ADVERTISEMENT

ಬಹಿರಂಗ ಹೇಳಿಕೆ ಬದಲಿಗೆ ಸಿಎಂ ಜೊತೆ ಚರ್ಚಿಸಲಿ: ಸಚಿವ ಸುರೇಶ ಅಂಗಡಿ 

ಕತ್ತಿ ಸಹೋದರರಿಗೆ ಸಚಿವ ಅಂಗಡಿ ಟಾಂಗ್

​ಪ್ರಜಾವಾಣಿ ವಾರ್ತೆ
Published 29 ಮೇ 2020, 12:50 IST
Last Updated 29 ಮೇ 2020, 12:50 IST
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ
ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ    

ಬೆಳಗಾವಿ: ‘ಕತ್ತಿ ಸಹೋದರರು ಏನಾದರೂ ಸಮಸ್ಯೆಗಳಿದ್ದಲ್ಲಿ ಮುಖ್ಯಮಂತ್ರಿ ಬಳಿಗೆ ಹೋಗಿ ಚರ್ಚಿಸಿ ಬಗೆಹರಿಸಿಕೊಳ್ಳಬೇಕು. ಪಕ್ಷದ ಆಂತರಿಕ ವಿಷಯಗಳನ್ನು ಪಕ್ಷದ ವೇದಿಕೆಯಲ್ಲೇ ಚರ್ಚಿಸಬೇಕು. ಮಾಧ್ಯಮದ ಮುಂದೆ ಮಾತನಾಡುವುದು ಸರಿಯಲ್ಲ’ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಟಾಂಗ್ ನೀಡಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಎಲ್ಲವನ್ನೂ ಮಾಧ್ಯಮದ ಮುಂದೆ ಹೇಳಿಕೊಳ್ಳುವ ವ್ಯವಸ್ಥೆ ಪಕ್ಷದಲ್ಲಿಲ್ಲ’ ಎಂದರು.

‘ಬಿಜೆಪಿ ರಾಜ್ಯ ಘಟಕದಲ್ಲಿ ಯಾವುದೇ ಭಿನ್ನಮತ ಇಲ್ಲ. ಯಾರಾದರೂ ಶಾಸಕರು ಊಟಕ್ಕೆ ಸೇರಿದರೆಂದ ಮಾತ್ರಕ್ಕೆ ಭಿನ್ನಮತ ಎಂದು ಭಾವಿಸಬೇಕಿಲ್ಲ. ಇಂಥದ್ದೆಲ್ಲವನ್ನೂ ಮುಖ್ಯಮಂತ್ರಿ ಹಾಗೂ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್ ಸಮರ್ಥವಾಗಿ ನಿಭಾಯಿಸುತ್ತಾರೆ. ಹಲವು ದಿನಗಳ ನಂತರ ಸೇರಿದ್ದ ಶಾಸಕರು ಜೊತೆಯಲ್ಲಿ ಊಟ ಮಾಡಿದ್ದಾರೆ. ಇದನ್ನೇ ಬೇರೆ ರೀತಿ ಬಿಂಬಿಸುವುದು ಸರಿಯಲ್ಲ’. ‘ಹಿರಿಯರಾದ ಉಮೇಶ ಕತ್ತಿ ಅವರು ಬಹಿರಂಗವಾಗಿ ಹೇಳಿಕೆ ಕೊಡಬಾರದು’ ಎಂದರು.

ADVERTISEMENT

‘ಆಂತರಿಕ ಪ್ರಜಾಪ್ರಭುತ್ವವಿರುವ ಯಾವುದಾದರೂ ಪಕ್ಷವಿದ್ದರೆ ಅದು ಬಿಜೆಪಿ ಮಾತ್ರ. ಅದನ್ನು ನಿಭಾಯಿಸುವ ಶಕ್ತಿ ರಾಷ್ಟ್ರೀಯ ನಾಯಕರಿಗೆ ಇದೆ. ‌ಯಡಿಯೂರಪ್ಪ ಸ್ಥಾನ ಸುಭದ್ರವಾಗಿದೆ. ಎಲ್ಲ ಸಮಸ್ಯೆಗಳನ್ನೂ ಬರೆಹರಿಸುತ್ತಾರೆ. ಭಿನ್ನಮತ ಮಾಡುವುದಕ್ಕೆ ಪಕ್ಷವು ಯಾರಿಗೂ ಅವಕಾಶ ಕೊಡುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

‘ರಮೇಶ ಕತ್ತಿ ಪಕ್ಷದ ಹಿರಿಯ ನಾಯಕರಿದ್ದಾರೆ. ಎಲ್ಲರೂ ಆಕಾಂಕ್ಷಿಗಳೇ, ಹುದ್ದೆಗಳಿಗೆ ಆಸೆ ಪಡಲೂಬಹುದು. ಅದನ್ನು ಬೀದಿಯಲ್ಲಿ ಹೇಳಿಕೊಂಡರೆ ಏನರ್ಥ? ರಾಜ್ಯಸಭಾ ಸದಸ್ಯ ಸ್ಥಾನಕ್ಕೆ ಪಕ್ಷ ಟಿಕೆಟ್‌ ಕೊಡುವವರನ್ನು ನಾವು ಬೆಂಬಲಿಸುತ್ತೇವೆ. ಎಲ್ಲರೂ ಅದೇ ಕೆಲಸ ಮಾಡುತ್ತಾರೆ’. ‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಬೇಕು ಎಂಬ ಯತ್ನ ಪಕ್ಷದ ಒಳಗೇ ನಡೆಯುತ್ತಿದೆಯಂತಲ್ಲಾ’ ಎಂಬ ಪ್ರಶ್ನೆಗೆ, ‘ನಿಮ್ಮಿಂದಲೇ ಈ ವಿಷಯ ಕೇಳುತ್ತಿದ್ದೇನೆ. ಆ ರೀತಿಯ ಚರ್ಚೆ ಪಕ್ಷದಲ್ಲಿ ನಡೆದಿಲ್ಲ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.