ADVERTISEMENT

KRS ಹೆಸರು ಬದಲಿಸಲು ಮಹದೇವಪ್ಪ ನೇತೃತ್ವದಲ್ಲಿ ಹುನ್ನಾರ: ಆರ್. ಅಶೋಕ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 12:47 IST
Last Updated 4 ಆಗಸ್ಟ್ 2025, 12:47 IST
<div class="paragraphs"><p>ಆರ್‌.ಅಶೋಕ್‌</p></div>

ಆರ್‌.ಅಶೋಕ್‌

   

ಮಂಡ್ಯ: ‘ಶ್ರೀರಂಗಪಟ್ಟಣ ತಾಲ್ಲೂಕಿನ ಕೃಷ್ಣರಾಜ ಸಾಗರಕ್ಕೆ ‘ಟಿಪ್ಪುಸುಲ್ತಾನ್‌ ಸಾಗರ’ ಎಂದು ಮರುನಾಮಕರಣ ಮಾಡಲು ಕಾಂಗ್ರೆಸ್‌ ಹುನ್ನಾರ ನಡೆಸುತ್ತಿದೆ. ಇದಕ್ಕೆ ಸಚಿವ ಎಚ್‌.ಸಿ. ಮಹದೇವಪ್ಪ ಅವರು ಪೀಠಿಕೆ ಹಾಕಿದ್ದಾರೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌. ಅಶೋಕ್‌ ಆರೋಪ ಮಾಡಿದರು.

‘ಟಿಪ್ಪು ಸುಲ್ತಾನ್ 1799ರಲ್ಲಿ ಮೃತಪಟ್ಟಿದ್ದಾರೆ. ಕೆಆರ್‌ಎಸ್ ಜಲಾಶಯದ ನಿರ್ಮಾಣ 1911ರಲ್ಲಿ ಆರಂಭವಾಗಿದೆ. ಬರೋಬ್ಬರಿ 112 ವರ್ಷಗಳ ನಂತರ ಡ್ಯಾಂ ಕಟ್ಟಲಾಗಿದೆ. ಟಿಪ್ಪು ಶಂಕುಸ್ಥಾಪನೆ ಮಾಡಿದ್ದರೆ ಆಗಲೇ ಈ ಹೆಸರು ಇಡಬೇಕಿತ್ತಲ್ವ? ನಾಪತ್ತೆಯಾಗಿದ್ದ ಕಲ್ಲು 112 ವರ್ಷ ನಂತರ ಪ್ರತ್ಯಕ್ಷವಾಗಿದ್ದು ಹೇಗೆ? ಈ ಶಿಲಾನ್ಯಾಸ ಫಲಕದ ಮೇಲೆ ಅನುಮಾನವಿದ್ದು, ಈ ಬಗ್ಗೆ ಪರಾಮರ್ಶೆ ನಡೆಯಬೇಕು’ ಎಂದರು.

ADVERTISEMENT

‘ಕೃಷ್ಣರಾಜಸಾಗರ ಡ್ಯಾಂಗೆ ಟಿಪ್ಪು ಹೆಸರು ತಳಕು ಹಾಕುತ್ತಿರುವುದು ನಾಲ್ವಡಿ ಕೃಷ್ಣರಾಜ ಒಡೆಯರ್‌ಗೆ ಮಾಡಿದ ಅಪಮಾನ ಎಂದರು. ಟಿಪ್ಪು ಸುಲ್ತಾನ್‌ ಒಬ್ಬ ನಾಡದ್ರೋಹಿ, ಪರ್ಷಿಯಾ ಮೂಲದವನು. ಈತ ಸಾವಿರಾರು ಹಿಂದೂಗಳನ್ನು ಕೊಂದು, ದೇವಾಲಯಗಳನ್ನು ಕೆಡವಿರುವ ಬಗ್ಗೆ ಇತಿಹಾಸದಲ್ಲಿ ದಾಖಲೆ ಇದೆ. ಇಂಥ ಮತಾಂಧನ ಹೆಸರನ್ನು ಕೆಆರ್‌ಎಸ್‌ಗೆ ಇಡಲು ಹೊರಟಿರುವುದು ಕಾಂಗ್ರೆಸ್‌ ಮನಸ್ಥಿತಿಯನ್ನು ತೋರಿಸಿದೆ’ ಎಂದು ಹೇಳಿದರು.

ಮಕ್ಕಳಿಗೆ ಟಿಪ್ಪು ಹೆಸರಿಡಲಿ..

ಟಿಪ್ಪು ಹಿಂದೆ ಹೋದವರು ಸರ್ವನಾಶವಾಗಿದ್ದಾರೆ. ಚಲನಚಿತ್ರ ತೆಗೆದವರು ಮತ್ತು ಖಡ್ಗ ಖರೀಸಿದ ವಿಜಯ ಮಲ್ಯ ಅವರು ಹಾಳಾಗಿ ಹೋಗಿದ್ದಾರೆ. ಟಿಪ್ಪು ಮೇಲೆ ಅಷ್ಟೊಂದು ಪ್ರೀತಿ ಇದ್ದರೆ ಕಾಂಗ್ರೆಸ್‌ ನಾಯಕರ ಮಕ್ಕಳಿಗೆ ಟಿಪ್ಪು ಅಂತ ಹೆಸರಿಡಲಿ ಎಂದರು.

‘ಕಾಂಗ್ರೆಸ್‌ ನಾಯಕರು ಪದೇ ಪದೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಹೆಸರನ್ನು ಮುಂಚೂಣಿಗೆ ತರುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯತೀಂದ್ರ ಅವರು ‘ಮೈಸೂರಿಗೆ ನಾಲ್ವಡಿ ಅವರಿಗಿಂತ ಸಿದ್ದರಾಮಯ್ಯನವರ ಕೊಡುಗೆ ಹೆಚ್ಚು’ ಎಂದು ಹೇಳಿಕೆ ನೀಡಿದ್ದರು. ಕೆಆರ್‌ಎಸ್ ಜಲಾಶಯ ನಿರ್ಮಾಣಕ್ಕೆ ನಾಲ್ವಡಿ ಅವರು ಯಾರ ಮೇಲೂ ತೆರಿಗೆ ಹಾಕಿರಲಿಲ್ಲ. ಆದರೆ, ಸಿದ್ದರಾಮಯ್ಯ ಸರ್ಕಾರ ಎರಡು ವರ್ಷದಲ್ಲಿ ₹2 ಲಕ್ಷ ಕೋಟಿ ಸಾಲ ಮಾಡಿ, ಜನರ ಮೇಲೆ ತೆರಿಗೆಯ ಬರೆ ಎಳೆದಿದೆ. ಇಂಥ ಮುಖ್ಯಮಂತ್ರಿಯನ್ನು ನಾಲ್ವಡಿ ಅವರಿಗೆ ಹೋಲಿಕೆ ಮಾಡುವುದು ನಾಚಿಕೆಗೇಡು’ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಗೌರವ ಉಳಿಯಬೇಕಾದ್ರೆ ಕೂಡಲೇ ರಾಜ್ಯದ ಜನತೆ, ಒಡೆಯರ್‌ ಕುಟುಂಬದ ಕ್ಷಮಾಪಣೆ ಕೇಳಿ. ಹೀಗೆ ಮಾತನಾಡಿದ್ರೆ ಜನರು ನಿಮ್ಮ ಪಕ್ಷವನ್ನು ಧೂಳೀಪಟ ಮಾಡುತ್ತಾರೆ ಎಂದು ಎಚ್ಚರಿಕೆ ನೀಡಿದರು.

ಸಾರಿಗೆ ನೌಕರರ ಪ್ರತಿಭಟನೆಗೆ ಬೆಂಬಲ

‘ನಾನು ಸಾರಿಗೆ ಸಚಿವನಾಗಿದ್ದಾಗ ನೌಕರರ ಬೇಡಿಕೆ ಈಡೇರಿಸಿದ್ದೆ. ಆದರೆ, ಕಾಂಗ್ರೆಸ್ ಸರ್ಕಾರ 4 ವರ್ಷಗಳ ಹಿಂಬಾಕಿ ಕೊಡದೆ ಸತಾಯಿಸುತ್ತಿದೆ. ಸರ್ಕಾರದ ಖಜಾನೆ ಖಾಲಿಯಾಗಿದ್ದು, ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ. ಸರ್ಕಾರಿ ನೌಕರರಿಗೆ ಸಂಬಳವೂ ಸರಿಯಾಗಿ ಸಿಗುತ್ತಿಲ್ಲ. ಸಾರಿಗೆ ನೌಕರರ ನ್ಯಾಯಯುತ ಹೋರಾಟಕ್ಕೆ ಬಿಜೆಪಿ ಬೆಂಬಲವಿದೆ’ ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಎಲ್. ನಾಗೇಂದ್ರ, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಇಂದ್ರೇಶ್, ಮುಖಂಡರಾದ ಇಂಡವಾಳು ಸಚ್ಚಿದಾನಂದ, ಅಶೋಕ್ ಜಯರಾಂ ಇದ್ದರು.

‘ಮತಗಳ್ಳತನವಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ’

ಎರಡು ವರ್ಷ ಎಲ್ಲೋ ಇದ್ದ ರಾಹುಲ್ ಗಾಂಧಿ, ಈಗ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕಕ್ಕೆ ಬರುತ್ತಿದ್ದಾರೆ. ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ 2,000 ರೈತರ ಆತ್ಮಹತ್ಯೆ, ಗರ್ಭಿಣಿಯರ ಸಾವು, ಮೈಕ್ರೋ ಫೈನಾನ್ಸ್‌ನಿಂದ ಸಾವುಗಳಾದವು. ಐಪಿಎಲ್ ವಿಜಯೋತ್ಸವದಲ್ಲಿ 11 ಯುವಕರು ಸತ್ತರಲ್ಲ. ಆಗ ಯಾಕೆ ಬರಲಿಲ್ಲ ಎಂದು ಆರ್‌.ಅಶೋಕ್‌ ಪ್ರಶ್ನಿಸಿದರು.

ಲೋಕಸಭಾ ಚುನಾವಣೆ ನಡೆದ ಸಂದರ್ಭದಲ್ಲಿ ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರವಿತ್ತು. ಇವರು ವಿಧಾನಸಭೆ ಚುನಾವಣೆಯಲ್ಲಿ 136 ಸ್ಥಾನ ಗಳಿಸಿದಾಗ ಬಿಜೆಪಿ ಸರ್ಕಾರವಿತ್ತು. ಅಂದರೆ, ಕಾಂಗ್ರೆಸ್‌ ಸರ್ಕಾರದಲ್ಲಿ ಅಕ್ರಮ ಚುನಾವಣೆ, ನಮ್ಮ ಸರ್ಕಾರದ ಅವಧಿಯಲ್ಲಿ ಪಾರದರ್ಶಕ ಚುನಾವಣೆ ನಡೆದಿದೆ ಎಂಬುದನ್ನು ಕಾಂಗ್ರೆಸ್‌ ನಾಯಕರೇ ಒಪ್ಪಿಕೊಂಡಂತಾಗಿದೆ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಖಜಾನೆ ಖಾಲಿ ಮತ್ತು ಸಿಎಂ ಕುರ್ಚಿ ಕಿತ್ತಾಟ ವಿಚಾರಗಳನ್ನು ಮರೆಮಾಚಲು ರಾಹುಲ್‌ ಗಾಂಧಿ ‘ಮತಗಳ್ಳತನ’ ಆರೋಪ ಮಾಡುತ್ತಿದ್ದಾರೆ. ಮತಗಳ್ಳತನವಾಗಿದ್ದರೆ ನ್ಯಾಯಾಲಯದಲ್ಲಿ ಪ್ರಶ್ನಿಸಲಿ. ಇಂದಿರಾಗಾಂಧಿ ಅವರು ಚುನಾವಣಾ ಅಕ್ರಮ ನಡೆಸಿದ್ದಕ್ಕೆ 6 ವರ್ಷ ಅಮಾನತುಗೊಂಡಿದ್ದರು. ಕಾಂಗ್ರೆಸ್‌ ತನ್ನ ದ್ವಂದ್ವ ನೀತಿಯಿಂದ ಸಂವಿಧಾನವನ್ನು ಬುಡಮೇಲು ಮಾಡಲು ಹೊರಟಿದೆ ಎಂದು ಟೀಕಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.