ADVERTISEMENT

ಕೆಎಎಸ್‌ ಹುದ್ದೆ ಭರ್ತಿಗೆ ಗ್ರಹಣ, ಗೆ.ಪ್ರೊಬೇಷನರಿ 350ಕ್ಕೂ ಹೆಚ್ಚು ಹುದ್ದೆ ಖಾಲಿ

ರಾಜೇಶ್ ರೈ ಚಟ್ಲ
Published 24 ಅಕ್ಟೋಬರ್ 2022, 21:15 IST
Last Updated 24 ಅಕ್ಟೋಬರ್ 2022, 21:15 IST
   

ಬೆಂಗಳೂರು: ಕೆಎಎಸ್‌ (ಕಿರಿಯ ಶ್ರೇಣಿ) ವೃಂದದ ನೇರ ನೇಮಕಾತಿ ಕೋಟಾದಡಿ 40 ಹುದ್ದೆಗಳು ಸೇರಿದಂತೆ ರಾಜ್ಯ ಸರ್ಕಾರದ ನಾನಾ ಇಲಾಖೆಗಳಲ್ಲಿ ಗೆಜೆಟೆಡ್‌ ಪ್ರೊಬೇಷನರಿ (ಗ್ರೂಪ್‌ ‘ಎ’ ಮತ್ತು ‘ಬಿ’) 350ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇದ್ದರೂ, ಈ ಹುದ್ದೆಗಳ ಭರ್ತಿಗೆ ಆಡಳಿತ ಇಲಾಖೆಗಳು ಆಸಕ್ತಿ ತೋರಿಸುತ್ತಿಲ್ಲ ಎಂದು ಉದ್ಯೋಗಾಕಾಂಕ್ಷಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಖಾಲಿ ಹುದ್ದೆಗಳ ಕುರಿತು 3–4 ಇಲಾಖೆಗಳು ಮಾತ್ರ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ (ಡಿಪಿಎ ಆರ್‌) ಮಾಹಿತಿ ನೀಡಿವೆ. ನಾಲ್ಕು ಬಾರಿ ಜ್ಞಾಪನಾ ಪತ್ರ ಬರೆದರೂ ಇಲಾಖೆಗಳು ಮಾಹಿತಿಯನ್ನೇ ನೀಡಿಲ್ಲ. ಹೀಗಾಗಿ, ನೇಮಕಾತಿಗಾಗಿ ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಲು ಡಿಪಿಎಆರ್‌ಗೆ ಸಾಧ್ಯ ಆಗಿಲ್ಲ.

ಮೂಲ ವೃಂದದ ಮತ್ತು ಹೈ–ಕ ನಿಯಮದ (371 ಜೆ) ಅನ್ವಯ ಲಭ್ಯವಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು‌, ಈ ಹುದ್ದೆಗಳ ವರ್ಗೀಕರಣ ವಿವರಗಳನ್ನು ಒದಗಿಸುವಂತೆ ಎಲ್ಲ ಇಲಾಖೆಗಳಿಗೆ 2020ರ ಫೆ. 17, ನ. 23, ಡಿ. 30, 2021ರ ಸೆ. 9ರಂದು ಪತ್ರ ಬರೆಯಲಾಗಿದೆ ಎಂದು ಡಿಪಿಎಆರ್‌ ಮೂಲಗಳು ‘ಪ್ರಜಾವಾಣಿ‍’ಗೆ ತಿಳಿಸಿವೆ.

ADVERTISEMENT

‘ಗೆಜೆಟೆಡ್‌ ಪ್ರೊಬೇಷನರಿ ಹುದ್ದೆಗಳ ನೇರ ನೇಮಕಾತಿಯಲ್ಲಿ ಅಂಗವಿಕಲರ ಶೇ 3 ಮೀಸಲಾತಿಯನ್ನು ಶೇ 4ಕ್ಕೆ ಹೆಚ್ಚಿಸಿ 2020ರ ಸೆ. 25ರಂದು ಸರ್ಕಾರ ಆದೇಶ ಹೊರಡಿಸಿದೆ. ತೃತೀಯ ಲಿಂಗದ ಅಭ್ಯರ್ಥಿಗಳಿಗೆ ಶೇ 1ರಷ್ಟು ಮೀಸಲಾತಿ ಕಲ್ಪಿಸಿ 2021ರ ಜುಲೈ 14 ರಂದು ಆದೇಶ ಹೊರಡಿಸಲಾಗಿದೆ. ಅಂಗವಿಕಲರಿಗೆ ಮೀಸಲಾತಿಯನ್ನು ಶೇ 4ರಷ್ಟು ಹೆಚ್ಚಿಸುವ ಕುರಿತಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾ ಖೆಯ ಅಧಿಸೂಚನೆಯಂತೆ ಆಯಾ ಇಲಾಖೆಗಳು ಹುದ್ದೆಗಳನ್ನು ಗುರುತಿಸಿ, ಆರ್ಥಿಕ ಇಲಾಖೆಯ ಸಹಮತಿ ಪಡೆದು ಪ್ರಸ್ತಾವನೆ ಸಲ್ಲಿಸಬೇಕು’ ಎಂದು ವಿವಿಧ ಇಲಾಖೆಗಳಿಗೆ ಡಿಪಿಎಆರ್‌ ಕಾರ್ಯ ದರ್ಶಿ ಪಿ. ಹೇಮಲತಾ ಈಗಾಗಲೇ ಸೂಚಿಸಿದ್ದಾರೆ.

‘ಹೆಚ್ಚಳಗೊಳಿಸಿದ ಶೇ 1ರಷ್ಟು ಅಂಗವಿಕಲ ಹುದ್ದೆಯನ್ನು ಯಾರಿಗೆ (ಯಾವ ವೈಕಲ್ಯಕ್ಕೆ) ಮೀಸಲಿಡಬೇಕು ಎಂಬ ಬಗ್ಗೆ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಸೂಚನೆ ಹೊರಡಿಸಬೇಕು. ಆದರೆ, ಇಲಾಖೆಗಳಿಂದ ಈ ಮಾಹಿತಿ ಬಂದಿಲ್ಲ. ಈವರೆಗೆ 40 ಹುದ್ದೆಗಳ ಭರ್ತಿಗೆ ಮಾತ್ರ ಪ್ರಸ್ತಾವನೆ ಬಂದಿದೆ. ಕನಿಷ್ಠ 300 ಹುದ್ದೆಗಳಿಗೆ ನೇಮಕಾತಿಗೆ ಕೆಪಿಎಸ್‌ಸಿ ಪ್ರಸ್ತಾವನೆ ಸಲ್ಲಿಸುವ ಉದ್ದೇಶದಿಂದ ಇಲಾಖೆಗಳಿಂದ ಮಾಹಿತಿಗೆ ನಿರೀಕ್ಷಿಸಲಾಗುತ್ತಿದೆ’ ಎಂದೂ ಮೂಲಗಳು ತಿಳಿಸಿವೆ.

‘2011, 2014, 2015ನೇ ಸಾಲಿನ ನೇಮಕಾತಿಯಲ್ಲಿ ಆಯ್ಕೆಯಾದವರಲ್ಲಿ 180ಕ್ಕೂ ಹೆಚ್ಚು ಅಭ್ಯರ್ಥಿಗಳು ಹುದ್ದೆಗೆ ಸೇರಿಲ್ಲ. ಅವುಗಳನ್ನು ‌ಖಾಲಿ ಹುದ್ದೆಗಳೆಂದು ಪರಿಗಣಿಸಿ ಅಧಿಸೂಚನೆ ಹೊರಡಿಸಬೇಕು. ಈ ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ಅಗತ್ಯ ಇಲ್ಲ. ಕೆಎಎಸ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲು ಕೆಪಿಎಸ್‌ಸಿಗೆ ಬಿಡು ಗಡೆ ಮಾಡುವ ಪ್ರಸ್ತಾವನೆ ಪರಿಶೀಲನೆ ಯಲ್ಲಿದೆ ಎಂದು ಅಧಿವೇಶನದಲ್ಲಿ ಮುಖ್ಯಮಂತ್ರಿ ಹೇಳಿದ್ದರು. ಆದರೆ, ಆಡಳಿತ ಇಲಾಖೆಗಳು ಡಿಪಿಎಆರ್‌ಗೆ ಮಾಹಿತಿ ನೀಡುತ್ತಿಲ್ಲ’ ಎಂದು ಉದ್ಯೋಗಾಕಾಂಕ್ಷಿಗಳೂ ಅಳಲು ತೋಡಿಕೊಂಡಿದ್ದಾರೆ.

‘ದಶಕದಲ್ಲಿ ನಾಲ್ಕು ಬಾರಿಯಷ್ಟೆ ನೇಮಕಾತಿ’

‘ಕಳೆದೊಂದು ದಶಕದಲ್ಲಿ ನಾಲ್ಕು ಬಾರಿ 2011 (362 ಹುದ್ದೆಗಳು), 2014(464 ಹುದ್ದೆಗಳು), 2015 (428 ಹುದ್ದೆಗಳು), 2017 (106 ಹುದ್ದೆಗಳು) ಮಾತ್ರ ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನೇಮ ಕಾತಿ ನಡೆದಿದೆ. 2017ನೇ ಸಾಲಿನ ನೇಮಕಾತಿಯಲ್ಲಿ ಬಹುತೇಕ ಗ್ರೂಪ್ ‘ಬಿ’ ಹುದ್ದೆಗಳಿದ್ದವು. ತಾಲ್ಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಾಲ್ಲೂಕು ಸಮಾಜ ಕಲ್ಯಾಣ ಅಧಿಕಾರಿ, ಆಹಾರ ಇಲಾಖೆಯಲ್ಲಿ ಸಹಾಯಕ ನಿರ್ದೇಶಕ ಹುದ್ದೆಗಳಿಗೆ 2014ರ ಬಳಿಕ ನೇಮಕಾತಿಯೇ ನಡೆದಿಲ್ಲ’ ಎಂದು ಕೆಎಎಸ್‌ ಹುದ್ದೆ ಆಕಾಂಕ್ಷಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.