ಬೆಂಗಳೂರು: ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ದಾಳಿಯಲ್ಲಿ ಮೃತರಾದ ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಗುರುವಾರ ಬೆಳಿಗ್ಗೆ 5.30ರ ಹೊತ್ತಿಗೆ ಸುಂದರ ನಗರಕ್ಕೆ ತರಲಾಯಿತು.
ಅಧಿಕಾರಿಗಳು ಭರತ್ ಭೂಷಣ್ ಅವರ ಪಾರ್ಥಿವ ಶರೀರವನ್ನು ಕುಟುಂಬದವರಿಗೆ ತಲುಪಿಸಿದರು. ಈ ವೇಳೆ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಭರತ್ ಪತ್ನಿ ಡಾ. ಸುಜಾತಾ ಅವರು ಮೂರು ವರ್ಷದ ಮಗನನ್ನು ಎದೆಗವಚಿಕೊಂಡು ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ಕುಟುಂಬದವರು ಅವರನ್ನು ಸಂತೈಸುತ್ತಿದ್ದ ದೃಶ್ಯ ಮನಕಲಕುವಂತಿತ್ತು.
ಅಂತಿಮ ದರ್ಶನಕ್ಕೆ ಸಾರ್ವಜನಿಕರಿಗೆ, ಗಣ್ಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭರತ್ ನಿವಾಸಕ್ಕೆ ತೆರಳಿ ಅಂತಿಮ ದರ್ಶನ್ ಪಡೆದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಭರತ್ ಪತ್ನಿ, ತಂದೆ, ಸೋದರಮಾವ ಸೀತಾರಾಮ್ ಮತ್ತು ಕುಟುಂಬದವರಿಗೆ ಸಾಂತ್ವನ ಹೇಳಿದರು.
ಭರತ್ ಪತ್ನಿ ಡಾ. ಸುಜಾತಾ ಅವರು ಸಿದ್ದರಾಮಯ್ಯ ಅವರಿಗೆ ಮಗುವನ್ನು ತೋರಿಸುತ್ತಲೇ, ಘಟನೆಯ ಭೀಕರತೆಯನ್ನು ಹೇಳಿ ಕಣ್ಣೀರಿಟ್ಟರು. ಕುಟುಂಬದವರೂ ಬಿಕ್ಕಿ ಬಿಕ್ಕಿ ಅತ್ತಿದ್ದು. ಮಗುವಿನ ಮುಖ ನೋಡಿ ಮುಖ್ಯಮಂತ್ರಿಯವರು ಭಾವುಕರಾದರು. ಸಿದ್ದರಾಮಯ್ಯ ಅವರ ಜೊತೆ ಸಚಿವ ರಾಮಲಿಂಗಾರೆಡ್ಡಿಯವರು ಭರತ್ ಅವರ ಅಂತಿಮ ದರ್ಶನ ಪಡೆದರು.
ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ನ, ವಿಧಾನಪರಿಷತ್ ಸದಸ್ಯ ಎಂ.ಆರ್. ಸೀತಾರಾಂ ಸೇರಿದಂತೆ ವಿವಿಧ ರಾಜಕೀಯ ಮುಖಂಡರು ಭರತ್ ಅವರ ಅಂತಿಮ ದರ್ಶನ ಪಡೆದರು. ಸೋಮಣ್ಣ ಅವರು ಕುಟುಂಬದವರಿಗೆ ಸಾಂತ್ವನ ಹೇಳುತ್ತಾ ಭಾವುಕರಾದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ‘ಕಾಶ್ಮೀರದ ಪೆಹಲ್ಗಾಮನಲ್ಲಿ ಉಗ್ರರ ದಾಳಿಯಲ್ಲಿ ಮೃತಪಟ್ಟವರ ಕನ್ನಡಿಗರ ಕುಟುಂಬಕ್ಕೆ ತಲಾ 10 ಲಕ್ಷ ಪರಿಹಾರವನ್ನು ಘೋಷಿಸಲಾಗಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದು ತಿಳಿಸಿದರು.
ಭರತ್ ಭೂಷಣ್ ಅವರು ಉಗ್ರರ ದಾಳಿಗೆ ಬಲಿಯಾಗಿರುವುದು ದುರದೃಷ್ಟಕರ. ಉಗ್ರರ ದಾಳಿ ಅಮಾನವೀಯವಾದ ಕೃತ್ಯವಾಗಿ ತೀವ್ರವಾಗಿ ಖಂಡಿಸುವುದಾಗಿ ತಿಳಿಸಿದರು.
ಉಗ್ರರನ್ನು ಸಂಪೂರ್ಣವಾಗಿ ನಿರ್ಮೂಲನೆಗೊಳಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ. ನಮ್ಮ ಸರ್ಕಾರ ದೇಶದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ, ಉಗ್ರರನ್ನು ಸದೆಬಡಿಯುವ ನಿಟ್ಟಿನಲ್ಲಿ ಕೇಂದ್ರಕ್ಕೆ ಸಂಪೂರ್ಣ ಬೆಂಬಲ ನೀಡುತ್ತದೆ. ಅಮಾಯಕ ಜನರನ್ನು ಹಾಡುಹಗಲೇ, ತಮ್ಮ ಕುಟುಂಬದವರ ಎದುರು ಕೊಲ್ಲುವುದು ಹ್ಯೇಯಕೃತ್ಯ. ಇಂತಹ ಘಟನೆ ನಡೆಯಲು ಕೇಂದ್ರದ ಗುಪ್ತಚರ ಇಲಾಖೆಯ ವೈಫಲ್ಯವೂ ಇರಬಹುದು ಎಂದರು.
ಕಾಶ್ಮೀರದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆ ಹಾಗೂ ಘಟನೆಯಲ್ಲಿ ಮೃತಪಟ್ಟವರ ಪಾರ್ಥಿವ ಶರೀರವನ್ನು ರಾಜ್ಯಕ್ಕೆ ಕರೆತರುವ ವ್ಯವಸ್ಥೆಗಾಗಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹಾಗೂ ಅಧಿಕಾರಿಗಳ ತಂಡವನ್ನು ಕೂಡಲೇ ಕಳುಹಿಸಿಕೊಡಲಾಗಿತ್ತು. 175 ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ ಕರೆತರಲಾಗುತ್ತಿದೆ. ಸಂಕಷ್ಟದಲ್ಲಿರುವ ಕನ್ನಡಿಗರನ್ನು ರಕ್ಷಿಸುವುದು ಸರ್ಕಾರದ ಕರ್ತವ್ಯ ಎಂದರು.
ಕಾಶ್ಮೀರದಲ್ಲಿ ನಡೆದ ಉಗ್ರರ ದಾಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವು ಕ್ರಮಗಳನ್ನು ಈಗಾಗಲೇ ಕೈಗೊಂಡಿದೆ. ಉಗ್ರರನ್ನು ಮಟ್ಟ ಹಾಕುವ ಇನ್ನೂ ಹೆಚ್ಚಿನ ಕ್ರಮಗಳಿಗೆ ರಾಜ್ಯಸರ್ಕಾರದ ಸಂಪೂರ್ಣ ಬೆಂಬಲವಿರಲಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.