ADVERTISEMENT

ವಿಧಾನಮಂಡಲದ ಚಳಿಗಾಲದ ಅಧಿವೇಶನ: ಮೂವರು ನೂತನ ಶಾಸಕರಿಂದ ಪ್ರಮಾಣವಚನ ಸ್ವೀಕಾರ

​ಪ್ರಜಾವಾಣಿ ವಾರ್ತೆ
Published 9 ಡಿಸೆಂಬರ್ 2024, 15:51 IST
Last Updated 9 ಡಿಸೆಂಬರ್ 2024, 15:51 IST
<div class="paragraphs"><p>ಚಳಿಗಾಲದ ಅಧಿವೇಶನ</p></div>

ಚಳಿಗಾಲದ ಅಧಿವೇಶನ

   

ಸುವರ್ಣ ವಿಧಾನಸೌಧ (ಬೆಳಗಾವಿ): ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯ‌ಲ್ಲಿ ಶಾಸಕರಾಗಿ ಆಯ್ಕೆಯಾಗಿರುವ ಈ. ಅನ್ನಪೂರ್ಣ, ಯಾಸೀರ್‌ ಅಹಮದ್ ಪಠಾಣ್ ಮತ್ತು ಸಿ.ಪಿ. ಯೋಗೇಶ್ವರ್ ಅವರು ವಿಧಾನಸಭೆಯಲ್ಲಿ ಸೋಮವಾರ ಪ್ರಮಾಣವಚನ ಸ್ವೀಕರಿಸಿದರು.

ವಿಧಾನಮಂಡಲದ ಚಳಿಗಾಲದ ಅಧಿವೇಶನದ ಮೊದಲ ದಿನ ಕಲಾಪ ಆರಂಭವಾಗುತ್ತಿದ್ದಂತೆಯೇ ಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಮೂವರು ಹೊಸ ಶಾಸಕರಿಗೆ ಪ್ರಮಾಣ ಬೋಧಿಸಿದರು. ಅನ್ನಪೂರ್ಣ ಮತ್ತು ಯೋಗೇಶ್ವರ್ ಅವರು ಭಗವಂತನ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರೆ, ಯಾಸೀರ್‌ ಅಹಮದ್ ಅವರು ತಂದೆ– ತಾಯಿ ಮತ್ತು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿದರು.

ADVERTISEMENT

ಶಾಸಕರಾಗಿದ್ದ ಈ. ತುಕಾರಾಂ (ಸಂಡೂರು), ಬಸವರಾಜ ಬೊಮ್ಮಾಯಿ (ಶಿಗ್ಗಾವಿ) ಮತ್ತು ಎಚ್.ಡಿ. ಕುಮಾರಸ್ವಾಮಿ (ಚನ್ನಪಟ್ಟಣ) ಅವರು ಸಂಸದರಾಗಿ ಆಯ್ಕೆಯಾಗಿದ್ದರಿಂದ ಈ ಮೂರೂ ಕ್ಷೇತ್ರಗಳು ತೆರವಾಗಿದ್ದವು. ನವೆಂಬರ್‌ನಲ್ಲಿ ನಡೆದ ಉಪ ಚುನಾವಣೆಯಲ್ಲಿ ಸಂಡೂರು ಕ್ಷೇತ್ರದಿಂದ ಅನ್ನಪೂರ್ಣ, ಶಿಗ್ಗಾವಿಯಿಂದ ಯಾಸೀರ್ ಅಹಮದ್ ಮತ್ತು ಚನ್ನಪಟ್ಟಣದಿಂದ ಯೋಗೇಶ್ವರ್ ಆಯ್ಕೆಯಾಗಿದ್ದಾರೆ.

ಯಾಸಿರ್ ಅಹಮದ್ ಪ್ರಮಾಣ ವಚನ ಸ್ವೀಕರಿಸಲು ಬರುತ್ತಿದ್ದಂತೆಯೇ ‘ಇದು ಬಿಜೆಪಿಯಿಂದ ಗೆದ್ದದ್ದು’ ಎಂದು ಕಾಂಗ್ರೆಸ್‌ನ ಶಾಸಕರು ಜೋರಾಗಿ ಹೇಳಿದರು. ಯೋಗೇಶ್ವರ್ ಪ್ರಮಾಣವಚನಕ್ಕೆ ಬಂದಾಗ, ‘ಯತ್ನಾಳ್ ಸರ್, ಈಗ ಎಲ್ಲರಿಗಿಂತ ನಿಮಗೆ ಹೆಚ್ಚು ಖುಷಿಯಾಗಿದೆ’ ಎಂದು ವಸತಿ ಸಚಿವ ಬಿ.ಜೆಡ್. ಜಮೀರ್ ಅಹಮದ್ ಖಾನ್ ಹೇಳಿದರು.

ಗ್ಯಾಲರಿಯಲ್ಲಿ ಪತಿಯ ಸಂತಸ: ಅನ್ನಪೂರ್ಣ ಅವರು ಪ್ರಮಾಣವಚನ ಸ್ವೀಕರಿಸುವಾಗ ಬಳ್ಳಾರಿ ಸಂಸದರೂ ಆಗಿರುವ ಅವರ ಪತಿ ಈ. ತುಕಾರಾಂ ಅವರು ವಿಧಾನಸಭೆಯ ಮಾಧ್ಯಮ ಪ್ರತಿನಿಧಿಗಳ ಗ್ಯಾಲರಿಯಲ್ಲಿದ್ದರು.

ಅಲ್ಲಿಂದಲೇ ಪತ್ನಿಯ ಪ್ರಮಾಣವಚನ ವೀಕ್ಷಿಸಿದ ತುಕಾರಾಂ, ಸಂಭ್ರಮಿಸಿದರು. ಜೋರಾಗಿ ಚಪ್ಪಾಳೆಯನ್ನೂ ತಟ್ಟಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.