ADVERTISEMENT

ಸ್ನಾತಕೋತ್ತರ ಪದವೀಧರರಿಗೆ ಸಿಹಿ ಸುದ್ದಿ

ಉಪನ್ಯಾಸಕರು, ಪ್ರಾಂಶುಪಾಲರ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಿದ ಸರ್ಕಾರ

​ಪ್ರಜಾವಾಣಿ ವಾರ್ತೆ
Published 7 ಮೇ 2019, 2:08 IST
Last Updated 7 ಮೇ 2019, 2:08 IST
   

ಬೆಂಗಳೂರು: ಪದವಿ ಕಾಲೇಜುಗಳ ಉಪನ್ಯಾಸಕರಾಗುವ ಹಂಬಲ ಇರುವವರಿಗೆ ಸರ್ಕಾರ ಸಿಹಿ ಸುದ್ದಿ ನೀಡಿದೆ. ಪ್ರಾಂಶುಪಾಲರು ಹಾಗೂ ಉಪನ್ಯಾಸಕರ ಹುದ್ದೆಗಳ ನೇಮಕಕ್ಕೆ ಸರ್ಕಾರ ತಯಾರಿ ನಡೆಸಿದೆ.

ಸರ್ಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳ 5,100 ಉಪನ್ಯಾಸಕರು ಹಾಗೂ 708 ಪ್ರಾಂಶುಪಾಲರ ಹುದ್ದೆಗಳ ಭರ್ತಿಗೆ ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ. ಲೋಕಸಭೆ ಚುನಾವಣೆಯ ನೀತಿ ಸಂಹಿತೆ ಮುಗಿದ ಬಳಿಕ ಪ್ರಕ್ರಿಯೆಗೆ ಚುರುಕುಗೊಳ್ಳಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಖಾಲಿ ಇರುವ 396 ಪ್ರಾಂಶುಪಾಲರ ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತದೆ. ಇದರ ಜತೆಗೆ ಅನುದಾನಿತ ಕಾಲೇಜುಗಳಲ್ಲಿ ಹೊಸದಾಗಿ 312 ಪ್ರಾಂಶುಪಾಲರ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ.ಈ ಕಾಲೇಜುಗಳಲ್ಲಿ ಪ್ರಾಂಶುಪಾಲರ ಹುದ್ದೆಗಳೇ ಇರಲಿಲ್ಲ. ಹಾಗಾಗಿ ಹೊಸದಾಗಿ ಹುದ್ದೆ ಸೃಷ್ಟಿಸುವ ನಿರ್ಧಾರವನ್ನು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಉಪನ್ಯಾಸಕರ ನೇಮಕ: 1,600 ಉಪನ್ಯಾಸಕರ ಹುದ್ದೆಗಳು ಖಾಲಿ ಇದ್ದು, ನೇಮಕಾತಿಗೂ ಹಸಿರು ನಿಶಾನೆ ದೊರೆತಿದೆ. ಜತೆಗೆ ಹೊಸದಾಗಿ 3,500 ಉಪನ್ಯಾಸಕರ ಹುದ್ದೆಗಳನ್ನು ಸೃಷ್ಟಿಸಲಾಗುತ್ತಿದೆ. ಖಾಲಿ ಹುದ್ದೆಗಳು ಹಾಗೂ ಹೊಸದಾಗಿ ಸೃಷ್ಟಿಸುವ ಸ್ಥಾನಗಳಿಗೂ ಒಟ್ಟಾಗಿ ನೇಮಕಾತಿ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಮೂಲಗಳು ಖಚಿತಪಡಿಸಿವೆ.

ನೇಮಕಾತಿ ಸಮಯದಲ್ಲಿ ಈಗಾಗಲೇ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿರುವವರಿಗೂ ಆದ್ಯತೆ ನೀಡಲಾಗುತ್ತದೆ. ಭರ್ತಿ ಮಾಡುವ ಒಟ್ಟು ಸ್ಥಾನಗಳಲ್ಲಿ ಅರ್ಧದಷ್ಟು ಹುದ್ದೆಗಳನ್ನು ಅತಿಥಿ ಉಪನ್ಯಾಸಕರಿಗೆ ಮೀಸಲಿಡಲಾಗುತ್ತದೆ. ಹುದ್ದೆಗೆ ಬೇಕಾದ ಅರ್ಹತೆ ಹೊಂದಿದವರಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ಅರ್ಹತೆ ಇಲ್ಲದಿದ್ದರೆ ಅತಿಥಿ ಉಪನ್ಯಾಸಕರಾಗಿ ಎಷ್ಟೇ ವರ್ಷಗಳ ಕಾಲ ಕೆಲಸ ನಿರ್ವಹಿಸಿದರೂ ಅವಕಾಶ ಸಿಗುವುದಿಲ್ಲ.

ಮೈಸೂರು ವಿ.ವಿ ಅತಿಥಿ ಉಪನ್ಯಾಸಕರ ಕಾಯಂ ಇಲ್ಲ. ಮೈಸೂರು ವಿಶ್ವವಿದ್ಯಾಲಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರನ್ನು ಕಾಯಂ ಮಾಡುವುದು ಕಷ್ಟಕರ ಎನ್ನಲಾಗುತ್ತಿದೆ.

10 ವರ್ಷಗಳಿಗೂ ಹೆಚ್ಚು ಸಮಯದಿಂದ ಕಾರ್ಯ ನಿರ್ವಹಿಸುತ್ತಿರುವ 59 ಅತಿಥಿ ಉಪನ್ಯಾಸಕರು ತಮ್ಮನ್ನು ಕಾಯಂ ಮಾಡುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಲ್ಲಿ 10 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಉಪನ್ಯಾಸಕರನ್ನು ಕಾಯಂ ಮಾಡಬಹುದು ಎಂದು ಕೋರ್ಟ್ ತೀರ್ಪು ನೀಡಿತ್ತು.

ಅತಿಥಿ ಉಪನ್ಯಾಸಕರ ನೇಮಕಾತಿ ಸಮಯದಲ್ಲಿ ಮೀಸಲಾತಿ ಹಾಗೂ ಯುಜಿಸಿ ನಿಯಮಗಳು ಪಾಲನೆಯಾಗಿಲ್ಲ. ತಾಂತ್ರಿಕ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಕಾಯಂ ಮಾಡದಿರಲು ಉನ್ನತ ಶಿಕ್ಷಣ ಇಲಾಖೆ ನಿರ್ಧರಿಸಿದೆ. ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ ಆದೇಶವನ್ನು ಮರುಪರಿಶೀಲಿಸುವಂತೆ ಕೋರಲಿದೆ.

ನಂತರ ಮುಂದಿನ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ?

ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರ ಗೌರವಧನವನ್ನು ₹ 5 ಸಾವಿರ ಹೆಚ್ಚಳ ಮಾಡಲು ಉನ್ನತ ಶಿಕ್ಷಣ ಇಲಾಖೆ ಮುಂದಾಗಿದೆ.

ಅತಿಥಿ ಉಪನ್ಯಾಸಕರು ಪ್ರಸ್ತುತ ₹11,500 ಹಾಗೂ ಕೆ–ಸೆಟ್, ಯುಜಿಸಿ ತೇರ್ಗಡೆಯಾದವರು ₹ 13,500 ಪಡೆಯುತ್ತಿದ್ದಾರೆ. ಎರಡೂ ಶ್ರೇಣಿಗಳವರಿಗೆ ತಲಾ ₹5 ಸಾವಿರ ಹೆಚ್ಚಿಸುವಂತೆ ಕೋರಿದ ಪ್ರಸ್ತಾವವನ್ನು ಹಣಕಾಸು ಇಲಾಖೆಗೆ ಉನ್ನತ ಶಿಕ್ಷಣ ಇಲಾಖೆ ಸಲ್ಲಿಸಲಿದೆ.

ಅಂಕಿ ಅಂಶ

396

ಪ್ರಾಂಶುಪಾಲ ಹುದ್ದೆಗಳ ನೇಮಕ

312

ಹೊಸದಾಗಿ ಪ್ರಾಂಶುಪಾಲರ ಹುದ್ದೆಗಳ ಸೃಷ್ಟಿ

1,600

ಉಪನ್ಯಾಸಕರ ನೇಮಕ

3,500

ಉಪನ್ಯಾಸಕರ ಹುದ್ದೆ ಸೃಷ್ಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.