ADVERTISEMENT

Bus Strike | ಸಾರಿಗೆ ಮುಷ್ಕರ: ಬಹುತೇಕ ಯಶಸ್ವಿ

ಕೆಲವೆಡೆ ಬಸ್‌ಗಳಿಗೆ ಕಲ್ಲೂ ತೂರಾಟ | ಪರೀಕ್ಷೆ ಮುಂದೂಡಿದ ಕೊಪ್ಪಳ, ತುಮಕೂರು ವಿ.ವಿ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 22:30 IST
Last Updated 5 ಆಗಸ್ಟ್ 2025, 22:30 IST

ವೃದ್ಧೆಯ ಅನಾರೋಗ್ಯ ಕಾರಣ ಕಾರವಾರಕ್ಕೆ ಹೋಗಿ ಮರಳಿ ಭಾಲ್ಕಿಗೆ ತೆರಳಬೇಕಿದ್ದ ಕುಟುಂಬವೊಂದು ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಇಲ್ಲದೆ ಪರದಾಡಿತು. ಪ್ರಜಾವಾಣಿ ಚಿತ್ರ :ತಾಜುದ್ದೀನ್‌ ಆಜಾದ್‌
ವೃದ್ಧೆಯ ಅನಾರೋಗ್ಯ ಕಾರಣ ಕಾರವಾರಕ್ಕೆ ಹೋಗಿ ಮರಳಿ ಭಾಲ್ಕಿಗೆ ತೆರಳಬೇಕಿದ್ದ ಕುಟುಂಬವೊಂದು ಸರ್ಕಾರಿ ಸಾರಿಗೆ ನೌಕರರ ಮುಷ್ಕರದ ಪರಿಣಾಮ ಕಲಬುರಗಿಯ ಕೇಂದ್ರ ಬಸ್‌ ನಿಲ್ದಾಣದಲ್ಲಿ ಬಸ್‌ ಇಲ್ಲದೆ ಪರದಾಡಿತು. ಪ್ರಜಾವಾಣಿ ಚಿತ್ರ :ತಾಜುದ್ದೀನ್‌ ಆಜಾದ್‌   

ಬೆಂಗಳೂರು: ಸಾರಿಗೆ ನೌಕರರ ಮುಷ್ಕರಕ್ಕೆ ಮಂಗಳವಾರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕೋಲಾರ, ಹುಬ್ಬಳ್ಳಿಯ ಕೆಲವೆಡೆ ಬಸ್‌ಗಳಿಗೆ ಕಲ್ಲು ತೂರಲಾಗಿದ್ದು, ಗಾಜುಗಳು ಒಡೆದಿವೆ. ಕೊಪ್ಪಳದಲ್ಲಿ ಪ್ರತಿ ಬಸ್‌ಗೆ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಭದ್ರತೆ ಒದಗಿಸಲಾಗಿತ್ತು.

ಬಸ್‌ ಮುಷ್ಕರ ಹಿನ್ನೆಲೆಯಲ್ಲಿ ಕೊಪ್ಪಳ ಮತ್ತು ತುಮಕೂರು ವಿಶ್ವವಿದ್ಯಾಲಯವು ಮಂಗಳವಾರ ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಿತು.

ಸಾರಿಗೆ ಮುಷ್ಕರ: ಮಿಶ್ರ ಪ್ರತಿಕ್ರಿಯೆ

ADVERTISEMENT

ಮೈಸೂರು: ಮೈಸೂರು ಭಾಗದ ಜಿಲ್ಲೆಗಳಲ್ಲಿ ಸಾರಿಗೆ ನೌಕರರ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮಂಡ್ಯ ಮತ್ತು ಹಾಸನ ಜಿಲ್ಲೆಯಲ್ಲಿ ಸರ್ಕಾರಿ ಬಸ್‌ಗಳು ರಸ್ತೆಗಿಳಿಯಲಿಲ್ಲ.

ಈ ಜಿಲ್ಲೆಗಳಲ್ಲಿ ಸಂಪೂರ್ಣವಾಗಿ ಖಾಸಗಿ ಬಸ್‌ಗಳ ವ್ಯವಸ್ಥೆ ಮಾಡಲಾಗಿತ್ತು. ಉಳಿದ ಜಿಲ್ಲೆಗಳಲ್ಲಿ ಸರ್ಕಾರಿ, ಖಾಸಗಿ ಬಸ್‌ಗಳು ಸಂಚರಿಸಿದವು. ಸರ್ಕಾರಿ ನೌಕರರು, ವಿದ್ಯಾರ್ಥಿಗಳಿಗೆ ತೊಂದರೆಯಾಯಿತು. ಕೆಲವೆಡೆ ಶಾಲೆ, ಕಾಲೇಜುಗಳು ಮಧ್ಯಾಹ್ನದ ಬಳಿಕ ರಜೆ ನೀಡಿದ್ದವು.

ಬಸ್‌ಗೆ ಕಲ್ಲು, ಭದ್ರತೆ: ಪರೀಕ್ಷೆ ಮುಂದೂಡಿಕೆ

ಕಲಬುರಗಿ: ಕೊಪ್ಪಳ ಜಿಲ್ಲೆಯ ಯಲಬುರ್ಗಾದಲ್ಲಿ ಸೋಮವಾರ ರಾತ್ರಿ ಬೆಂಗಳೂರಿಗೆ ಹೊರಟಿದ್ದ ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ್ದು ಬಿಟ್ಟರೆ, ಕಲ್ಯಾಣ ಕರ್ನಾಟಕ ವ್ಯಾಪ್ತಿಯಲ್ಲಿ ಸಾರಿಗೆ ನೌಕರರ ಮುಷ್ಕರ ಬಹತೇಕ ಶಾಂತಿಯುತವಾಗಿತ್ತು.

ಕೊಪ್ಪಳ ಜಿಲ್ಲೆಯ ಯಲಬುರ್ಗಾದಿಂದ ಬೆಂಗಳೂರಿಗೆ ಹೊರಟಿದ್ದ ಬಸ್‌ಗೆ ಕುಕನೂರು ಸಮೀಪ ಕಿಡಿಗೇಡಿಗಳು ಕಲ್ಲು ತೂರಿದ್ದರಿಂದ ಬಸ್‌ ಗಾಜು ಒಡೆದಿದೆ. ಮುಂಜಾಗ್ರತೆಯಾಗಿ ಪ್ರತಿ ಬಸ್‌ನಲ್ಲಿ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಭದ್ರತೆ ನೀಡಲಾಯಿತು.

ಬಸ್‌ಗಳ ಸೇವೆ ಇಲ್ಲದ್ದರಿಂದ ಮಂಗಳವಾರ ನಿಗದಿಯಾಗಿದ್ದ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯ ಎರಡನೇ ಸೆಮಿಸ್ಟರ್‌ ಪರೀಕ್ಷೆ ಮುಂದೂಡಲಾಯಿತು.

ಹುಬ್ಬಳ್ಳಿ, ಕೋಲಾರ: ಬಸ್‌ಗಳಿಗೆ ಕಲ್ಲು, ಹಾನಿ

ಹುಬ್ಬಳ್ಳಿ: ಧಾರವಾಡ, ಬಾಗಲಕೋಟೆ, ವಿಜಯಪುರ ಸೇರಿ ಬಹುತೇಕ ಜಿಲ್ಲೆಗಳಲ್ಲಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬಹುತೇಕ ಮಂದಿ ಖಾಸಗಿ ಬಸ್‌ಗಳಲ್ಲಿ ಸಂಚರಿಸಿದರು.

ಹುಬ್ಬಳ್ಳಿಯಿಂದ ಹೊಸಪೇಟೆಗೆ ಹೊರಟಿದ್ದ ಬಸ್‌ಗೆ ಗದಗ ಬಳಿ ಮುಖಕ್ಕೆ ಮಾಸ್ಕ್ ಧರಿಸಿದ್ದ ಕಿಡಿಗೇಡಿಗಳು  ಕಲ್ಲು ತೂರಿದರು. ವಿದ್ಯಾನಗರದ ಗ್ರಾಮಾಂತರ ಘಟಕಕ್ಕೆ ಸೇರಿದ ಒಂದು ಬಸ್‌ಗೆ ಕಿಡಿಗೇಡಿಗಳು ಕಲ್ಲು ಎಸೆದು, ಗಾಜು ಜಖಂಗೊಳಿಸಿದರು.

ಕೋಲಾರ ವರದಿ: ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಎರಡು ಕೆಎಸ್‌ಆರ್‌ಟಿಸಿ ಬಸ್‌ಗಳ ಮೇಲೆ ಕಿಡಿಗೇಡಿಗಳ ಗುಂಪೊಂದು ಕಲ್ಲು ಎಸೆದಿದ್ದು, ಕಿಟಕಿಯ ಗಾಜುಗಳು ಪುಡಿಯಾಗಿವೆ. 

ಕೋಲಾರ ತಾಲ್ಲೂಕಿನ ಹರಟಿ ಗೇಟ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಕೆಲವರು ಬೇತಮಂಗಲದಿಂದ ಕೋಲಾರದತ್ತ ಹೊರಟಿದ್ದ ಬಸ್‌ ಮೇಲೆ ಕಲ್ಲು ತೂರಿದರು. ಚಾಲಕನ ಮುಂದಿನ ಗಾಜು ಒಡೆದಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ದ.ಕ–ಉಡುಪಿಯಲ್ಲಿ ಎಲ್ಲ ಬಸ್‌ ಸಂಚಾರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಬಸ್ ನಿಲ್ದಾಣಗಳಲ್ಲಿ ಖಾಸಗಿ ಬಸ್‌, ಮಿನಿ ಬಸ್, ಜೀಪುಗಳನ್ನು ನಿಲ್ಲಿಸಲು ಅವಕಾಶ ನೀಡಲಾಗಿತ್ತು. ‌ಅವುಗಳಲ್ಲಿ ಜನ ಪ್ರಯಾಣ ಮಾಡಿದರು. 

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮುಷ್ಕರ ಪರಿಣಾಮ ಬೀರಲಿಲ್ಲ. ಉಡುಪಿ ಹಾಗೂ ಕುಂದಾಪುರ ಬಸ್‌ನಿಲ್ದಾಣಗಳಲ್ಲಿ ಬೆಳಿಗ್ಗೆ 7.30ರ ವರೆಗೆ ಬಸ್‌ಗಳು ಸಂಚಾರ ನಡೆಸಲಿಲ್ಲ.ನಂತರ ಸಹಜ ಸ್ಥಿತಿಗೆ ಬಂತು ಎಂದು ಅಧಿಕಾರಿಗಳು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.