ADVERTISEMENT

ರೋಹಿಣಿ ವಿರುದ್ಧ ಡಿ.ರೂಪಾ ಆರೋಪ: ಕರ್ಮ ಬಿಡಲ್ಲ ಎಂದು ಡಿ.ಕೆ.ರವಿ ಪತ್ನಿ ಟ್ವೀಟ್

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2023, 14:19 IST
Last Updated 19 ಫೆಬ್ರುವರಿ 2023, 14:19 IST
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ,  ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್
ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ, ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹಾಗೂ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್   

ಬೆಂಗಳೂರು: ಜೆಡಿಎಸ್‌ ಶಾಸಕ ಸಾ.ರಾ.ಮಹೇಶ್ ಹಾಗೂ ಐಎಎಸ್‌ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಸಂಧಾನ ಯತ್ನ ವಿಚಾರ ಮಾಧ್ಯಮಗಳಲ್ಲಿ ಬಹಿರಂಗವಾಗಿತ್ತು. ಇದರ ಬೆನ್ನಲ್ಲೇ ರೋಹಿಣಿ ವಿರುದ್ಧ ಸಾಮಾಜಿಕ ಮಾಧ್ಯಮಗಳ ಮೂಲಕ ಕಿಡಿಕಾರಿದ್ದ ಐಪಿಎಸ್‌ ಅಧಿಕಾರಿ ಡಿ.ರೂಪಾ ಮೌದ್ಗಿಲ್, ಕರ್ತವ್ಯ ಲೋಪ ಸೇರಿದಂತೆ ಹಲವು ಆರೋಪಗಳನ್ನು ಮಾಡಿದ್ದಾರೆ. ಇದೀಗ ಈ ಆರೋಪಗಳಿಗೆ ರೋಹಿಣಿ ಸಿಂಧೂರಿ ಅವರೂ ಪ್ರತಿಕ್ರಿಯಿಸಿದ್ದಾರೆ.

ಈ ಬೆಳವಣಿಗೆಯ ನಡುವೆಯೇ ಐಎಎಸ್‌ ಅಧಿಕಾರಿ ದಿವಂಗತ ಡಿ.ಕೆ. ರವಿ ಅವರ ಪತ್ನಿ ಕುಸುಮಾ ಅವರು ಪ್ರತಿಕ್ರಿಯಿಸಿದ್ದಾರೆ. 'ತಕ್ಷಣವೇ ಆಗಬಹುದು ಅಥವಾ ನಿಧಾನವಾಗಿ. ಆದರೆ, ಖಂಡಿತವಾಗಿಯೂ ಕರ್ಮ ನಿಮ್ಮನ್ನು ಹಿಂಬಾಲಿಸುತ್ತದೆ' ಎಂದು ಟ್ವೀಟ್ ಮಾಡಿದ್ದಾರೆ. ಆದರೆ, ಅವರು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ.

ಐಎಎಸ್‌ ಅಧಿಕಾರಿಯಾಗಿದ್ದ ಡಿ.ಕೆ. ರವಿ ಅವರು 2015ರಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಆ ಪ್ರಕರಣದಲ್ಲಿ ಸಿಂಧೂರಿ ಅವರ ಹೆಸರು ಕೇಳಿ ಬಂದಿತ್ತು. ಹೀಗಾಗಿ, ಕುಸುಮಾ ಅವರು ರೋಹಿಣಿ ಅವರನ್ನು ಉದ್ದೇಶಿಸಿ ಈ ಟ್ವೀಟ್ ಮಾಡಿದ್ದಾರೆ ಎನ್ನಲಾಗುತ್ತಿದೆ.

ADVERTISEMENT

ಕುಸುಮಾ ಟ್ವೀಟ್‌ ಅನ್ನು ಹಂಚಿಕೊಂಡಿರುವ ರೂಪ, 'ಕುಸುಮಾ, ಒಬ್ಬ ಮಹಿಳೆಯಾಗಿ ನಾನು ನಿಮ್ಮ ನೋವನ್ನು ಅರ್ಥಮಾಡಿಕೊಳ್ಳಬಲ್ಲೆ. ಈ ನೋವು ಹಲವು ಮಹಿಳೆಯರದ್ದೂ ಆಗಿದೆ (ಕೆಲವರು ಐಎಎಸ್‌ನಲ್ಲೂ ಇದ್ದಾರೆ). ಆದರೂ ಅಸಹಯಕಳಾಗಿದ್ದೇನೆ. ಒಂದಲ್ಲ ಒಂದು ದಿನ ಅಪರಾಧಿಯ ವಿರುದ್ಧ (ಅದು ಮಹಿಳೆಯಾಗಿದ್ದರೂ) ಈ ವಿಚಾರದಲ್ಲಿ ನಿಮ್ಮ ಜೊತೆ ಕೆಲವರು ನಿಲ್ಲುತ್ತಾರೆ. 'ಆಕೆ' ಇಂತಹ ಕೆಲಸವನ್ನು ಪುನಃ ಮಾಡದಂತೆ ದೇವರು ಸದ್ಬುದ್ದಿ ನೀಡಲಿ' ಎಂದು ಬರೆದುಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.