ADVERTISEMENT

ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ: ಉಸ್ತುವಾರಿ ಸಚಿವರಿಗೆ CM ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಮೇ 2025, 6:41 IST
Last Updated 28 ಮೇ 2025, 6:41 IST
<div class="paragraphs"><p>ಮುಖ್ಯಮಂತ್ರಿ ಸಿದ್ದರಾಮಯ್ಯ&nbsp;</p></div>

ಮುಖ್ಯಮಂತ್ರಿ ಸಿದ್ದರಾಮಯ್ಯ 

   

ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಾದ್ಯಂತ ಭಾರಿ ಮಳೆ ಆಗುತ್ತಿರುವ ಕಾರಣ ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ತೆರಳಿ ಪರಿಹಾರ ಕಾರ್ಯದ ಉಸ್ತುವಾರಿ ನೋಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉಸ್ತುವಾರಿ ಕಾರ್ಯದರ್ಶಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.

ADVERTISEMENT

ಮಳೆಯಿಂದ ಆಗಿರುವ ಅನಾಹುತಗಳ ಬಗ್ಗೆ ಬುಧವಾರ ಬೆಳಿಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿ, ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ಭಾರಿ ಮಳೆಯಿಂದ ಹಾನಿಗೆ ಒಳಗಾಗಿರುವ ಮತ್ತು ಪ್ರವಾಹ ಪೀಡಿತ ಪ್ರದೇಶಗಳಿಗೆ ತಕ್ಷಣ ಭೇಟಿ ನೀಡಿ ಪರಿಸ್ಥಿತಿಯನ್ನು ಸಮಗ್ರವಾಗಿ ಅವಲೋಕಿಸುವಂತೆ ಜಿಲ್ಲಾ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳಿಗೆ ಸೂಚನೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಕೂಡಾ ತೀವ್ರ ನಿಗಾ ವಹಿಸಿ ತಕ್ಷಣ ತಕ್ಷಣ ಪರಿಹಾರ ಕಾರ್ಯಗಳನ್ನು ಸಮರೋಪಾದಿಯಲ್ಲಿ ನಿರ್ವಹಿಸಲು ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸಮಗ್ರ ಅವಲೋಕನ‌ ನಡೆಸಲು ಇದೇ 30 ಮತ್ತು 31ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ಮತ್ತು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳ ಸಭೆಯನ್ನು ಕರೆಯುವಂತೆ ಮುಖ್ಯ ಕಾರ್ಯದರ್ಶಿಗೆ ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ.

ರಾಜ್ಯದಲ್ಲಿ 170 ತಾಲ್ಲೂಕುಗಳನ್ನು ಪ್ರವಾಹ/ಭೂಕುಸಿತಕ್ಕೆ ಗುರಿಯಾಗುವ ತಾಲ್ಲೂಕುಗಳೆಂದು ಗುರುತಿಸಲಾಗಿದ್ದು, ಮುಂಜಾಗ್ರತೆಯಾಗಿ 2,296 ಕಾಳಜಿ/ಆಶ್ರಯ ತಾಣಗಳನ್ನು ಗುರುತಿಸಲಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ 201 ಸ್ಥಳಗಳನ್ನು ಪ್ರವಾಹ ಪೀಡಿತ ಸ್ಥಳಗನ್ನು ಗುರುತಿಸಲಾಗಿದೆ. ಇದೇ 26 ರವರೆಗೆ ರಾಜ್ಯದಲ್ಲಿ 45 ಮನೆಗಳು ಸಂಪೂರ್ಣವಾಗಿ ಹಾನಿಗೊಂಡಿದ್ದು, 1,385 ಮನೆಗಳು ಭಾಗಶಃ ಹಾನಿಯಾಗಿದ್ದು, ಅದರಲ್ಲಿ ಶೇ 99 ರಷ್ಟು ಆರ್ಥಿಕ ಸಹಾಯ ಧನವನ್ನು ಪಾವತಿ ಮಾಡಲಾಗಿದೆ. ವಿಪತ್ತು ನಿರ್ವಹಣೆಗಾಗಿ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಪಿ.ಡಿ ಖಾತೆಯಲ್ಲಿ ₹ 97,351.95 ಲಕ್ಷ ಅನುದಾನವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.