ADVERTISEMENT

ಪ್ರತಿಭಟನಾ ಸಭೆಗೆ ನಿರ್ಮಲಾನಂದನಾಥ ಸ್ವಾಮೀಜಿ ಗೈರು: ಹಲವರ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 18 ಜೂನ್ 2022, 20:30 IST
Last Updated 18 ಜೂನ್ 2022, 20:30 IST
ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿ ಸಿದ್ಧಪಡಿಸಿರುವ ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧ 'ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ' ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ (ಎಡದಿಂದ) ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸಾಹಿತಿ ಬರಗೂರು ರಾಮಚಂದ್ರಪ್ಪ, ವಕೀಲ ಎ.ಪಿ ರಂಗನಾಥ್, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸ್ಪಟಿಕಪುರಿ ಮಹಾಸಂಸ್ಥಾನ ಮಠದ ನಂಜಾವಧೂತ ಸ್ವಾಮೀಜಿ, ಚಿತ್ರದುರ್ಗದ ಬಂಜಾರ ಗುರುಪೀಠದ ಪೀಠಾಧ್ಯಕ್ಷರು ಸರ್ದಾರ್ ಸೇವಾಲಾಲ್ ಸ್ವಾಮೀಜಿ, ಛಲವಾದಿ ಮಹಾಸಂಸ್ಥಾನದ ಬಸವ ನಾಗಿದೇವ ಸ್ವಾಮೀಜಿ ಮತ್ತು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಕುಮಾರಚಂದ್ರಶೇಖರ ಸ್ವಾಮೀಜಿ ಸಂವಿಧಾನದ ಪೀಠಿಕೆ ಪ್ರದರ್ಶಿಸಿದರು -ಪ್ರಜಾವಾಣಿ ಚಿತ್ರ/ ರಂಜು ಪಿ

ಬೆಂಗಳೂರು: ಪರಿಷ್ಕೃತ ಪಠ್ಯಪುಸ್ತಕಗಳ ವಿರುದ್ಧ ‘ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ’ ಶನಿವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಗೆ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಗೈರಾಗಿದ್ದಕ್ಕೆ ಹಲವರು ವೇದಿಕೆಯಲ್ಲೇ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಾಸ್ತಾವಿಕ ಭಾಷಣದಲ್ಲೇ ಅಸಮಾಧಾನ ಹೊರಹಾಕಿದ ಸಮಿತಿಯ ಗೌರವಾಧ್ಯಕ್ಷ ಸಿ.ಎಚ್‌. ಹನುಮಂತರಾಯ, ‘ಶಿಕ್ಷಣ ಸಚಿವರು ಕಡತ ಎತ್ತಿಕೊಂಡು ಸ್ವಾಮೀಜಿ ಬಳಿ ಹೋಗಿದ್ದರು. ಒಂದೇ ಸಮುದಾಯದ ಒಂಬತ್ತು ಮಂದಿಯನ್ನು ಪಠ್ಯಪುಸ್ತಕ ಪರಿಶೀಲನಾ ಸಮಿತಿಗೆ ನೇಮಿಸಿದ್ದರ ಹಿಂದಿನ ಉದ್ದೇಶವೇನು ಎಂಬುದನ್ನು ಸ್ವಾಮೀಜಿ ಪ್ರಶ್ನಿಸಬೇಕಿತ್ತು’ ಎಂದರು.

‘ನಂಜಾವಧೂತ ಸ್ವಾಮೀಜಿಯವರೇ ಸಮಸ್ತ ಒಕ್ಕಲಿಗರಿಗೆ ಗುರುವಾಗಬೇಕಿತ್ತು’ ಎಂದು ಪ್ರೊ.ಎಲ್‌.ಎನ್‌. ಮುಕುಂದರಾಜ್‌ ದನಿಗೂಡಿಸಿದರು.

ADVERTISEMENT

ನಿರ್ಮಲಾನಂದನಾಥ ಸ್ವಾಮೀಜಿಯವರು ಪ್ರತಿಭಟನೆಯಲ್ಲಿ ಭಾಗವಹಿಸದೇ ಇರುವುದನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ‘ಈ ವಿಚಾರದಲ್ಲಿ ಕೆಲವು ಮಠಾಧೀಶರು ಮೈತುಂಬಾ ಎಣ್ಣೆ ಹಚ್ಚಿಕೊಂಡಿದ್ದಾರೆ’ ಎಂದು ಹೇಳಿದರು.

ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರಿಂದ ಗದ್ದಲ

ಪ್ರತಿಭಟನಾ ಸಭೆಯ ಪ್ರಧಾನ ವೇದಿಕೆಯಲ್ಲಿ ತಮ್ಮ ಬಣದ ಮುಖಂಡರಿಗೆ ಆಸನ ನೀಡಿಲ್ಲ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಟಿ.ಎ. ನಾರಾಯಣ ಗೌಡ ಬಣದ ಕಾರ್ಯಕರ್ತರು ಗದ್ದಲ ನಡೆಸಿದರು.

ಮತ್ತೊಂದು ಬಣದ ಮುಖಂಡರಾದ ಶಿವರಾಮೇಗೌಡ, ಪ್ರವೀಣ್‌ ಶೆಟ್ಟಿ ಸೇರಿದಂತೆ ಕೆಲವು ಸಂಘಟನೆಗಳ ಮುಖಂಡರಿಗೆ ಪ್ರಧಾನ ವೇದಿಕೆಯಲ್ಲಿ ಅವಕಾಶ ನೀಡಲಾಗಿತ್ತು. ನಾರಾಯಣ ಗೌಡ ಪ್ರತಿಭಟನೆಗೆ ಗೈರಾಗಿದ್ದರು. ಅವರ ಸಂಘಟನೆಯ ಯಾರಿಗೂ ಪ್ರಧಾನ ವೇದಿಕೆಯಲ್ಲಿ ಅವಕಾಶ ಕಲ್ಪಿಸಿಲ್ಲ ಎಂದು ಆಕ್ಷೇಪಿಸಿದ ಹಲವರು ಕೆಲಕಾಲ ಏರು ಧ್ವನಿಯಲ್ಲಿ ಘೋಷಣೆಗಳನ್ನು ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.