ADVERTISEMENT

ಪರಿಶಿಷ್ಟ ಪಂಗಡದ ಪಟ್ಟಿಗೆ ಕುರುಬರು: ಇಂದು ಚರ್ಚೆ

ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಭೆ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2025, 0:30 IST
Last Updated 16 ಸೆಪ್ಟೆಂಬರ್ 2025, 0:30 IST
<div class="paragraphs"><p>ವಿಧಾನಸೌಧ</p></div>

ವಿಧಾನಸೌಧ

   

ಬೆಂಗಳೂರು: ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ (ಎಸ್‌ಟಿ) ಪಟ್ಟಿಗೆ ಸೇರಿಸುವ ಕುರಿತು ಚರ್ಚಿಸಲು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯವರ ಅಧ್ಯಕ್ಷತೆಯಲ್ಲಿ ಮಂಗಳವಾರ (ಸೆ. 16) ಮಹತ್ವದ ಸಭೆ ನಡೆಯಲಿದೆ.

ಅಗತ್ಯ ಮಾಹಿತಿ ಮತ್ತು ದಾಖಲೆಗಳ ಸಹಿತ ಸಭೆಗೆ ಹಾಜರಾಗುವಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ನಿರ್ದೇಶಕ, ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯ ನಿರ್ದೇಶಕ ಮತ್ತು ಎಸ್‌ಸಿಎಸ್‌ಪಿ, ಟಿಎಸ್‌ಪಿ ನೋಡಲ್‌ ಏಜೆನ್ಸಿಯ ಸಲಹೆಗಾರ ಅವರಿಗೆ ಸೂಚನೆ ನೀಡಲಾಗಿದೆ.

ADVERTISEMENT

ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವ ಕುರಿತು ಚರ್ಚಿಸುವ ಜೊತೆಗೆ,  ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಕುರುಬ ಸಮುದಾಯವು ಕರ್ನಾಟಕ ರಾಜ್ಯದಲ್ಲಿರುವ ಗೊಂಡ ಸಮುದಾಯದ ಜೊತೆ ಹೊಂದಿರುವ ಸಾಮ್ಯತೆ ಬಗ್ಗೆಯೂ ಚರ್ಚೆ ನಡೆಯಲಿದೆ. ಈ ಸಾಮ್ಯತೆಯ ಕಾರಣಕ್ಕೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡಗಳ ಪಟ್ಟಿಯಲ್ಲಿ ಸೇರ್ಪಡೆ ಮಾಡುವ ಬಗ್ಗೆ ಚರ್ಚೆ ನಡೆಯಲಿದೆ ಎಂದು ಗೊತ್ತಾಗಿದೆ.

ಸದ್ಯ ಕುರುಬ ಸಮುದಾಯ ಹಿಂದುಳಿದ ವರ್ಗಗಳ ‘ಪ್ರವರ್ಗ 2 ಎ’ಯಲ್ಲಿದ್ದು, ಶೇ 15ರಷ್ಟು ಮೀಸಲಾತಿ ಸೌಲಭ್ಯ ಪಡೆಯುತ್ತಿದೆ. ಈ ಪ್ರವರ್ಗದಲ್ಲಿ ಕುರುಬ ಸಮುದಾಯದ ಜೊತೆ, ವಿಶ್ವಕರ್ಮ, ಕುಂಬಾರ, ದೇವಾಂಗ, ನೇಕಾರ, ಮಡಿವಾಳ, ಅಗಸ, ತಿಗಳ, ಪಟ್ಟೇಗಾರ ಮುಂತಾದ 102 ಜಾತಿಗಳಿವೆ. ಎಚ್‌. ಕಾಂತರಾಜ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗವು ನಡೆಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ (ಜಾತಿವಾರು ಸಮೀಕ್ಷೆ) ವರದಿಯಲ್ಲಿ ಕುರುಬ ಸಮುದಾಯವನ್ನು ‘ಅತ್ಯಂತ ಹಿಂದುಳಿದ’ ಸಮುದಾಯ ಎಂದು ಮರುವರ್ಗೀಕರಣ ಮಾಡಿ ‘ಪ್ರವರ್ಗ 1ಬಿ’ ಎಂದು ಗುರುತಿಸಿತ್ತು. ಆದರೆ, 10 ವರ್ಷದ ಹಿಂದೆ ನಡೆದಿದ್ದ ಸಮೀಕ್ಷೆಯ ದತ್ತಾಂಶವು ಮಾನ್ಯತೆ ಕಳೆದುಕೊಂಡಿರುವುದರಿಂದ ಆ ವರದಿಯನ್ನು ಕೈಬಿಟ್ಟು ಹೊಸದಾಗಿ ಸಮೀಕ್ಷೆ ನಡೆಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಇದೇ 22ರಿಂದ ಹೊಸತಾಗಿ ಸಮೀಕ್ಷೆ ನಡೆಯಲಿದೆ.

2023ರಲ್ಲೇ ಶಿಫಾರಸು: ಕುರುಬ ಸಮುದಾಯವನ್ನು ಎಸ್‌ಟಿ ಪಟ್ಟಿಗೆ ಸೇರಿಸುವಂತೆ 2023ರ ಜುಲೈನಲ್ಲಿ ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಈ ಶಿಫಾರಸು ಮಾಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಪಿ. ಮಣಿವಣ್ಣನ್ ಅವರು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯಕ್ಕೆ ಬರೆದ ಪತ್ರದಲ್ಲಿ ತಿಳಿಸಿದ್ದರು. ಮೈಸೂರಿನ ಬುಡಕಟ್ಟು ಸಂಶೋಧನಾ ಸಂಸ್ಥೆ ನಡೆಸಿದ ಕುಲಶಾಸ್ತ್ರೀಯ ಅಧ್ಯಯನದ ವರದಿಯ ಶಿಫಾರಸನ್ನೂ ಈ ಪತ್ರದ ಜೊತೆ ಲಗತ್ತಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.