
ಬೆಂಗಳೂರು: ಅರಣ್ಯ ಪ್ರದೇಶಗಳಲ್ಲಿ ಸಫಾರಿಯನ್ನು ಪುನರಾರಂಭಿಸುವ ಸಾಧಕ–ಬಾಧಕಗಳ ಅಧ್ಯಯನಕ್ಕಾಗಿ ವನ್ಯಜೀವಿ ತಜ್ಞರ ಸಮಿತಿ ರಚಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಕರ್ನಾಟಕ ವನ್ಯಜೀವಿ ಮಂಡಳಿ ಸಭೆ ನಿರ್ಧರಿಸಿದೆ.
ಸಭೆಯ ನಂತರ ಈ ಕುರಿತು ಮಾಹಿತಿ ನೀಡಿದ ಅರಣ್ಯ ಸಚಿವ ಈಶ್ವರ ಖಂಡ್ರೆ, ‘ಸಫಾರಿ ವಾಹನಗಳ ಹಾವಳಿಯಿಂದ ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುತ್ತಿವೆ. ವಾಹನಗಳ ಬೆಳಕಿಗೆ ವನ್ಯಜೀವಿಗಳು ವಿಚಲಿತವಾಗುತ್ತಿವೆ ಎಂಬ ಸ್ಥಳೀಯರ ಹಾಗೂ ರೈತರ ದೂರುಗಳನ್ನು ಪರಿಶೀಲಿಸಿ, ವರದಿ ನೀಡಲಿದೆ. ನಂತರ ಬಂಡೀಪುರ, ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಫಾರಿ ಪುನರಾರಂಭಿಸುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.
‘ಅಕ್ಟೋಬರ್, ನವೆಂಬರ್‌ನಲ್ಲಿ ಹುಲಿಗಳ ದಾಳಿಯಿಂದ ಮೂವರು ಮೃತಪಟ್ಟು, ಒಬ್ಬರು ಅಂಗವಿಕಲರಾಗಿದ್ದಾರೆ. ಈ ಘಟನೆಗೆ ಸಫಾರಿ ಕಾರಣ ಎನ್ನುವುದು ಸ್ಥಳೀಯರ ಆರೋಪ. ಹೀಗಾಗಿ, ಮುಂದಿನ ಆದೇಶದವರೆಗೆ ಬಂಡೀಪುರ, ನಾಗರಹೊಳೆಯಲ್ಲಿ ಸಫಾರಿ ಸ್ಥಗಿತಗೊಳಿಸಲು ಆದೇಶ ಹೊರಡಿಸಲಾಗಿತ್ತು. ಸ್ಥಗಿತದ ನಂತರ ಕಾಡಿನ ಹೊರಗೆ ಹುಲಿ ದಾಳಿ ನಡೆದಿಲ್ಲ, ಜೀವಹಾನಿ ಆಗಿಲ್ಲ’ ಎಂದು ವಿವರಿಸಿದರು.
‘1972ರಲ್ಲಿ ಬಂಡೀಪುರ ವ್ಯಾಪ್ತಿಯಲ್ಲಿ 12 ಹುಲಿಗಳು ಇದ್ದವು. ಪ್ರಸ್ತುತ ಹುಲಿಗಳ ಸಂಖ್ಯೆ ಸುಮಾರು 200 ಇದೆ. ಒಂದು ಹುಲಿ ಸ್ವಚ್ಛಂದವಾಗಿ ಜೀವಿಸಲು 10 ಚದರ ಕಿ.ಮೀ ಪ್ರದೇಶ ಬೇಕು ಎಂದು ತಜ್ಞರು ಹೇಳುತ್ತಾರೆ. ಆದರೆ, 900 ಚದರ ಕಿ.ಮೀ ಕಾಡಿನಲ್ಲಿ ದುಪ್ಪಟ್ಟು ಹುಲಿಗಳಿವೆ. ಹುಲಿಗಳು ಕಾಡು ತೊರೆಯಲು ಇದೂ ಕಾರಣ ಇರಬಹುದು’ ಎಂದರು.
ವನ್ಯಜೀವಿ ರಾಯಭಾರಿ ಅನಿಲ್ ಕುಂಬ್ಳೆ, ‘ವನ್ಯಜೀವಿಗಳು ಕಾಡಿನಿಂದ ಹೊರಗೆ ಬರುವುದಕ್ಕೂ, ಸಫಾರಿಗೂ ಸಂಬಂಧವಿಲ್ಲ, ಸಫಾರಿಗೆ ಕೇವಲ ಶೇ 8ರಷ್ಟು ಅರಣ್ಯ ಪ್ರದೇಶ ಬಳಕೆ ಆಗುತ್ತಿಲ್ಲ. ಸ್ಥಳೀಯರ ಜೀವನೋಪಾಯವೂ ಇದರಲ್ಲಿ ಅಡಗಿದೆ. ಹೀಗಾಗಿ ಪುನರ್ ಪರಿಶೀಲಿಸಲು ಕೋರಲಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.