
ಬೆಂಗಳೂರು: ಮಾರ್ಚ್ 2ರಿಂದ ನಡೆಸಲು ಉದ್ದೇಶಿಸಲಾಗಿದ್ದ ಧರಣಿ ಸತ್ಯಾಗ್ರಹವನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ಮುಖಂಡರು, ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರ ಜೊತೆಗೆ ಮಾತುಕತೆ ನಡೆಸಿದ ಬಳಿಕ ಹಿಂತೆಗೆದುಕೊಂಡಿದ್ದಾರೆ.
‘38 ತಿಂಗಳ ಹಿಂಬಾಕಿ ನೀಡಬೇಕು. 2024ರ ಜನವರಿ 1ರಿಂದ ವೇತನ ಪರಿಷ್ಕರಿಸಬೇಕು’ ಎಂದು ಒತ್ತಾಯಿಸಿ ಮಾರ್ಚ್ 2ರಿಂದ ಪ್ರತಿದಿನ ಎರಡು ವಿಭಾಗಗಳ ನೌಕರರು ಸ್ವಾತಂತ್ರ್ಯ ಉದ್ಯಾನದಲ್ಲಿ ಧರಣಿ ನಡೆಸಲು ಕ್ರಿಯಾ ಸಮಿತಿ ನೇತೃತ್ವದಲ್ಲಿ ನಿರ್ಧರಿಸಿದ್ದರು.
ಗುರುವಾರ ಕ್ರಿಯಾಸಮಿತಿಯ ಮುಖಂಡರೊಂದಿಗೆ ಸಾರಿಗೆ ಸಚಿವರು ಸಭೆ ನಡೆಸಿದರು. 38 ತಿಂಗಳಲ್ಲಿ 26 ತಿಂಗಳ ಹಿಂಬಾಕಿಯನ್ನು ನೀಡಲು ಈಗಾಗಲೇ ಒಪ್ಪಿಗೆ ನೀಡಲಾಗಿದೆ. ಉಳಿದ ಸಮಸ್ಯೆಗಳ ಬಗ್ಗೆ ಮಾರ್ಚ್ 2ರಂದು ಸಭೆ ನಡೆಸಲಾಗುವುದು ಎಂದು ಭರವಸೆ ನೀಡಿದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಂ ಪಾಷ ಕೂಡ ಸಕಾರಾತ್ಮಕವಾಗಿ ಸ್ಪಂದಿಸಿದರು. ಹಾಗಾಗಿ ಧರಣಿ ಸತ್ಯಾಗ್ರಹವನ್ನು ವಾಪಸ್ ಪಡೆಯಲು ಜಂಟಿ ಕ್ರಿಯಾ ಸಮಿತಿಯ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಮಿತಿಯ ಮುಖಂಡರು ತಿಳಿಸಿದ್ದಾರೆ.
ಸಭೆಯಲ್ಲಿ ಮುಖಂಡರಾದ ವಿಜಯಭಾಸ್ಕರ್ ಡಿ.ಎ., ಬಿ. ಜಯದೇವರಾಜೇ ಅರಸ್, ಎಚ್.ಡಿ. ರೇವಪ್ಪ, ವೆಂಕಟರಮಣಪ್ಪ, ಎ. ಸೋಮಣ್ಣ, ಜಗದೀಶ್ ಎಚ್.ಆರ್., ಗಂಡಸಿ ಸದಾನಂದ ಸ್ವಾಮಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.