ಮೈಸೂರು: ರಾಜ್ಯದ ಆರು ವಿಶ್ವವಿದ್ಯಾಲಯಗಳಿಗೆ ಪಿಂಚಣಿ ಪಾವತಿಗಾಗಿ ಅನುದಾನ ಬಿಡುಗಡೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಶಿಕ್ಷಣ ಇಲಾಖೆಯ ಉನ್ನತ ಶಿಕ್ಷಣ ವಲಯದಡಿ ಬರುವ ವಿ.ವಿಗಳಿಗೆ ರಾಜ್ಯ ವಲಯ ಯೋಜನೆಗಳಡಿ ಅನುದಾನ ಒದಗಿಸಲಾಗಿದೆ. ಹೆಚ್ಚುವರಿ ಅನುದಾನ ಒದಗಿಸುವಂತೆ ಈ ವಿ.ವಿಗಳಿಂದ ಸಲ್ಲಿಕೆಯಾಗಿದ್ದ ಮನವಿಯನ್ನು ಪುರಸ್ಕರಿಸಲಾಗಿದೆ. 2025–26ನೇ ಸಾಲಿನ ಪೂರಕ ಬಜೆಟ್‌ನಲ್ಲಿ (2ನೇ ಕಂತು) ಕೆಲವು ಷರತ್ತುಗಳಿಗೆ ಒಳಪಟ್ಟು ಬಿಡುಗಡೆ ಮಾಡಲಾಗಿದೆ.
ಮೈಸೂರು ವಿ.ವಿ. ಹಾಗೂ ಕರ್ನಾಟಕ ವಿ.ವಿಗೆ ತಲಾ ₹ 25 ಕೋಟಿ, ಬೆಂಗಳೂರು ವಿ.ವಿಗೆ ₹ 5 ಕೋಟಿ, ಗುಲ್ಬರ್ಗ, ಮಂಗಳೂರು ಹಾಗೂ ಕುವೆಂಪು ವಿಶ್ವವಿದ್ಯಾಲಯಗಳಿಗೆ ತಲಾ ₹ 15 ಕೋಟಿಯನ್ನು ಸಹಾಯಾನುಧಾನ ಮತ್ತು ವಿಶ್ರಾಂತಿ ವೇತನಗಗಳ ಉಪಶೀರ್ಷಿಕೆಯಲ್ಲಿ ಬಿಡುಗಡೆ ಮಾಡಲಾಗಿದೆ.
ಮೈಸೂರು ವಿ.ವಿ ಸೇರಿದಂತೆ ಹಲವು ವಿಶ್ವವಿದ್ಯಾಲಯಗಳಲ್ಲಿ ಪಿಂಚಣಿ ಕೊಡುವುದಕ್ಕೂ ಆರ್ಥಿಕ ಮುಗ್ಗಟ್ಟು ಉಂಟಾಗಿರುವ ಬಗ್ಗೆ ಬಹಳ ಚರ್ಚೆಯಾಗಿತ್ತು. ಈ ಕಾರಣದಿಂದ ಸರ್ಕಾರ ಅನುದಾನದ ಬಲ ತುಂಬಿದೆ.
ಪ್ರಸಕ್ತ ಸಾಲಿನಲ್ಲಿ ವಿಶ್ರಾಂತಿ ವೇತನಕ್ಕೆ ಪುನಃ ಹೆಚ್ಚುವರಿ ಅನುದಾನ ಕೋರಬಾರದು. ಪಿಂಚಣಿ ಪಾವತಿಯ ಉದ್ದೇಶಕ್ಕೆ ಮಾತ್ರವೇ ಬಳಸಬೇಕು. ಹೊಸ ತಾಂತ್ರಿಕ ಕೋರ್ಸ್ ಪ್ರಾರಂಭಿಸಿ ವಿದ್ಯಾರ್ಥಿಗಳ ದಾಖಲಾತಿ ಹೆಚ್ಚಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ನೀಡಬೇಕು. ಅನುಪಯುಕ್ತ ಕಟ್ಟಡ ಬಾಡಿಗೆಗೆ ಕೊಡಬೇಕು. ಕಡಿಮೆ ದಾಖಲಾತಿ ಇರುವ ಕೋರ್ಸ್ ಮುಚ್ಚಬೇಕು. ಸೌರವಿದ್ಯುತ್ ಚಾವಣಿ ಅಳವಡಿಸಿಕೊಳ್ಳಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂಬಿತ್ಯಾದಿ ಷರತ್ತುಗಳನ್ನು ವಿಶ್ವವಿದ್ಯಾಲಯಗಳಿಗೆ ವಿಧಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.