
ಬೆಂಗಳೂರು: ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ (ಎ.ಸಿ) ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಆನ್‌ಲೈನ್ ಮೂಲಕ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
ಕಂದಾಯ ನ್ಯಾಯಾಲಯಗಳ ಕಾರ್ಯವೈಖರಿಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ಈ ಹೆಜ್ಜೆ ಇಟ್ಟಿರುವ ಇಲಾಖೆ, ವಾದಿ–ಪ್ರತಿವಾದಿಗಳು ಮನೆಯಲ್ಲಿಯೇ ಕುಳಿತು ತಮ್ಮ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸಬಹುದು. ನ್ಯಾಯಾಲಯದ ಕಲಾಪಗಳ ‘ಲೈವ್ ಸ್ಟ್ರೀಮಿಂಗ್’ (ನೇರ ಪ್ರಸಾರ) ಆಗಲಿದೆ.
‘ಕಂದಾಯ ನ್ಯಾಯಾಲಯಗಳನ್ನು ಹೇಗೆ ನಡೆಸಬೇಕೆಂದು ಯಾವುದೇ ನಿಯಮಗಳು ಇರಲಿಲ್ಲ. ಹೀಗಾಗಿ, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯಗಳು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶಗಳನ್ನು ಹೊರಡಿಸಿರುವ ಉದಾಹರಣೆಗಳು ಸಾಕಷ್ಟಿವೆ. ಕಂದಾಯ ನ್ಯಾಯಾಲಯಗಳನ್ನು ಜನಸ್ನೇಹಿಗೊಳಿಸುವ ಜೊತೆಗೆ, ನ್ಯಾಯಿಕ ತೀರ್ಮಾನಗಳನ್ನು ಪಾರದರ್ಶಕಗೊಳಿಸಬೇಕೆಂಬ ಕಾರಣಕ್ಕೆ ಹೊಸ ವ್ಯವಸ್ಥೆ ಅಳವಡಿಸಿಕೊಳ್ಳಲು ಉದ್ದೇಶಿಸಲಾಗಿದೆ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ.
‘ಕಂದಾಯ ನ್ಯಾಯಾಲಯಗಳಲ್ಲಿ ರೆವಿನ್ಯೂ ಕೋರ್ಟ್ ಕೇಸ್ ಮಾನಿಟರಿಂಗ್ ಸಿಸ್ಟಂ (ಆರ್‌ಸಿಸಿಎಂಎಸ್) ತಂತ್ರಾಂಶ ಸೇರಿದಂತೆ ಡಿಜಿಟಲೀಕರಣದ ಮೂಲಕ ಆದೇಶಗಳನ್ನು ನೀಡುವ ವ್ಯವಸ್ಥೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಗೆ ಜನರು ಅಲೆಯುವುದನ್ನು ತಪ್ಪಿಸಬೇಕೆಂಬ ಉದ್ದೇಶದಿಂದಲೇ ‘ಇ-ಆಡಳಿತ’ಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ಇದೀಗ ಕಲಾಪಗಳನ್ನು ಆನ್‌ಲೈನ್ ಮೂಲಕ ನಡೆಸುವ ವ್ಯವಸ್ಥೆ ಮಾಡಲಾಗುತ್ತಿದೆ’ ಎಂದಿದ್ದಾರೆ.
‘ನ್ಯಾಯಾಲಯ ಕಲಾಪಗಳ ನೇರ ಪ್ರಸಾರ ಮತ್ತು ವಿಡಿಯೊ ಸಂವಾದ ಪಾರದರ್ಶಕತೆ, ಶಿಸ್ತು ಮತ್ತು ಕಂದಾಯ ನ್ಯಾಯಾಲಯಗಳಲ್ಲಿನ ದುಷ್ಕೃತ್ಯದ ಆರೋಪಗಳಿಗೆ ಕಡಿವಾಣ ಹಾಕಲಿದೆ. ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಸರಳೀಕರಿಸಲು ಮತ್ತು ಸಾರ್ವಜನಿಕ ಸೇವೆಗಳನ್ನು ನಾಗರಿಕ ಸ್ನೇಹಿ ಮತ್ತು ಜವಾಬ್ದಾರಿಯುತ ರೀತಿಯಲ್ಲಿ ತಲುಪಿಸುವ ಉದ್ದೇಶದ ಈ ವ್ಯವಸ್ಥೆಗೆ, ಜನರು ವ್ಯಕ್ತಪಡಿಸುವ ಪ್ರತಿಕ್ರಿಯೆ ಪರಿಗಣಿಸಿ ಹಂತ ಹಂತವಾಗಿ ವಿಸ್ತರಿಸಲಾಗುವುದು’ ಎಂದೂ ಅವರು ತಿಳಿಸಿದ್ದಾರೆ.
ಕಂದಾಯ ನ್ಯಾಯಾಲಯದ ವಿಚಾರಣೆಗೆ ಕಚೇರಿಗೆ ಅಲೆಯುವುದು ತಪ್ಪಲಿದೆ
ಕಕ್ಷಿದಾರರು ವಿಡಿಯೊ ಸಂವಾದ ಮೂಲಕ ವಿಚಾರಣೆಯಲ್ಲಿ ಭಾಗವಹಿಸಬಹುದು * ಕಲಾಪಗಳ ನೇರ ಪ್ರಸಾರ ಇರುವುದರಿಂದ ನೀಡುವ ಆದೇಶ ಬಹಿರಂಗ ಆಗಲಿದೆ
ನ್ಯಾಯಾಲಯಗಳಲ್ಲಿ ದುಷ್ಕೃತ್ಯ ನಡೆಯುತ್ತಿದೆ ಎಂಬ ಆರೋಪಗಳಿಗೆ ಕಡಿವಾಣ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.