
ತಿರುವನಂತಪುರ: ಕೇರಳದ ಹೆಸರನ್ನು 'ಕೇರಳಂ' ಎಂದು ಮರುನಾಮಕರಣ ಮಾಡಬೇಕೆಂಬ ಬಹುದಿನಗಳ ಆಗ್ರಹಕ್ಕೆ ಕೇಂದ್ರ ಸರ್ಕಾರ ಸಮ್ಮತಿಸಿದೆ. ಇದರೊಂದಿಗೆ, ರಾಜಕೀಯ ಲಾಭದ ಲೆಕ್ಕಾಚಾರಗಳು ಶುರುವಾಗಿವೆ.
ರಾಜ್ಯದ ಹೆಸರನ್ನು ಅಧಿಕೃತವಾಗಿ 'ಕೇರಳಂ' ಎಂದು ಬದಲಾಯಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ಕೇರಳ ವಿಧಾನಸಭೆಯು 2023ರ ಆಗಸ್ಟ್ 9ರಂದು ಅಂಗೀಕರಿಸಿತ್ತು.
ನಿರ್ಣಯವನ್ನು ಪರಿಶೀಲಿಸಿದ್ದ ಕೇಂದ್ರ ಗೃಹ ಸಚಿವಾಲಯವು ಕೆಲ ತಾಂತ್ರಿಕ ಬದಲಾವಣೆ ಮಾಡುವಂತೆ ಸಲಹೆ ನೀಡಿತ್ತು. ಅದರಂತೆ, ಕೇರಳ ವಿಧಾನಸಭೆಯು 2024ರ ಜೂನ್ 24ರಂದು ಮತ್ತೊಮ್ಮೆ ನಿರ್ಣಯ ಅಂಗೀಕರಿಸಿತ್ತು. ಅದನ್ನು ಪರಿಗಣಿಸಿದ್ದ ಗೃಹ ಸಚಿವಾಲಯ, ಸಚಿವ ಅಮಿತ್ ಶಾ ಅನುಮೋದನೆಯೊಂದಿಗೆ ಸಂಪುಟದ ಕರಡು ಟಿಪ್ಪಣಿಯನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸಲಾಗಿತ್ತು. ಹೆಸರು ಬದಲಾವಣೆ ಪ್ರಸ್ತಾವಕ್ಕೆ ಕಾನೂನು ಸಚಿವಾಲಯ ಒಪ್ಪಿಗೆ ಸೂಚಿಸಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಹೆಸರು ಬದಲಾವಣೆ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ.
ರಾಜಕೀಯ ಲೆಕ್ಕಾಚಾರ?
ಪಂಚ ರಾಜ್ಯಗಳ ಚುನಾವಣಾ ವೇಳಾಪಟ್ಟಿ ಪ್ರಕಟಗೊಳ್ಳಲು ಇನ್ನು ಒಂದು ತಿಂಗಳಷ್ಟೇ ಉಳಿದಿದೆ. ಇಂತಹ ಸಂದರ್ಭದಲ್ಲಿ ದಕ್ಷಿಣದ ರಾಜ್ಯದ ಮನವಿಯಂತೆ ಹೆಸರು ಬದಲಾವಣೆಗೆ ಕೇಂದ್ರ ಒಪ್ಪಿರುವುದು ಚರ್ಚೆಗೆ ಅವಕಾಶ ಮಾಡಿಕೊಟ್ಟಿದೆ.
ಕೇಂದ್ರದ ನಿರ್ಧಾರವನ್ನು ಕೇರಳದಲ್ಲಿನ ಎಲ್ಲ ಪಕ್ಷಗಳೂ ಸ್ವಾಗತಿಸಿವೆಯಾದರೂ, ಚುನಾವಣೆ ಹಿನ್ನೆಲೆಯಲ್ಲಿ ಹೆಸರು ಬದಲಾವಣೆ ನಿರ್ಣಯಕ್ಕೆ ಮೋದಿ ಸರ್ಕಾರ ಒಪ್ಪಿದ್ದರ ಹಿಂದಿರುವ ತಮ್ಮ 'ಶ್ರಮ'ದ ಕುರಿತು, ಚುನಾವಣೆ ಸಂದರ್ಭದಲ್ಲಿ ಪ್ರತಿಪಾದನೆ ಮಾಡಿಕೊಳ್ಳಲಿವೆ.
ರಾಜ್ಯ ವಿಧಾನಸಭೆಯು 2024 ಹಾಗೂ ಅದಕ್ಕೂ ಮೊದಲೇ, ಹೆಸರು ಬದಲಾವಣೆ ಸಂಬಂಧ ನಿರ್ಣಯಗಳನ್ನು ಅಂಗೀಕರಿಸಿತ್ತು. ಆದರೆ, ಬಿಜೆಪಿ ರಾಜ್ಯಾಧ್ಯಕ್ಷ ರಾಜೀವ್ ಚಂದ್ರಶೇಖರ್ ಅವರು ಕಳೆದ ತಿಂಗಳು ಪ್ರಧಾನಿಗೆ ಪತ್ರ ಬರೆದು ಮನವಿ ಮಾಡಿದ್ದರು. ಅದರ ಬೆನ್ನಲ್ಲೇ, ನಿರ್ಧಾರ ಹೊರ ಬಿದ್ದಿರುವುದು, ಬಿಜೆಪಿಯಲ್ಲಿ ಹುರುಪು ಹೆಚ್ಚಿಸಿದೆ.
ಕೇಂದ್ರದ ನಿರ್ಧಾರವನ್ನು, 'ರಾಜ್ಯದ ಭಾಷಾ, ಸಾಂಸ್ಕೃತಿಕ ಹಾಗೂ ನಾಗರೀಕತೆಯ ಬೇರುಗಳನ್ನು ಗೌರವಿಸುವ ಐತಿಹಾಸಿಕ ಕ್ರಮ' ಎಂದು ಚಂದ್ರಶೇಖರ್ ಬಣ್ಣಿಸಿದ್ದಾರೆ. ಹಾಗೆಯೇ, 'ಮರುನಾಮಕರಣ ನಿರ್ಣಯವನ್ನು ಪರಿಗಣಿಸುವಂತೆ ಮೋದಿ ಸರ್ಕಾರವನ್ನು ಒತ್ತಾಯಿಸಿದ್ದಾಗಿಯೂ ಹೇಳಿಕೊಂಡಿರುವ ಅವರು, ಮಲಯಾಳಿಗರ ಭಾವನೆಗಳನ್ನು ಗೌರವಿಸಲಾಗಿದೆ' ಎಂದೂ ಪ್ರತಿಪಾದಿಸಿದ್ದಾರೆ.
'ರಾಜ್ಯವನ್ನು ಕೇರಳಂ ಎನ್ನುವುದು ಸೂಕ್ತ. ಏಕೆಂದರೆ, ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ರಕ್ಷಿಸಿಕೊಳ್ಳುವ ಜೊತೆಜೊತೆಗೆ ರಾಜ್ಯವನ್ನು ಆಧುನೀಕರಣಗೊಳಿಸುವ ಹಾಗೂ ಸದೃಢ ಆರ್ಥಿಕತೆಯನ್ನು ನಿರ್ಮಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ' ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಬರೆದುಕೊಂಡಿದ್ದಾರೆ. ಆ ಮೂಲಕ ರಾಜ್ಯದ ಜನರ ಮನ ಗೆಲ್ಲುವ ಪ್ರಯತ್ನ ಆರಂಭಿಸಿದ್ದಾರೆ.
'ರಾಜ್ಯದ ಜನರ ಬಹುದಿನಗಳ ಬೇಡಿಕೆಯನ್ನು ಈಡೇರಿಸುವತ್ತ ಒಂದು ನಿರ್ಣಾಯಕ ಹೆಜ್ಜೆ' ಎಂದು ಅಮಿತ್ ಶಾ ಅವರೂ ಮಲಯಾಳಂನಲ್ಲಿ ಟ್ವೀಟ್ ಮಾಡಿದ್ದಾರೆ.
ಬೇಡಿಕೆ ರಾಜ್ಯ ಸರ್ಕಾರದ್ದಷ್ಟೇ ಅಲ್ಲ
ಕೇರಳವು ಕೇರಳಂ ಆಗಬೇಕು ಎಂಬುದು ರಾಜ್ಯ ಸರ್ಕಾರ ಅಂಗೀಕರಿಸಿದ ನಿರ್ಣಯ ಮಾತ್ರವಲ್ಲ. ಹೆಸರು ಬದಲಾವಣೆಗಾಗಿ ಹಲವು ಸಾಹಿತಿಗಳು, ಸಾಂಸ್ಕೃತಿಕ ಹೋರಾಟಗಾರರು ಬಹು ಸಮಯದಿಂದ ಒತ್ತಾಯಿಸುತ್ತಾ ಬಂದಿದ್ದರು.
ಕೆಲವು ವರ್ಷಗಳಿಂದ ತಾವು ಇಂಗ್ಲಿಷ್‌ನಲ್ಲಿಯೂ ಕೇರಳಂ ಎಂದೇ ಬಳಸುತ್ತಿರುವುದಾಗಿ ಹೇಳಿಕೊಂಡಿರುವ ಸಾಮಾಜಿಕ ಕಾರ್ಯಕರ್ತ ಹಾಗೂ ಸಾಹಿತಿ ಎಂ.ಎನ್. ಕರಸ್ಸೆರಿ, ಕೇಂದ್ರವು ಈಗಲಾದರೂ ಹೆಸರನ್ನು ಅಧಿಕೃತಗೊಳಿಸಲು ಮುಂದಾಗಿರುವುದು ಸಂತಸ ತಂದಿದೆ ಎಂದಿದ್ದಾರೆ.
ತರೂರ್ ಪ್ರಶ್ನೆ
ಹೆಸರು ಬದಲಾವಣೆ ನಿರ್ಧಾರದ ಕುರಿತು ಕಾಂಗ್ರೆಸ್ ಸಂಸದ ಶಶಿ ತರೂರ್ ಎಕ್ಸ್‌ನಲ್ಲಿ ವ್ಯಂಗ್ಯವಾಗಿ ಪೋಸ್ಟ್ ಹಂಚಿಕೊಂಡಿದ್ದಾರೆ.
'ಕೇರಳವು ಕೇರಳಂ ಆದರೆ, ಕೇರಳನ್ (ಕೇರಳಿಗ) ಮತ್ತು ಕೇರಳೈಟ್ (ಕೇರಳಿಗರು) ಪದಗಳು ಏನೆಂದು ಬದಲಾಗಲಿವೆ. ಕೇರಳನ್ 'ಕೇರಳಮೈನ್' ಆದರೆ ಸೂಕ್ಷ್ಮಾಣುಜೀವಿ ಎಂಬಂತೆಯೂ, ಕೇರಳೈಟ್ 'ಕೇರಳಮೈಟ್' ಎಂದಾದರೆ ಅಪರೂಪದ ಖನಿಜವೆಂಬಂತೆಯೂ ಧ್ವನಿಸುತ್ತದೆ. ಚುನಾವಣೋತ್ಸಾಹದಿಂದ ಹೊರಬರುವ ಇಂತಹ ಹೊಸ ಪದಗಳಿಂದಾಗಿ ಮುಖ್ಯಮಂತ್ರಿಯವರು ಹೊಸ ಸ್ಪರ್ಧೆಯನ್ನು ಆಯೋಜಿಸಲು ಬಯಸಬಹುದು' ಎಂದು ಬರೆದುಕೊಂಡಿದ್ದಾರೆ.
ಮಲಯಾಳಂನಲ್ಲಿ 'ಕೇರಳಂ' ಎಂದೇ ಬಳಸಲಾಗುತ್ತಿದೆ. ಆದರೆ ಇಂಗ್ಲಿಷ್ ಮತ್ತು ಇತರ ಭಾಷೆಗಳಲ್ಲಿ, ಸಂವಿಧಾನದ ಮೊದಲ ಪರಿಚ್ಛೇದದಲ್ಲಿ ಬಳಸಿದಂತೆ 'ಕೇರಳ' ಎಂದು ಬಳಸಲಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.