ADVERTISEMENT

ಸಿದ್ದರಾಮಯ್ಯ ಮೊದಲಿನಂತಿಲ್ಲ, ಬದಲಾಗಿದ್ದಾರೆ: ವಿ.ಸೋಮಣ್ಣ ವ್ಯಂಗ್ಯ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2019, 8:50 IST
Last Updated 5 ನವೆಂಬರ್ 2019, 8:50 IST
ವಿ.ಸೋಮಣ್ಣ ಹಾಗೂ ಸಿದ್ದರಾಮಯ್ಯ
ವಿ.ಸೋಮಣ್ಣ ಹಾಗೂ ಸಿದ್ದರಾಮಯ್ಯ   

ಬೆಳಗಾವಿ:‘ನಾನು, ಸಿದ್ದರಾಮಯ್ಯ ಒಂದೇ ಕಂಪನಿಯಲ್ಲಿ ಇದ್ದವರು. ಈಗ ಅವರು ಬದಲಾಗಿದ್ದಾರೆ. ಅವರ ಭಾಷೆ ಬದಲಾಗಿದೆ. ಮೊದಲಿನ ಸಿದ್ದರಾಮಯ್ಯರಾಗಿ ಉಳಿದಿಲ್ಲ. ಅವರಲ್ಲಿ ಆತಂಕ, ಭೀತಿ ಶುರುವಾಗಿದೆ’ ಎಂದು ವಸತಿ ಸಚಿವ ವಿ.ಸೋಮಣ್ಣ ವ್ಯಂಗ್ಯವಾಡಿದರು.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಿನ್ನೆ ರಾತ್ರಿ ಸಿದ್ದರಾಮಯ್ಯ ಅವರು ನನಗೆ ದೂರವಾಣಿ ಕರೆ ಮಾಡಿದ್ದರು. ಪರಿಹಾರ ವಿತರಿಸಲು ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿರುವ ವಿಷಯವನ್ನು ತಿಳಿಸಿದೆ. ಸಂತ್ರಸ್ತರಿಗೆ ಪರಿಹಾರ ವಿತರಿಸುವ ವಿಷಯದಲ್ಲಿ ರಾಜಕಾರಣ ಮಾಡಬೇಡಿ, ಜನರನ್ನು ದಾರಿ ತಪ್ಪಿಸುವ ಕೆಲಸವನ್ನು ಮಾಡಬೇಡಿ ಎಂದು ಕಿವಿಮಾತು ಹೇಳಿದ್ದೇನೆ’ ಎಂದರು.

‘ಅವರ ಅವಧಿಯಲ್ಲಿ ಏನೆಲ್ಲಾ ಹಗರಣಗಳಾಗಿವೆ ಎನ್ನುವುದರ ಬಗ್ಗೆ ಈಗ ಚರ್ಚೆ ಬೇಡ. ಅವುಗಳ ಮರಣೋತ್ತರ ಪರೀಕ್ಷೆ ಮಾಡುವುದೂ ಬೇಡ’ ಎಂದು ಹೇಳಿದರು.

ADVERTISEMENT

‘ಸಿದ್ದರಾಮಯ್ಯ ಅವರಿಗೆ ಎಲ್ಲ ಕಡೆಯೂ ಲಿಂಕ್‌ ಇದೆ. ಸ್ನೇಹಿತರು ಇದ್ದಾರೆ. ಬಿಜೆಪಿ ಸಭೆಯ ಆಡಿಯೊ ಕ್ಲಿಪ್ಪಿಂಗ್‌ ಅನ್ನು ಅವರೇ ಏಕೆ ಬಿಡುಗಡೆಗೊಳಿಸಿರಬಾರದು? ದಿನೇಶ್‌ ಗುಂಡೂರಾವ್‌ ಅವರ ಮನೆಯಲ್ಲಿಯೇ ಮಿಮಿಕ್ರಿ ಕಲಾವಿದರಿಂದ ಈ ಕ್ಲಿಪ್ಪಿಂಗ್‌ ಮಾಡಿಸಿರಬಹುದು’ ಎಂದರು.

‘ಪಾದಯಾತ್ರೆ ಮಾಡುವುದರಿಂದ ಅವರ ಆರೋಗ್ಯ ಸುಧಾರಿಸಬಹುದು. ಮಾಡಲಿ ಬಿಡಿ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಜಕಾರಣಗೊಳಿಸಬೇಡಿ– ಮಾಧ್ಯಮಗಳಿಗೆ ಸಲಹೆ:‘ಪರಿಹಾರ ವಿತರಣೆಯ ವಿಷಯವನ್ನು ಮಾಧ್ಯಮಗಳು ರಾಜಕಾರಣಗೊಳಿಸಬಾರದು. ಯಾರದೊ ಜೊತೆ ಚಪ್ಪಾಳೆ ಹೊಡಿಬೇಡಿ’ ಎಂದು ಸೋಮಣ್ಣ ಅವರು ಮಾಧ್ಯಮಗಳಿಗೆ ಸಲಹೆ ನೀಡಿದರು.

ತನಿಖೆಗೆ ತಂಡ ರಚನೆ:‘ವಿವಿಧ ಯೋಜನೆಗಳಡಿ ರಾಜ್ಯದಲ್ಲಿ 2 ಲಕ್ಷ ಮನೆಗಳ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವು ಕಡೆ ಗೋಲ್‌ಮಾಲ್‌ ಕಂಡುಬಂದಿದೆ. ಇದರ ಬಗ್ಗೆ ತನಿಖೆ ಮಾಡಲು ರಾಜೀವ್‌ಗಾಂಧಿ ವಸತಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ನೇತೃತ್ವದಲ್ಲಿ ತಂಡ ರಚಿಸಲಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.