ADVERTISEMENT

ಗ್ಯಾರಂಟಿಗೆ ಪರಿಶಿಷ್ಟರ ಹಣ: 2025–26ನೇ ಸಾಲಿನಲ್ಲಿ ₹11,896.84 ಕೋಟಿ ವರ್ಗಾವಣೆ

ರಾಜೇಶ್ ರೈ ಚಟ್ಲ
Published 27 ಜುಲೈ 2025, 23:54 IST
Last Updated 27 ಜುಲೈ 2025, 23:54 IST
   

ಬೆಂಗಳೂರು: ಪರಿಶಿಷ್ಟ ಜಾತಿ ಉಪಯೋಜನೆ (ಎಸ್‌ಸಿಎಸ್‌ಪಿ) ಮತ್ತು ಟಿಎಸ್‌ಪಿ (ಬುಡಕಟ್ಟು ಉಪಯೋಜನೆ) ಅಡಿ ಪರಿಶಿಷ್ಟರ ಅಭಿವೃದ್ಧಿಗೆ ಪ್ರಸಕ್ತ ಸಾಲಿನಲ್ಲಿ (2025–26) ಒದಗಿಸಿದ ಒಟ್ಟು ₹42,017.51 ಕೋಟಿ ಅನುದಾನದಲ್ಲಿ ₹11,896.84 ಕೋಟಿಯನ್ನು ಪಂಚ ‘ಗ್ಯಾರಂಟಿ’ ಯೋಜನೆಗಳ ಅನುಷ್ಠಾನಕ್ಕೆ ಹಂಚಿಕೆ ಮಾಡಲು ರಾಜ್ಯ ಸರ್ಕಾರ ಮುಂದಾಗಿದೆ.

ಸಮಾಜ ಕಲ್ಯಾಣ ಸಚಿವ ಎಚ್‌.ಸಿ.ಮಹದೇವಪ್ಪ ಅವರ ಅಧ್ಯಕ್ಷತೆಯಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾರ್ಯಕ್ರಮಗಳ 2025–26ನೇ ಸಾಲಿನ ಕ್ರಿಯಾ ಯೋಜನೆಯ ಬಗ್ಗೆನೋಡಲ್‌ ಏಜೆನ್ಸಿಗಳ ಸಭೆ ಇತ್ತೀಚೆಗೆ ನಡೆದಿದೆ. ಕ್ರಿಯಾ ಯೋಜನೆಯಲ್ಲಿ ‘ಗ್ಯಾರಂಟಿ’ ಯೋಜನೆಗಳಿಗೆ ಅನುದಾನ ಒದಗಿಸಿದ ಮಾಹಿತಿಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಆಗಸ್ಟ್‌ 5ರಂದು ನಡೆಯಲಿರುವ ಎಸ್‌ಸಿ, ಎಸ್‌ಟಿ ರಾಜ್ಯ ಅಭಿವೃದ್ಧಿಪರಿಷತ್‌ ‌ಸಭೆಯಲ್ಲಿ ಈ ಕ್ರಿಯಾಯೋಜನೆಗೆ ಅನುಮೋದನೆ ನೀಡುವ ಕುರಿತು ಚರ್ಚೆ ನಡೆಯಲಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಮೂಲಗಳು ತಿಳಿಸಿವೆ. 

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ದಲ್ಲಿ ‘ಗ್ಯಾರಂಟಿ’ ಯೋಜನೆಗಳಿಗೆ 2023–24ನೇ ಸಾಲಿನಲ್ಲಿ ₹11,114 ಕೋಟಿ, 2024–25ನೇ ಸಾಲಿನಲ್ಲಿ ₹14,282.38 ಕೋಟಿಯನ್ನು ಸರ್ಕಾರ ಒದಗಿಸಿತ್ತು. ಪರಿಶಿಷ್ಟರ ಕಾರ್ಯಕ್ರಮಗಳಿಗೆ ಒದಗಿಸಿದ ಅನುದಾನವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಬಳಕೆ ಮಾಡಿರುವ ವಿಚಾರವು ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಮಾತಿನ ಜಟಾಪಟಿಗೆ ವಸ್ತುವಾಗಿತ್ತು.

ADVERTISEMENT

ಈ ಬಾರಿ ರಾಜ್ಯದ ಒಟ್ಟು ಅಭಿವೃದ್ಧಿ ಬಜೆಟ್‌ ಮೊತ್ತ ₹1.69 ಲಕ್ಷ ಕೋಟಿ. ಅದರಲ್ಲಿ ಶೇ 24.10 ಅನುದಾನ ಮತ್ತು ಹಿಂದಿನ ವರ್ಷಗಳಲ್ಲಿ ಬಳಕೆಯಾಗದ ₹72.38 ಕೋಟಿಯನ್ನು ಸೇರಿಸಿ ಒಟ್ಟು ₹42,017.51 ಕೋಟಿಯನ್ನು ಎಸ್‌ಸಿಎಸ್‌ಪಿ ಟಿಎಸ್‌ಪಿ ಅಡಿ ಈ ವರ್ಷ ಹಂಚಿಕೆ ಮಾಡಲಾಗಿದೆ.

ಸರ್ಕಾರದ ಮಹತ್ವಾಕಾಂಕ್ಷಿ ‘ಶಕ್ತಿ’ (ಸಾರಿಗೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ) ಯೋಜನೆಯಡಿ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ ₹1,060 ಕೋಟಿ (ಶೇ 20) ಮತ್ತು ಟಿಎಸ್‌ಪಿ ಅಡಿ ₹477 ಕೋಟಿ (ಶೇ 9) ಒದಗಿಸಲಾಗಿದೆ. ಶಕ್ತಿ ಯೋಜನೆಯಲ್ಲಿ ಪರಿಶಿಷ್ಟ ಫಲಾನುಭವಿಗಳ ನಿಖರ ಸಂಖ್ಯೆ ಲಭ್ಯ ಇಲ್ಲದಿರುವ ಕಾರಣ ಈಮೊತ್ತವನ್ನು ಶೇ 24.10ಕ್ಕೆ ಸೀಮಿತಗೊಳಿಸಲು ಕ್ರಿಯಾ ಯೋಜನೆ ಯಲ್ಲಿ ಪ್ರಸ್ತಾಪಿಸಲಾಗಿದೆ. ಅಲ್ಲದೆ, ಎಸ್‌ಸಿಎಸ್‌ಪಿ ಅಡಿ ₹151.05 ಕೋಟಿ ಮತ್ತು ಟಿಎಸ್‌ಪಿ ಅಡಿ ₹108.65 ಕೋಟಿ ಸೇರಿ ಒಟ್ಟು ₹259.70 ಕೋಟಿ ಹಿಂಪಡೆದು ಬೇಡಿಕೆ ಇರುವ ಕಾರ್ಯಕ್ರಮಗಳಿಗೆ ಮರು ಹಂಚಿಕೆ ಮಾಡ ಬಹುದು ಎಂದೂ ವಿವರಿಸಲಾಗಿದೆ.

ಇಂಧನ ಇಲಾಖೆಯ ‘ಗೃಹ ಜ್ಯೋತಿ’ ಯೋಜನೆಗೆ ವಿದ್ಯುತ್‌ ಪೂರೈಕೆ ವೆಚ್ಚ ಸೇರಿ ಬಜೆಟ್‌ನಲ್ಲಿ ಒಟ್ಟು ₹10,100 ಕೋಟಿ ಒದಗಿಸಲಾಗಿದ್ದು, ಮಾಸಿಕ 200 ಯೂನಿಟ್‌ಗಳಿಗಿಂತ ಕಡಿಮೆ ವಿದ್ಯುತ್‌ ಬಳಸುವ ಎಲ್ಲ ಕುಟುಂಬಗಳಿಗೆ ಉಚಿತ ವಿದ್ಯುತ್‌ ಸೌಲಭ್ಯ ಒದಗಿಸಲಾಗುತ್ತಿದೆ. ಈ ಯೋಜನೆಗೆ ಎಸ್‌ಸಿಎಸ್‌ಪಿ ಅಡಿ ₹1,818 ಕೋಟಿ ಮತ್ತು ಟಿಎಸ್‌ಪಿ ಅಡಿ ₹808 ಕೋಟಿ ಹಂಚಿಕೆ ಮಾಡಲಾಗಿದೆ. 2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ 21.78 ಲಕ್ಷ ಎಸ್‌ಸಿ, 8.76 ಲಕ್ಷ ಎಸ್‌ಟಿ ಕುಟುಂಬಗಳಿವೆ. 

‘ಅನ್ನ ಭಾಗ್ಯ’ಕ್ಕೆ ಬಜೆಟ್‌ನಲ್ಲಿ ₹6,426 ಕೋಟಿ ಒದಗಿಸಲಾಗಿದೆ. ಅದರಲ್ಲಿ ಎಸ್‌ಸಿಎಸ್‌ಪಿಯಿಂದ ₹1,156.68 ಕೋಟಿ, ಟಿಎಸ್‌ಪಿಯಿಂದ ₹514.08 ಕೋಟಿ ಹಂಚಿಕೆ ಮಾಡಲು ಪ್ರಸ್ತಾಪಿಸ
ಲಾಗಿದೆ. ಆಹಾರ ಇಲಾಖೆಯ ಮಾಹಿತಿ ಪ್ರಕಾರ 60,44,090 ಎಸ್‌ಸಿ ಮತ್ತು 26,97,261 ಎಸ್‌ಟಿ ಫಲಾನುಭವಿಗಳಿದ್ದಾರೆ. ಪ್ರತಿ ಫಲಾನುಭವಿಗೆ ಪ್ರತಿ ತಿಂಗಳಿಗೆ ₹130ರಂತೆ (ಒಂದು ಕಿಲೋ ಅಕ್ಕಿಗೆ ₹26ರಂತೆ 5 ಕಿಲೋದ ಮೊತ್ತ) ಖಾತೆಗೆ ಜಮೆ ಮಾಡಲು ಒಂದು ವರ್ಷಕ್ಕೆ ₹1,560 ಅಗತ್ಯವಿದೆ’ ಎಂದು ಅಂದಾಜಿಸಲಾಗಿದೆ.

ಎಸ್‌ಸಿ ಫಲಾನುಭವಿಗಳಿಗೆ ₹942.88 ಕೋಟಿ, ಎಸ್‌ಟಿ ಫಲಾನುಭವಿಗಳಿಗೆ ₹420.77 ಕೋಟಿ ಅನುದಾನ ಅಗತ್ಯವಿದೆ. ಹಿಂದಿನ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ ₹162.91 ಕೋಟಿ ಮತ್ತು ಟಿಎಸ್‌ಪಿ ಅಡಿ ₹67.94 ಕೋಟಿ ಸೇರಿ ಒಟ್ಟು ₹230.85 ಕೋಟಿ ಉಳಿದಿದೆ. ಪ್ರಸಕ್ತ ಸಾಲಿನಲ್ಲಿ ಡಿಬಿಟಿ ಯೋಜನೆಗೆ ಒದಗಿಸಿದ ಹಣದಲ್ಲಿ ₹537.96 ಕೋಟಿ (ಎಸ್‌ಸಿಎಸ್‌ಪಿ ₹376.71 ಕೋಟಿ, ಟಿಎಸ್‌ಪಿ ₹160.25 ಕೋಟಿ) ಉಳಿಕೆ ಆಗಬಹುದು ಎಂದೂ ಅಂದಾಜಿಸಲಾಗಿದೆ.

‘ಗ್ಯಾರಂಟಿ’ಗಳ ಪೈಕಿ ‘ಯುವ ನಿಧಿ’ ಯೋಜನೆಗೆ ಎಸ್‌ಸಿಎಸ್‌ಪಿ ಅಡಿ ₹114 ಕೋಟಿ, ಟಿಎಸ್‌‍ಪಿ ಅಡಿ ₹48 ಕೋಟಿ ಹಂಚಿಕೆ ಮಾಡಲಾಗಿದೆ. ಈ ಯೋಜನೆಯಡಿ 2024–25ನೇ ಸಾಲಿನಲ್ಲಿ 28,234 ಎಸ್‌ಸಿ, 12,308 ಎಸ್‌ಟಿ ಫಲಾನುಭವಿಗಳು ಹಣ ಪಡೆದಿದ್ದಾರೆ. ಕೌಶಲ ಅಭಿವೃದ್ಧಿ ಇಲಾಖೆ ನೀಡಿರುವ ಫಲಾನುಭವಿಗಳ ವಿವರದ ಪ್ರಕಾರ ಪ್ರಸಕ್ತ ಸಾಲಿನಲ್ಲಿ ಎಸ್‌ಸಿಎಸ್‌ಪಿ ಅಡಿ ₹101 ಕೋಟಿ, ಟಿಎಸ್‌ಪಿ ಅಡಿ ₹44 ಕೋಟಿ ಅನುದಾನ ಅಗತ್ಯವಿದೆ. ಉಳಿಕೆ ಮೊತ್ತವನ್ನು ಹಿಂಪಡೆದು, ಬೇಡಿಕೆ ಇರುವ ಕಾರ್ಯಕ್ರಮಗಳಿಗೆ ಮರುಹಂಚಿಕೆ ಮಾಡಬಹುದು ಎಂದೂ ಕ್ರಿಯಾ ಯೋಜನೆಯಲ್ಲಿ ಪ್ರಸ್ತಾಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಚಿವ ಎಚ್‌.ಸಿ. ಮಹದೇವಪ್ಪ ಅವರಿಗೆ ಕರೆ ಮಾಡಿದರೂ ಸಂಪರ್ಕಕ್ಕೆ ಸಿಗಲಿಲ್ಲ.

ಅತಿ ಹೆಚ್ಚು ಅನುದಾನ: 5 ಯೋಜನೆಗಳಲ್ಲಿ 4 ‘ಗ್ಯಾರಂಟಿ’

ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಪ್ರಸಕ್ತ ಸಾಲಿನಲ್ಲಿ ಅತಿ ಹೆಚ್ಚು ಅನುದಾನ ನೀಡಿರುವ ಐದು ಯೋಜನೆಗಳ ಪೈಕಿ ನಾಲ್ಕು ‘ಗ್ಯಾರಂಟಿ’ ಯೋಜನೆಗಳು. ಅದರಲ್ಲೂ ಗೃಹಲಕ್ಷಿ ಮೊದಲ ಸ್ಥಾನದಲ್ಲಿದ್ದು, ನಂತರ ಸ್ಥಾನದಲ್ಲಿ ಗೃಹ ಜ್ಯೋತಿ, ಅನ್ನಭಾಗ್ಯ, ಶಕ್ತಿ ಇವೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಡಿ ಮೀಸಲಿಟ್ಟ ಒಟ್ಟು ಅನುದಾನದಲ್ಲಿ ಅತೀ ಹೆಚ್ಚು ₹8,101.17 ಕೋಟಿಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಹಂಚಿಕೆ ಮಾಡಲಾಗಿದೆ. ಅದರಲ್ಲಿ ₹7,438.08 ಕೋಟಿಯನ್ನು ‘ಗೃಹ ಲಕ್ಷ್ಮಿ’ಗೆ ನೀಡಲಾಗಿದೆ. ಗೃಹ ಲಕ್ಷ್ಮಿಗೆ ಬಜೆಟ್‌ನಲ್ಲಿ ₹28,608.40 ಕೋಟಿ ಒದಗಿಸಲಾಗಿದ್ದು, ಅದರಲ್ಲಿ ಎಸ್‌ಸಿಎಸ್‌ಪಿಯಿಂದ ₹5,364 ಕೋಟಿ, ಟಿಎಸ್‌ಪಿಯಿಂದ ₹2,074.08 ಕೋಟಿ ನೀಡಲು
ಪ್ರಸ್ತಾಪಿಸಲಾಗಿದೆ.

ಎಸ್‌ಸಿಎಸ್‌ಪಿ ಅಡಿ ₹507.49 ಕೋಟಿ ಮತ್ತು ಟಿಎಸ್‌ಪಿ ಅಡಿ ₹400.05 ಕೋಟಿ ಸೇರಿ ಒಟ್ಟು ₹907.54 ಕೋಟಿ ಹಳೆ ಬಾಕಿ ಉಳಿದಿದೆ. ಅದನ್ನೂ ಒಳಗೊಂಡು ಪ್ರಸಕ್ತ ಸಾಲಿನಲ್ಲಿ ₹8,345.62 ಕೋಟಿ ಲಭ್ಯವಿದೆ. 23,05,619 ಎಸ್‌ಸಿ, 9,01,122 ಎಸ್‌ಟಿ ಫಲಾನುಭವಿಗಳು ಇದ್ದಾರೆಂದು ಇಲಾಖೆ ಅಂದಾಜಿಸಿದ್ದು, ಈ ಅಂಕಿಅಂಶದ ಆಧಾರದಲ್ಲಿ ₹1,290.79 ಕೋಟಿ ಉಳಿಕೆ ಆಗಬಹುದು ಎಂದೂ ಅಂದಾಜಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.