ADVERTISEMENT

ಕೆಪಿಸಿಸಿ ಅಧ್ಯಕ್ಷ ಸ್ಥಾನ: ಪ್ರಮುಖರ ಕಣ್ಣು

ವಿರೋಧ ಪಕ್ಷದ ನಾಯಕರಾಗಿ ಸಿದ್ದರಾಮಯ್ಯ ಮುಂದುವರಿಕೆ ಸಾಧ್ಯತೆ

ಸಿದ್ದಯ್ಯ ಹಿರೇಮಠ
Published 28 ಆಗಸ್ಟ್ 2019, 20:00 IST
Last Updated 28 ಆಗಸ್ಟ್ 2019, 20:00 IST
ಶಿವಕುಮಾರ್, ಪಾಟೀಲ, ಮುನಿಯಪ್ಪ
ಶಿವಕುಮಾರ್, ಪಾಟೀಲ, ಮುನಿಯಪ್ಪ   

ನವದೆಹಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ (ಕೆಪಿಸಿಸಿ) ಅಧ್ಯಕ್ಷರ ಬದಲಾವಣೆಯ ಮುನ್ಸೂಚನೆ ದೊರೆಯುತ್ತಿದ್ದಂತೆಯೇ ಹುದ್ದೆಯ ಆಕಾಂಕ್ಷಿಗಳ ಲಾಬಿ ಮುಂದುವರಿದಿದೆ. ಅನೇಕ ಮುಖಂಡರು ಈ ಹುದ್ದೆಯ ಮೇಲೆ ಕಣ್ಣಿರಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನಕ್ಕಾಗಿ ಲಾಬಿ ನಡೆಸುತ್ತಿರುವ ಡಿ.ಕೆ. ಶಿವಕುಮಾರ್‌ ಇತ್ತೀಚೆಗಷ್ಟೇ ಮೂರು ದಿನ ದೆಹಲಿಯಲ್ಲಿ ಬೀಡುಬಿಟ್ಟು ವರಿಷ್ಠರನ್ನು ಭೇಟಿ ಮಾಡಿ ವಾಪಸಾಗಿದ್ದಾರೆ. ಅವರಂತೆಯೇ ಇನ್ನೂ ಕೆಲವರು ಈ ಹುದ್ದೆಗಾಗಿ ವರಿಷ್ಠರ ದುಂಬಾಲು ಬಿದ್ದಿದ್ದಾರೆ.

ದಿನೇಶ್‌ ಗುಂಡೂರಾವ್‌ ಅವರ ನೇಮಕವಾದಾಗ ಆ ಸ್ಥಾನದಿಂದ ವಂಚಿತರಾಗಿದ್ದ ಗದಗ ಶಾಸಕ ಎಚ್‌.ಕೆ. ಪಾಟೀಲ ಈ ಬಾರಿಯಾದರೂ ಹುದ್ದೆ ಪಡೆಯಬೇಕು ಎಂಬ ಪ್ರಯತ್ನ ಮುಂದುವರಿಸಿದ್ದಾರೆ.

ADVERTISEMENT

ಸಮ್ಮಿಶ್ರ ಸರ್ಕಾರದಲ್ಲಿ ಸಚಿವ ಸ್ಥಾನ ಸಿಗದೆ ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದ ಎಚ್ಕೆ, ಈ ಬಾರಿಯಾದರೂ ಉತ್ತರ ಕರ್ನಾಟಕಕ್ಕೆ ಪ್ರಮುಖ ಸ್ಥಾನ ನೀಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

‘ಒಂದೊಮ್ಮೆ ಅಧ್ಯಕ್ಷ ಸ್ಥಾನ ನೀಡದಿದ್ದರೆ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸ್ಥಾನಕ್ಕಾದರೂ ಪರಿಗಣಿಸಿ’ ಎಂಬ ಬೇಡಿಕೆಯನ್ನು ಹೈಕಮಾಂಡ್‌ ಮುಂದೆ ಇರಿಸಿದ್ದಾರೆ ಎಂದು ಕಾಂಗ್ರೆಸ್‌ ಮೂಲಗಳು ತಿಳಿಸಿವೆ.

ಮುನಿಯಪ್ಪ ಯತ್ನ: ಸತತ ಏಳು ಬಾರಿ ಕೋಲಾರ ಮೀಸಲು ಕ್ಷೇತ್ರದಿಂದ ಸಂಸದರಾಗಿದ್ದ ಕೆ.ಎಚ್‌.ಮುನಿಯಪ್ಪ ಅವರೂ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾಗಿದ್ದಾರೆ.

ದಲಿತರಲ್ಲಿನ ಎಡಗೈ ಸಮುದಾಯಕ್ಕೆ ಸೇರಿರುವ ಮುನಿಯಪ್ಪ, ಒಮ್ಮೆಯಾದರೂ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸಮುದಾಯವನ್ನು ಪರಿಗಣಿಸಿದಲ್ಲಿ ಪಕ್ಷದಿಂದ ವಿಮುಖವಾಗುತ್ತಿರುವ ಆ ಸಮುದಾಯವನ್ನು ಮತ್ತೆ ಸೆಳೆಯಬಹುದು ಎಂದು ವರಿಷ್ಠರಲ್ಲಿ ಮನವರಿಕೆ ಮಾಡಿದ್ದಾರೆ.

ಒಳಮೀಸಲಾತಿ ವರ್ಗೀಕರಣ ಕುರಿತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯ ಜಾರಿಗೆ ಕಾಂಗ್ರೆಸ್‌ ಸರ್ಕಾರ ಹಿಂದೇಟು ಹಾಕಿದ್ದರಿಂದ ಇತ್ತೀಚಿನ ದಿನಗಳಲ್ಲಿ ರಾಜ್ಯದ ದಲಿತ ಎಡಗೈ ಸಮುದಾಯ ಬಿಜೆಪಿಯತ್ತ ವಾಲುತ್ತಿದೆ. ಅದಕ್ಕೆ ಪುಷ್ಟಿ ಎಂಬಂತೆ ಅದೇ ಸಮುದಾಯದ ಗೋವಿಂದ ಕಾರಜೋಳ ಅವರಿಗೆ ಬಿಜೆಪಿ ಉಪ ಮುಖ್ಯಮಂತ್ರಿ ಸ್ಥಾನ ನೀಡಿದೆ. ಈಗ ಎದುರಾಗಿರುವ ಸಂಕಷ್ಟದ ಸಂದರ್ಭದಲ್ಲಿ ಪಕ್ಷವು ಎಡಗೈ ಸಮುದಾಯಕ್ಕೆ ಆದ್ಯತೆ ನೀಡದಿದ್ದರೆ ಭವಿಷ್ಯದಲ್ಲಿ ಇಂಥ ಅನೇಕ ಸಮುದಾಯಗಳನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಪಕ್ಷದ ವರಿಷ್ಠ ಎದುರು ಪ್ರತಿಪಾದಿಸಿದ್ದಾರೆ.

ಈ ಇಬ್ಬರೂ ಮುಖಂಡರು ರಾಹುಲ್‌ ಗಾಂಧಿ, ಸೋನಿಯಾ ಗಾಂಧಿ, ಅಹಮದ್‌ ಪಟೇಲ್‌, ಗುಲಾಂ ನಬಿ ಆಜಾದ್‌ ಹಾಗೂ ಪಕ್ಷದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಅವರೊಂದಿಗೆ ಮಾತನಾಡಿದ್ದಾರೆ.

ಹೊಸ ಅಧ್ಯಕ್ಷರ ನೇಮಕದ ವೇಳೆ ಪಕ್ಷದ ಬಲವರ್ಧನೆ ದೃಷ್ಟಿಯಿಂದ ಆಯಾ ಸಮುದಾಯದ ಪ್ರಾಮುಖ್ಯ ಮತ್ತು ಪ್ರಾಂತ್ಯವನ್ನು ಗಣನೆಗೆ ತೆಗೆದುಕೊಳ್ಳುವಂತೆಯೂ ಅವರು ಮನವಿ ಮಾಡಿದ್ದಾರೆ. ವಿಧಾನ ಪರಿಷತ್‌ನ ವಿರೋಧ ಪಕ್ಷ ನಾಯಕ ಸ್ಥಾನಕ್ಕಾಗಿ ಹಿರಿಯ ಸದಸ್ಯ ಬಾಗಲಕೋಟೆಯ ಎಸ್‌.ಆರ್‌. ಪಾಟೀಲ ಅವರು ತೀವ್ರ ಪ್ರಯತ್ನ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಧಾನಸಭೆಯ ವಿರೋಧ ಪಕ್ಷದ ನಾಯಕನ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಬದಲಿಸಲು ಕೆ.ಸಿ. ವೇಣುಗೋಪಾಲ್‌ ಅವರು ಆಸಕ್ತಿ ತಾಳಿಲ್ಲ. ಹಾಗಾಗಿ ಸಿದ್ದರಾಮಯ್ಯ ಬದಲಿಗೆ ಬೇರೆಯವರಿಗೆ ಆ ಹುದ್ದೆ ದೊರೆಯುವ ಸಾಧ್ಯತೆಗಳು ವಿರಳ ಎಂದೂ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.