಸೇರಿದವರ ಸಂಖ್ಯೆ ಹೆಚ್ಚೋ ಅಥವಾ ಕಾಂಗ್ರೆಸ್‌ ತ್ಯಜಿಸಲಿರುವವರ ಸಂಖ್ಯೆ ಹೆಚ್ಚೋ’ ಎಂದು ಬಿಜೆಪಿ ಗುಡುಗಿದೆ.

‘ರಾಜಸ್ಥಾನದ ಚಿಂತನ ಶಿಬಿರದ ಬಳಿಕ ಕಾಂಗ್ರೆಸ್‌ ಖಾಲಿಯಾಗುತ್ತಿದೆ, G–23 ಗುಂಪಿನ ಸಂಖ್ಯೆ ಕರಗುತ್ತಿದೆ. ಕಾರಣ ಸ್ಪಷ್ಟ, ನಕಲಿ ಗಾಂಧಿ ಕುಟುಂಬದ ನಾಯಕತ್ವವನ್ನು ಕಾಂಗ್ರೆಸ್ ಕಾರ್ಯಕರ್ತರೇ ಒಪ್ಪುತ್ತಿಲ್ಲ. ರಾಜ್ಯದಲ್ಲೂ ಕಾಂಗ್ರೆಸ್‌ ಚಿಂತನಾ ಶಿಬಿರ ಹಮ್ಮಿಕೊಂಡಿದೆ, ಅದಕ್ಕೂ ಮುನ್ನವೇ ರಾಜೀನಾಮೆ ಪರ್ವ ಆರಂಭಗೊಂಡಿದೆ’ ಎಂದು ಬಿಜೆಪಿ ಕಿಡಿಕಾರಿದೆ.

‘ಕಾಂಗ್ರೆಸ್‌ ಪಕ್ಷ ಯಾವ ದಯನೀಯ ಸ್ಥಿತಿ ತಲುಪಿದೆ ಎಂದರೆ ಡಿಜಿಟಲ್ ಸದಸ್ಯತ್ವ ಅಭಿಯಾನಕ್ಕೆ ಸಂಖ್ಯೆ ತೋರಿಸಲು ಟಿವಿ, ಫ್ರಿಡ್ಜ್, ಫೋನ್ ಆಮಿಷ ಒಡ್ಡಲಾಗಿತ್ತು. ಈಗ ಹತ್ತಾರು ವರ್ಷ ಕಾಂಗ್ರೆಸ್‌ ಪಕ್ಷಕ್ಕೆ ದುಡಿದವರು ಪಕ್ಷ ತ್ಯಜಿಸುತ್ತಿದ್ದಾರೆ. ನಕಲಿ ಗಾಂಧಿಗಳ ನಾಯಕತ್ವಕ್ಕೆ ಕಾರ್ಯಕರ್ತರೇ ಬೇಸತ್ತಿದ್ದಾರೆ!’ ಎಂದು ಬಿಜೆಪಿ ಕುಟುಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.