ADVERTISEMENT

ಕುವೆಂಪು ವಿವಿ | ಪರೀಕ್ಷೆ ನಡೆಸದೇ ಫಲಿತಾಂಶ: ಪರಿಶೀಲನೆಗೆ ನಾಲ್ಕು ಸಮಿತಿ

ಕುವೆಂಪು ವಿವಿ ದೂರ ಶಿಕ್ಷಣ ನಿರ್ದೇಶನಾಲಯದ ಅವ್ಯವಹಾರ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2022, 17:55 IST
Last Updated 16 ಫೆಬ್ರುವರಿ 2022, 17:55 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ದೂರ ಶಿಕ್ಷಣ ನಿರ್ದೇಶನಾಲಯ 2019–20ನೇ ಸಾಲಿನ
ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸದೇ ದಿಢೀರ್ ಫಲಿತಾಂಶ ಪ್ರಕಟಿಸಿರುವುದರ ಹಿಂದೆ ಹಣಕಾಸಿನ ವ್ಯವಹಾರ ನಡೆದಿದೆ ಎಂಬ ಆರೋಪಗಳನ್ನು ಪರಿಶೀಲಿಸಲು ಹಾಗೂ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿದ ಅಧ್ಯಯನ ಕೇಂದ್ರಗಳ ಮೇಲೆ ದಾಳಿ ನಡೆಸಿ, ದಾಖಲೆಗಳನ್ನು ಪರಿಶೀಲಿಸಲು ನಾಲ್ಕು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ.

ಸಿಂಡಿಕೇಟ್‌, ವಿದ್ಯಾವಿಷಯಕ ಪರಿಷತ್‌, ಅಧ್ಯಾಪಕರ ಒಕ್ಕೂಟದ ವಿರೋಧದ ಮಧ್ಯೆಯೂ ವಿಶ್ವವಿದ್ಯಾಲಯವು ಪರೀಕ್ಷೆಗಳನ್ನು ನಡೆಸದೇ ದೂರ ಶಿಕ್ಷಣದ ವಿದ್ಯಾರ್ಥಿಗಳ ಫಲಿತಾಂಶವನ್ನು ಈಚೆಗೆ ಪ್ರಕಟಿಸಿತ್ತು. ಅದರಲ್ಲೂ ತನ್ನ ವ್ಯಾಪ್ತಿಯ ಆಯ್ದ ಅಧ್ಯಯನ ಕೇಂದ್ರಗಳಿಗಷ್ಟೇ ಫಲಿತಾಂಶದ ಪಟ್ಟಿ ರವಾನಿಸಿರುವುದು ಅವ್ಯವಹಾರ ಶಂಕೆಗೆ ಪುಷ್ಟಿ ನೀಡಿತ್ತು.

ಹಣಕಾಸಿನ ಅವ್ಯವಹಾರ ನಡೆದಿರುವ ಕುರಿತು ಸಿಂಡಿಕೇಟ್‌ನ ಹಲವು ಸದಸ್ಯರು ರಾಜ್ಯಪಾಲರಿಗೆ ದೂರು ನೀಡಿದ್ದರು. ಈ ಕುರಿತು ‘ಪ್ರಜಾವಾಣಿ’ ಫೆ.12ರ ಸಂಚಿಕೆಯ ಮುಖಪುಟದಲ್ಲಿ ‘ನಡೆಯದ ಪರೀಕ್ಷೆ; ಹಣ ಕೊಟ್ಟವರಿಗಷ್ಟೆ ಫಲಿತಾಂಶ?’ ಎಂಬ ತಲೆಬರಹದಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.

ADVERTISEMENT

ದೂರ ಶಿಕ್ಷಣದ ಮೇಲಿನ ಆರೋಪಗಳನ್ನು ಪರಿಶೀಲಿಸಿ ಒಂದು ವಾರದ ಒಳಗೆ ವರದಿ ನೀಡಲು ವಿಶ್ವ
ವಿದ್ಯಾಲಯದ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗದ ಡೀನ್‌ ಪ್ರೊ.ರಿಯಾಜ್‌ ಅಹಮದ್‌ ನೇತೃತ್ವದಲ್ಲಿ ಮೊದಲ ಸಮಿತಿ ರಚಿಸಲಾಗಿದೆ.

ಪ್ರಾಧ್ಯಾಪಕ ಪ್ರೊ.ಎಂ. ವೆಂಕಟೇಶ್ವರಲು, ಸಿಂಡಿಕೇಟ್‌ ಸದಸ್ಯ ಧರ್ಮಪ್ರಸಾದ್‌, ಶಿಕ್ಷಣ ಮಂಡಳಿ ಸದಸ್ಯ ಎಸ್‌. ಚಂದ್ರಶೇಖರ್‌ ಸಮಿತಿಯ ಸದಸ್ಯರು. ದೂರ ಶಿಕ್ಷಣ ವಿಭಾಗದ ಉಪ ಕುಲಸಚಿವೆ ಅಂಬುಜಾ ಅವರನ್ನು ಸಮಿತಿಯ ಸಂಚಾಲಕರನ್ನಾಗಿ ನೇಮಿಸಿ ಕುಲಸಚಿವೆ ಜಿ. ಅನುರಾಧಾ ಆದೇಶ ಹೊರಡಿಸಿದ್ದಾರೆ.

ಪರೀಕ್ಷೆ ಇಲ್ಲದೇ ಫಲಿತಾಂಶ ಪ್ರಕಟಿಸಲು ಕೆಲವು ಅಧ್ಯಯನ ಕೇಂದ್ರಗಳಲ್ಲಿನ ಸಿಬ್ಬಂದಿ ವಿದ್ಯಾರ್ಥಿಗಳಿಂದ ಹಣ ಸಂಗ್ರಹಿಸಿ ಕೊಟ್ಟಿದ್ದಾರೆ ಎಂಬ ಆರೋಪಗಳು ಹಾಗೂ ವಿಶ್ವವಿದ್ಯಾಲಯಕ್ಕೆ ಸಂದಾಯ ಮಾಡಬೇಕಾದ ಶುಲ್ಕ ಪಾವತಿಯಲ್ಲಿ ವಂಚನೆ ಕುರಿತು ಪರಿಶೀಲಿಸಲು ಮೂರು ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದೆ. ಪ್ರತಿಯೊಂದು ಸಮಿತಿಯಲ್ಲೂ ಕಲಾ, ವಾಣಿಜ್ಯ, ವಿಜ್ಞಾನ ವಿಭಾಗದ ಮೂವರು ಪ್ರಾಧ್ಯಾಪಕರು, ಒಬ್ಬರು ಸಿಂಡಿಕೇಟ್‌ ಸದಸ್ಯರನ್ನು ನೇಮಿಸಲಾಗಿದೆ.

ಸಿಂಡಿಕೇಟ್‌ ಸದಸ್ಯರಾದ ರಾಮಲಿಂಗಪ್ಪ, ಬಳ್ಳೇಕೆರೆ ಸಂತೋಷ್‌, ಎಚ್‌.ಬಿ. ರಮೇಶ್‌ ಬಾಬು,
ಪ್ರಾಧ್ಯಾಪಕರಾದ ಪ್ರೊ.ವಿ.ಕೃಷ್ಣ, ಡಿ.ಎಸ್‌.ಪೂರ್ಣಾನಂದ, ಎಚ್‌.ಎನ್‌.ರಮೇಶ್, ಪ್ರೊ.ಜಿ.ಪ್ರಶಾಂತ ನಾಯಕ್‌, ಆರ್‌. ಹಿರೇಮಣಿ ನಾಯ್ಕ, ಪ್ರೊ.ಎಸ್‌.ಕೆ. ನರಹಿಂಹ ಮೂರ್ತಿ, ಅಂಜನಪ್ಪ, ಜಗನ್ನಾಥ ಕೆ.ಡಾಂಗೆ ಅವರು ಸ್ಥಾನಪಡೆದಿದ್ದಾರೆ.

ನಿರ್ದೇಶಕರ ಎತ್ತಂಗಡಿ

ಹಗರಣ ಬೆಳಕಿಗೆ ಬರುತ್ತಿದ್ದಂತೆ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕ ಎಸ್‌.ಎನ್‌.ಯೋಗೇಶ್‌ ಅವರನ್ನು ಅರ್ಥಶಾಸ್ತ್ರ ಸ್ನಾತಕೋತ್ತರ ವಿಭಾಗಕ್ಕೆ ಮರಳಿ ಕಳುಹಿಸಲಾಗಿದೆ.

ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕಡಾ.ಬಿ.ಎಸ್‌.ಬಿರಾದಾರ ಅವರನ್ನು ನೂತನ ನಿರ್ದೇಶಕರನ್ನಾಗಿ ನೇಮಿಸಲಾಗಿದೆ. ಯೋಗೇಶ್‌ ಅವರಿಗೂ ಮೊದಲು ಬಿರಾದಾರ್ ದೂರ ಶಿಕ್ಷಣ ನಿರ್ದೇಶನಾಲಯದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.