
ಚಿಕ್ಕಬಳ್ಳಾಪುರ: ಇರಾನ್ ಸರ್ವೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರ ಹತ್ಯೆ ಖಂಡಿಸಿ ಗೌರಿಬಿದನೂರು ತಾಲ್ಲೂಕಿನ ಅಲೀಪುರದಲ್ಲಿನ ಶಿಯಾ ಮುಸ್ಲಿಮರು ಪ್ರತಿಭಟನಾ ಮೆರವಣಿಗೆ ನಡೆಸಲು ಸಜ್ಜಾಗಿದ್ದಾರೆ.
ಬೆಳ್ಳಿಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಸೇರಿದ ಶಿಯಾ ಮುಸ್ಲಿಮರು ಅಮೆರಿಕ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಖಮೇನಿ ಅವರ ಅವರ ಫೋಟೊ ಹಿಡಿದು ಕಣ್ಣೀರು ಹಾಕಿದರು. ಅಲೀಪುರದಲ್ಲಿ ಅಘೋಷಿತ ಬಂದ್ ನಿರ್ಮಾಣವಾಗಿದೆ.
ಅಂಜುಮನ್ ಎ ಜಾಫರಿಯಾ ಸಮಿತಿ ನೇತೃತ್ವದಲ್ಲಿ ಮಧ್ಯಾಹ್ನ 3ಕ್ಕೆ ಪ್ರತಿಭಟನಾ ಮೆರವಣಿಗೆೆಗೆ ಕರೆ ನೀಡಲಾಗಿದೆ. ಈಗಾಗಲೇ ಜನರು ಗುಂಪು ಗೂಡುತ್ತಿದ್ದಾರೆ.
ಅಯಾತೊಲ್ಲಾ ಅಲಿ ಖಮೇನಿ 1986ರಲ್ಲಿ ಪುಟ್ಟಹಳ್ಳಿ ಎನಿಸಿದ್ದ ಅಲೀಪುರಕ್ಕೆ ಭೇಟಿ ನೀಡಿದ್ದರು. ಅವರ ಧಾರ್ಮಿಕ ದೇಶಗಳನ್ನು ಅಲೀಪುರದಲ್ಲಿ ಚಾಚೂತಪ್ಪಿಸದೆ ಪಾಲಿಸಲಾಗುತ್ತಿತ್ತು.
ಬೆಳ್ಳಿಕುಂಟೆ ಅಲೀಪುರವಾಯಿತು: ಅಲೀಪುರದ ಮೂಲ ಹೆಸರು ಬೆಳ್ಳಿಕುಂಟೆ. ಈ ಹಿಂದೆ ಬಿಜಾಪುರ ಆದಿಲ್‌ಶಾಹಿಗಳ ಅವಧಿಯಲ್ಲಿ ಅಲ್ಲಿನ ಜನರು ಇಲ್ಲಿಗೆ ವಲಸೆ ಬಂದರು. ಮುಸ್ಲಿಮರ ಸಂಖ್ಯೆ ಹೆಚ್ಚಿದಂತೆ ಬೆಳ್ಳುಕುಂಟೆ ಅಲೀಪುರವಾಗಿ ರೂಪಾಂತರವಾಯಿತು.
ಗ್ರಾಮದ ಬಹುತೇಕ ಮಂದಿ ಇರಾನ್, ಅರಬ್ ದೇಶಗಳು ಸೇರಿದಂತೆ ಜಗತ್ತಿನ ವಿವಿಧ ದೇಶಗಳ ಜೊತೆ ವ್ಯಾಪಾರ, ವಹಿವಾಟು, ಶಿಕ್ಷಣದ ಕಾರಣಕ್ಕೆ ಸಂಪರ್ಕ ಹೊಂದಿದ್ದಾರೆ. ಗ್ರಾಮದಲ್ಲಿ ಅಂಜುಮನ್ ಜಾಫರಿಯಾ ಸಮಿತಿ ಪ್ರತ್ಯೇಕವಾದ ಕೇಬಲ್ ಚಾನಲ್ ಹೊಂದಿದೆ. ‘ಅಲಿ ಟಿವಿ’ ಹೆಸರಿನ ಈ ಚಾನಲ್‌ನಲ್ಲಿ ಮಸೀದಿಯ ಪ್ರಾರ್ಥನೆಗಳು, ಕುರ್‌ಆನ್ ಪಠಣ ಧಾರ್ಮಿಕ ವಿಚಾರಗಳು ಪ್ರಸಾರವಾಗುತ್ತವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.