ADVERTISEMENT

ನಮ್ಮದು ಕಟ್ಟುವ ಪರಂಪರೆ, ಬಿಜೆಪಿಯವರದ್ದು ಉರುಳಿಸುವ ಪರಂಪರೆ: ಡಿ.ಕೆ ಶಿವಕುಮಾರ್

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 4:28 IST
Last Updated 15 ಆಗಸ್ಟ್ 2021, 4:28 IST
ಡಿ.ಕೆ ಶಿವಕುಮಾರ್‌
ಡಿ.ಕೆ ಶಿವಕುಮಾರ್‌    

ಬೆಂಗಳೂರು: ‘ನಮ್ಮದು (ಕಾಂಗ್ರೆಸ್‌) ಕಟ್ಟುವ ಪರಂಪರೆ. ಬಿಜೆಪಿಯವರದ್ದು ಉರುಳಿಸುವ ಪರಂಪರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಭವನದಲ್ಲಿ ಭಾನುವಾರ ನಡೆದ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ದೇಶವನ್ನು ಕಟ್ಟಿದ ಮಹನೀಯರ ಹೆಸರು ಬದಲಿಸುವ ಚರ್ಚೆ ನಡೆಯುತ್ತಿದೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಿಸಲು ಷಡ್ಯಂತ್ರ ನಡೆದಿದೆ. ಮಹನೀಯರ ಹೆಸರು ಬದಲಿಸಿದರೂ ಅವರು ಜನಮಾನಸದಲ್ಲಿ ಚಿರಸ್ಥಾಯಿ ಎನ್ನುವುದನ್ನು ಮರೆಯಬಾರದು’ ಎಂದರು.

‘ದೇಶ ಕಟ್ಟುವ ವೇಳೆ ಟೀಕೆ ಎದುರಾದರೂ ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೋರಾಟ ನಡೆಸಿದ್ದಾರೆ. ಈಗ ಪ್ರಜಾಪ್ರಭುತ್ವ ವ್ಯವಸ್ಥೆಯನ್ನೇ ಬುಡಮೇಲು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ಮಾಡಬೇಕಿದ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಕೋವಿಡ್‌ ನಿರ್ಮೂಲನೆಗಾಗಿ ನಾವು ಪ್ರಯತ್ನಿಸುತ್ತಿದ್ದೇವೆ. ಆದರೆ,‌ ಕೇಂದ್ರ, ರಾಜ್ಯ ಸರ್ಕಾರ ಈ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದೆ. ಈ ವೈಫಲ್ಯಗಳನ್ನು ಬಳಸಿಕೊಂಡು ನಾವು ರಾಜಕೀಯ ಮಾಡಬಹುದಾಗಿತ್ತು. ಅಂಥ ಕೆಲಸಕ್ಕೆ ನಾವು ಮುಂದಾಗಲಿಲ್ಲ. ಅದರ ಅಗತ್ಯವೂ ನಮಗೆ ಇರಲಿಲ್ಲ. ನಮಗೆ ಜನರ ಕಣ್ಣೀರಿಗೆ ಸ್ಪಂದಿಸುವುದಷ್ಟೇ ಮುಖ್ಯವಾಗಿತ್ತು. ಆಡಳಿತ ಪಕ್ಷ ಮಾಡದ ಕೆಲಸವನ್ನು ನಾವು ಮಾಡಿದೆವು’ ಎಂದರು.

ಅದಕ್ಕೂ ಮೊದಲು ಕೆಪಿಸಿಸಿ ವತಿಯಿಂದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಬಳಿಯಿಂದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಕಾಂಗ್ರೆಸ್ ಭವನದವರೆಗೂ ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಒಂದು ಕಿ.ಮೀ. ಉದ್ದದ ರಾಷ್ಟ್ರಧ್ವಜ ಗಮನ ಸೆಳೆಯಿತು. ಕಾಂಗ್ರೆಸ್‌ ನಾಯಕರು ಒಟ್ಟಿಗೆ ಹೆಜ್ಜೆ ಹಾಕಿದರು. ರಾಯಣ್ಣ ಪ್ರತಿಮೆಗೆ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಪುಷ್ಪನಮನ ಸಲ್ಲಿಸಿದರು.

ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಎಸ್.ಆರ್. ಪಾಟೀಲ, ರಾಮಲಿಂಗಾ ರೆಡ್ಡಿ, ಸಲೀಂ ಅಹಮ್ಮದ್, ಬಿ.ಕೆ. ಹರಿಪ್ರಸಾದ್, ದಿನೇಶ್ ಗುಂಡೂರಾವ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.