ADVERTISEMENT

KSRTC Strike |ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ; ಜನಸಾಮಾನ್ಯರಿಗೆ ಪರದಾಟ: ಅಶೋಕ

ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿದ ಸಿಎಂ: ಅಶೋಕ ವಾಗ್ದಾಳಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 5 ಆಗಸ್ಟ್ 2025, 6:23 IST
Last Updated 5 ಆಗಸ್ಟ್ 2025, 6:23 IST
ಆರ್. ಅಶೋಕ
ಆರ್. ಅಶೋಕ   

ಬೆಂಗಳೂರು: ವೇತನ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯದ ವಿವಿಧೆಡೆ ಸಾರಿಗೆ ಸಂಸ್ಥೆಗಳ ನೌಕರರು ನಡೆಸುತ್ತಿರುವ ಮುಷ್ಕರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ 'ಎಕ್ಸ್‌'ನಲ್ಲಿ ಪೋಸ್ಟ್ ಮಾಡಿರುವ ಅಶೋಕ, 'ಸಾರಿಗೆ ನಿಗಮಗಳನ್ನು ಸಿಎಂ ಸರ್ವನಾಶ ಮಾಡಿದ್ದಾರೆ' ಎಂದು ಆರೋಪಿಸಿದ್ದಾರೆ.

'ದಿವಾಳಿ ಸರ್ಕಾರ ವಿರುದ್ಧ ಸಾರಿಗೆ ನೌಕರರ ಮುಷ್ಕರ, ರಾಜ್ಯಾದ್ಯಂತ ಸ್ತಬ್ಧವಾದ ಬಸ್ ಸಂಚಾರ!, ಬಸ್ಸಿಲ್ಲ..ಬಸ್ಸಿಲ್ಲ..ವಿದ್ಯಾರ್ಥಿಗಳು ಶಾಲಾ ಕಾಲೇಜುಗಳಿಗೆ ಹೋಗಲು ಬಸ್ಸಿಲ್ಲ, ನೌಕರರು, ಉದ್ಯೋಗಿಗಳು ಕೆಲಸಕ್ಕೆ ಹೋಗಲು ಬಸ್ಸಿಲ್ಲ, ನೆಂಟರಿಷ್ಟರ ಮನೆಗಳಿಗೆ, ಶುಭ ಸಮಾರಂಭಗಳಿಗೆ, ಸಾವು-ನೋವಿಗೆ ಹೋಗಲು ಬಸ್ಸಿಲ್ಲ, ಇದು ಬಹುಪಾಲು ಕನ್ನಡಿಗರ ಇವತ್ತಿನ ಬವಣೆ!! ರಾಜ್ಯದ ಖಜಾನೆ ಖಾಲಿ ಮಾಡಿ ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರಕ್ಕೆ ಚೆಲ್ಲಾಟ, ಜನಸಾಮಾನ್ಯರಿಗೆ ಪರದಾಟ, ಗೋಳಾಟ, ತೊಳಲಾಟ!' ಎಂದು ಹೇಳಿದ್ದಾರೆ.

ADVERTISEMENT

'ಸಿಎಂ ಸಿದ್ದರಾಮಯ್ಯ ಅವರೇ, ನಿಮ್ಮ ಘನಂದಾರಿ ಆಡಳಿತದಿಂದ ಸಾರಿಗೆ ನಿಗಮಗಳನ್ನು ಸರ್ವನಾಶ ಮಾಡಿಬಿಟ್ಟರಲ್ಲ ಸ್ವಾಮಿ. ಸಾರಿಗೆ ನೌಕರರ ಹಿಂಬಾಕಿ ಕೊಡಲು ದುಡ್ಡಿಲ್ಲ, ನೌಕರರ ವೇತನ ಹೆಚ್ಚಳ ಮಾಡಲು ದುಡ್ಡಿಲ್ಲ, ಹೊಸ ಬಸ್ ಖರೀದಿಗೆ ದುಡ್ಡಿಲ್ಲ, ಹಳೆ ಬಸ್ಸುಗಳ ರಿಪೇರಿಗೆ ದುಡ್ಡಿಲ್ಲ. ಇನ್ನೆಷ್ಟು ದಿನ ಸ್ವಾಮಿ ಈ ಭಂಡ ಬಾಳು. ನಿಮ್ಮ ಅಧಿಕಾರದ ಲಾಲಸೆಗೆ, ದುರಾಡಳಿತಕ್ಕೆ ಜನಸಾಮಾನ್ಯರು ಇನ್ಯಾವ್ಯಾವ ರೀತಿ ಪರದಾಡಬೇಕು, ಇನ್ನೆಷ್ಟು ಕಷ್ಟ ಅನುಭವಿಸಬೇಕು' ಎಂದು ಪ್ರಶ್ನಿಸಿದ್ದಾರೆ.

'ಸಿದ್ಧರಾಮಯ್ಯನವರೇ, ದಯವಿಟ್ಟು ರಾಜೀನಾಮೆ ಕೊಟ್ಟು ಕರ್ನಾಟಕವನ್ನು ಉಳಿಸಿ. ಕನ್ನಡಿಗರಿಗೆ ನೆಮ್ಮದಿಯ ಜೀವನ ಮಾಡಲು ಬಿಡಿ' ಎಂದು ಅವರು ಆಗ್ರಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.