ADVERTISEMENT

ಬಾಗಿಲಿಗೆ ಬಂತು ಸರ್ಕಾರ, ರೇಟ್ ಕಾರ್ಡ್‌ನಂತೆ ಲಂಚ ರೆಡಿ ಮಾಡಿಕೊಳ್ಳಿ:ಯತ್ನಾಳ ಕಿಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 12 ಜನವರಿ 2024, 13:05 IST
Last Updated 12 ಜನವರಿ 2024, 13:05 IST
<div class="paragraphs"><p>ಬಸನಗೌಡ ಪಾಟೀಲ ಯತ್ನಾಳ</p></div>

ಬಸನಗೌಡ ಪಾಟೀಲ ಯತ್ನಾಳ

   

ಬೆಂಗಳೂರು: ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷರಾಗಿರುವ ಕೋಲಾರ–ಚಿಕ್ಕಬಳ್ಳಾಪುರ ಜಿಲ್ಲೆಯ ಸಹಕಾರ ಹಾಲು ಒಕ್ಕೂಟದಲ್ಲಿ (ಕೋಚಿಮುಲ್‌) ನಡೆದಿದೆ ಎನ್ನಲಾದ ನೇಮಕಾತಿ ಅಕ್ರಮ ಕುರಿತು ಪ್ರತಿಕ್ರಿಯಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ‘ಎಕ್ಸ್‌’ನಲ್ಲಿ ಪೋಸ್ಟ್‌ ಮಾಡಿರುವ ಅವರು, ‘ಬಾಗಿಲಿಗೆ ಬಂತು ಸರ್ಕಾರ ರೇಟ್ ಕಾರ್ಡ್ ಪ್ರಕಾರ ಲಂಚ ರೆಡಿ ಮಾಡಿಕೊಳ್ಳಿ’ ಎಂದು ಬರೆದುಕೊಂಡಿದ್ದಾರೆ.

ADVERTISEMENT

ಮಾಲೂರು ಕಾಂಗ್ರೆಸ್‌ ಶಾಸಕ ಕೆ.ವೈ.ನಂಜೇಗೌಡ ಅಧ್ಯಕ್ಷರಾಗಿರುವ ಕೋಚಿಮುಲ್‌ನಲ್ಲಿ ಈಚೆಗೆ ನಡೆದ 75 ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಆರೋಪಿಸಿದ್ದಾರೆ.

40 ತಾಸುಗಳ ದಾಖಲೆ ಪರಿಶೀಲನೆ ಕೊನೆಗೊಂಡ ನಂತರ ಜಾರಿ ನಿರ್ದೇಶನಾಲಯವು ಈ ಸಂಬಂಧ ಪ್ರಕಟಣೆ ಹೊರಡಿಸಿದೆ. ‘ಪ್ರತಿ ಹುದ್ದೆ ₹20 ಲಕ್ಷದಿಂದ ₹30 ಲಕ್ಷಕ್ಕೆ ಮಾರಾಟವಾಗಿರುವ ಕುರಿತು ಕೋಚಿಮುಲ್‌ ನಿರ್ದೇಶಕರು ಮತ್ತು ನೇಮಕಾತಿ ಸಮಿತಿಯ ಸದಸ್ಯರು ಶೋಧ ಹಾಗೂ ಜಪ್ತಿ ಪ್ರಕ್ರಿಯೆ ವೇಳೆ ಒಪ್ಪಿಕೊಂಡಿದ್ದಾರೆ’ ಎಂದು ಪತ್ರಿಕಾಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾಲೂರು ತಾಲ್ಲೂಕಿನ ಕೊಮ್ಮನ ಹಳ್ಳಿಯಲ್ಲಿರುವ ನಂಜೇಗೌಡ ನಿವಾಸ ಹಾಗೂ ಅವರಿಗೆ ಸಂಬಂಧಿಸಿದ 14 ಕಡೆ ಈಚೆಗೆ ಇ.ಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು.

ಕೋಲಾರ ತಾಲ್ಲೂಕಿನ ಬೆಳಗಾನಹಳ್ಳಿಯಲ್ಲಿರುವ ಕೋಚಿಮುಲ್‌ ಮುಖ್ಯ ಕಚೇರಿ ಮೇಲೂ ದಾಳಿ ನಡೆಸಿದ್ದರು. ಅಧಿಕಾರಿಗಳು ಹಾಗೂ ಕೆಲ ನಿರ್ದೇಶಕರನ್ನು ಕಚೇರಿಗೆ ಕರೆಸಿಕೊಂಡು ತನಿಖೆ ನಡೆಸಿದ್ದರು. ಕಂಪ್ಯೂಟರ್‌ ಸೇರಿದಂತೆ ವಿವಿಧ ದಾಖಲೆ ವಶಕ್ಕೆ ಪಡೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.