
ಬಿ.ವೈ.ವಿಜಯೇಂದ್ರ, ಡಿ.ಕೆ.ಶಿವಕುಮಾರ್
ಬೆಳಗಾವಿ: ‘ಸರ್ಕಾರದ ಖಜಾನೆ ಖಾಲಿ’ ಎಂಬ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತಿಗೆ, ತಿರುಗೇಟು ಕೊಟ್ಟ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಅವರು ಕಲೆಕ್ಷನ್ ಕಿಂಗ್, ಅಪ್ಪನ ಹೆಸರು ಕೆಡಿಸಿದ ಅವರ ಕಲೆಕ್ಷನ್ ಎಷ್ಟು ಬಿಚ್ಚಿಡಲಾ’ ಎಂದು ಕಟುವಾಗಿ ಪ್ರಶ್ನಿಸಿದರು.
ಹೈಕಮಾಂಡ್ ತೃಪ್ತಿಗೆ ಖಜಾನೆ ಖಾಲಿ: ವಿಜಯೇಂದ್ರ
ಕಾಂಗ್ರೆಸ್ ಹೈಕಮಾಂಡ್‌ಗೆ ಹಣ ಸಂದಾಯ ಮಾಡಿ ತೃಪ್ತಿಪಡಿಸಲು ರಾಜ್ಯ ಸರ್ಕಾರ ತನ್ನ ಖಜಾನೆ ಖಾಲಿ ಮಾಡಿದೆ
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ತಮ್ಮ ಪಕ್ಷದಹೈಕಮಾಂಡ್‌ಗೆ ಹಣ ಸಂದಾಯ
ಮಾಡುತ್ತಿದೆ. ಈಗ ಭ್ರಷ್ಟಾಚಾರದ ಮೂಲಕ ಹಣ ಸಂಗ್ರಹಿಸುತ್ತಿದ್ದಾರೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನೂರಾರು ಕೋಟಿ ಪೋಲಾಗಿದೆ. ಬಳಿಕ ಒಂದಾದ ಮೇಲೊಂದು ಹಗರಣ ನಡೆಯುತ್ತಿದೆ.
ಭ್ರಷ್ಟಾಚಾರ ಬಿಟ್ಟರೆ, ರಾಜ್ಯ ಸರ್ಕಾರದಲ್ಲಿ ಅಭಿವೃದ್ಧಿ ಕೆಲಸಗಳೇ ಆಗುತ್ತಿಲ್ಲ ಎಂದು ಆಕ್ಷೇಪಿಸಿದರು.
ಇವರಿಗೆ ಬಡವರಾದರೇನು? ಶ್ರೀಮಂತರಾದರೇನು? ರಾಜ್ಯದಲ್ಲಿ ಲೂಟಿ ಮಾಡಿ, ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡನ್ನು ತೃಪ್ತಿ ಪಡಿಸಿ ತಾವು ಅಧಿಕಾರದಲ್ಲಿ ಮುಂದುವರೆಯಬೇಕಿದೆ. ಇದೊಂದೇ ಈ ಸರ್ಕಾರದಲ್ಲಿ ನಡೆಯುತ್ತಿದೆ.
ಕಲೆಕ್ಷನ್ ಎಷ್ಟು ಬಿಚ್ಚಿಡಲಾ: ಡಿಕೆಶಿ
ಕಲೆಕ್ಷನ್ ಕಿಂಗ್ ಎಂದು ಏನಾದರೂ ಇದ್ದರೆ ಅದು ವಿಜಯೇಂದ್ರ. ಅವರ ಅಪ್ಪನ ಹೆಸರು ಕೆಡಿಸಿದ್ದು ವಿಜಯೇಂದ್ರ. ಇದನ್ನ ಮರೆಯಬಾರದು. ಅವರ ‘ಕಲೆಕ್ಷನ್’ ಎಷ್ಟು ಎಂದು ಬಿಚ್ಚಿ ಇಡಬೇಕಾ?’
ಯಾವ ಖಜಾನೆ ಖಾಲಿ ಆಗಿದೆ? ಸರಿಯಾಗಿ ಸದನದಲ್ಲಿ ಬಂದು ಪ್ರಶ್ನೆ ಮಾಡಿ. ಎಲ್ಲೋ ತಪ್ಪಿಸಿಕೊಂಡು ಓಡುವುದಲ್ಲ. ಇವರ ಅಕೌಂಟ್‌ಗಳು, ಕಲೆಕ್ಷನ್, ವಹಿವಾಟುಗಳ ಬಗ್ಗೆ ಇವಾಗ ಬಿಚ್ಚಿಡಬೇಕೆ?
ವಿಧಾನಸಭೆಯಲ್ಲಿ ಅವರು ಮಾತನಾಡಿದರೆ, ಏನೇನು ಹೇಳಬೇಕೆಂದು ನನಗೂ ಗೊತ್ತು. ವಿರೋಧ ಪಕ್ಷದ ಅಧ್ಯಕ್ಷರಾಗಿ ಇತಿಮಿತಿಯಿಂದ ಮಾತನಾಡಲಿ. ಮೊದಲು ವಿಧಾನಸಭೆಗೆ ಬಂದು ಮಾತನಾಡಲು ಹೇಳಿ. ಅನುಭವವಿಲ್ಲದೇ ಏನೇನೋ ಹೇಳಬಾರದು.
ಔಟ್ ಗೋಯಿಂಗ್ ಸಿ.ಎಂ ಅಲ್ಲ; ಪ್ರೆಸಿಡೆಂಟ್: ರಾಜಣ್ಣ
‘ಸಿದ್ದರಾಮಯ್ಯ ಔಟ್ ಗೋಯಿಂಗ್ (ನಿರ್ಗಮಿಸುತ್ತಿರುವ) ಮುಖ್ಯಮಂತ್ರಿ’ ಎಂಬ ಬಿ.ವೈ.ವಿಜಯೇಂದ್ರ ಹೇಳಿಕೆ ಕೂಡ ತೀವ್ರ ಮಾತಿನ ಬಾಣಗಳಿಗೆ ಕಾರಣವಾಯಿತು. ಸಿದ್ದರಾಮಯ್ಯ ಆಪ್ತರು ಹಿಗ್ಗಾ–ಮುಗ್ಗಾ ತರಾಟೆ ತೆಗೆದುಕೊಂಡರು.
‘ಸಿದ್ದರಾಮಯ್ಯ ತಾವು ಇನ್ನೆಷ್ಟು ದಿನ ಆ ಕುರ್ಚಿಯಲ್ಲಿ ಕುಳಿತಿರುತ್ತಾರೆ ಎಂಬ ಗೊಂದಲದಲ್ಲಿದ್ದಾರೆ. ಕುರ್ಚಿಗಾಗಿ ಕಾಂಗ್ರೆಸ್‌ನವರ ಒಳಜಗಳ ಇನ್ನೂ ಜೀವಂತ ಇದೆ ಎಂಬುದಕ್ಕೆ ಗುಂಪುಗಾರಿಕೆ ಹಾಗೂ ಡಿನ್ನರ್ ಪಾರ್ಟಿಗಳೇ ಸಾಕ್ಷಿ’ ಎಂದು ವಿಜಯೇಂದ್ರ ಸುದ್ದಿಗಾರರಿಗೆ ತಿಳಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿದ ಶಾಸಕ ಕೆ.ಎನ್.ರಾಜಣ್ಣ, ‘ಸಿದ್ದರಾಮಯ್ಯ ಈಗಾಗಲೇ ಸಿ.ಎಂ ಇದ್ದಾರೆ. ಇನ್ನೂ ‘ಇನ್’ ಆಗುತ್ತಾರೆ. ವಿಜಯೇಂದ್ರ ಅವರೇ ‘ಔಟ್ ಗೋಯಿಂಗ್ ಅಧ್ಯಕ್ಷ’ ಎಂದರು.
ಇದೇ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ವಸತಿ ಸಚಿವ ಜಮೀರ್ ಅಹಮದ್ ಖಾನ್, ‘ಬಿಜೆಪಿ ಸರ್ಕಾರ ಇದ್ದಾಗ 2008ರಲ್ಲಿ ಎಷ್ಟು ಮುಖ್ಯಮಂತ್ರಿಗಳಾದರು? 2019ರಲ್ಲಿ ಎಷ್ಟು ಮುಖ್ಯಮಂತ್ರಿ ಆಗಿದ್ದಾರೆ. ಯಾರು ಪದೇಪದೇ ಔಟ್ ಗೋಯಿಂಗ್ ಎಂಬುದು ಜನರಿಗೆ ಗೊತ್ತು’ ಎಂದರು.
‘ವಿಜಯೇಂದ್ರಗೆ ಏನೂ ಕೆಲಸವಿಲ್ಲ. ನಾವು ಏನು ಮಾಡುತ್ತೇವೆ, ಏನು ತಿನ್ನುತ್ತೇವೆ ಎಂಬುದನ್ನು ಮಾತ್ರ ಚರ್ಚಿಸುತ್ತಾರೆ. ವಿರೋಧ ಪಕ್ಷದ ನಾಯಕರಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಲಿ’ ಎಂದು ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ಕುಟುಕಿದರು.
ಸಚಿವ ಬೈರತಿ ಸುರೇಶ್, ‘ವಿಜಯೇಂದ್ರ ಇನ್ ಕಮಿಂಗ್ (ಮುಂಬರುವ) ಸಿ.ಎಂ ಏನ್ರಿ? ಅವರೇನು ಭವಿಷ್ಯ ಹೇಳುವವರಾ? ಮೊದಲು ಅವರು ತಟ್ಟೆಯಲ್ಲಿ ಬಿದ್ದ ಹೆಗ್ಗಣ ತೆಗೆಯಲು ಹೇಳಿ. ಒಬ್ಬೊಬ್ಬರು ಒಂದೊಂದು ಕಡೆ ಮುಖ ಮಾಡಿದ್ದಾರೆ’ ಎಂದು ಲೇವಡಿ ಮಾಡಿದರು.
‘ಅಧಿವೇಶ ನಂತರ ಸಿದ್ದರಾಮಯ್ಯ ಅವರು ಬೆಳಗಾವಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ. ಇದೇ ಕಾರಣಕ್ಕೆ ವಿಜಯೇಂದ್ರ ‘ಔಟ್ ಗೋಯಿಂಗ್’ ಎಂದಿರಬೇಕು’ ಎಂದು ಸತೀಶ ಜಾರಕಿಹೊಳಿ ಕೂಡ ಪ್ರತಿಕ್ರಿಯಿಸಿದರು.
ಭ್ರಷ್ಟಾಚಾರ ಮಾಡಿ ಪಕ್ಷದ ಹೈಕಮಾಂಡ್ ತೃಪ್ತಿಪಡಿಸುವುದು ಬಿಜೆಪಿ ನಾಯಕರ ಅನುಭವ. ಅವರ ಅನುಭವವನ್ನೇ ವಿಜಯೇಂದ್ರ ಹೇಳಿದ್ದಾರೆಕೆ.ಎನ್.ರಾಜಣ್ಣ, ಶಾಸಕ
ಔಟ್ ಗೋಯಿಂಗ್ ಸಿ.ಎಂ ಎಂದು ವಿಜಯೇಂದ್ರ ಪದೇಪದೇ ಹೇಳುತ್ತಾರೆ ಅಷ್ಟೇ. ಅವರ ಮಾತಿಗೆ ಬೆಲೆ ಕೊಡಬೇಕಾಗಿಲ್ಲ. ಉತ್ತರವನ್ನೂ ಕೊಡುವುದಿಲ್ಲಯತೀಂದ್ರ ಸಿದ್ದರಾಮಯ್ಯ, ವಿಧಾನ ಪರಿಷತ್ ಸದಸ್ಯ
ಅತಂತ್ರ ಸ್ಥಿತಿಯಲ್ಲಿರುವ ಸಿದ್ದರಾಮಯ್ಯ ಬ್ರೇಕ್‌ಫಾಸ್ಟ್ ಮಾಡಿ 15 ದಿನ ಕುರ್ಚಿಯಲ್ಲಿ ಉಳಿದಿದ್ದಾರೆ. ಡಿನ್ನರ್ ಪಾರ್ಟಿ, ಇನ್ನರ್ ಪಾಲಿಟಿಕ್ಸ್ ಇನ್ನೂ ನಿಂತಿಲ್ಲಛಲವಾದಿ ನಾರಾಯಣಸ್ವಾಮಿ, ವಿರೋಧ ಪಕ್ಷದ ನಾಯಕ, ವಿಧಾನ ಪರಿಷತ್ತು
ಪಕ್ಷದ ಹೈಕಮಾಂಡ್ ನಿರ್ಧರಿಸುವವರೆಗೆ ನಾನೇ ಸಿ.ಎಂ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ, ವಿಪಕ್ಷ ನಾಯಕ ಎಷ್ಟು ದಿನ ಇರುತ್ತಾರೋ ಕೇಳಿನೋಡಿಎಂ.ಬಿ.ಪಾಟೀಲ, ಸಚಿವ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.