
ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹಂಚಿಕೆಯಾಗದ ಮತ್ತು ಸ್ಥಗಿತಗೊಂಡಿರುವ 569 ಮದ್ಯದಂಗಡಿ ಸನ್ನದುಗಳ ಹರಾಜು ಪ್ರಕ್ರಿಯೆಗೆ ಅಬಕಾರಿ ಇಲಾಖೆಯು ಚಾಲನೆ ನೀಡಿದೆ.
ಬಳಕೆಯಲ್ಲಿ ಇಲ್ಲದ ಸನ್ನದುಗಳನ್ನು ಪಾರದರ್ಶಕ ಇ–ಹರಾಜು ಮೂಲಕ ಹಂಚಿಕೆ ಮಾಡಲಾಗುತ್ತದೆ ಎಂದು 2025–26ನೇ ಸಾಲಿನ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದ್ದರು. ಅದರಂತೆ ಸೋಮವಾರದಿಂದಲೇ (22ನೇ ಡಿಸೆಂಬರ್) ಹರಾಜು ಪ್ರಕ್ರಿಯೆ ಆರಂಭವಾಗಲಿದೆ ಎಂದು ಅಬಕಾರಿ ಇಲಾಖೆಯ ಪ್ರಕಟಣೆ ತಿಳಿಸಿದೆ.
ಸ್ಥಗಿತಗೊಂಡಿರುವ ಹಾಗೂ ಹಂಚಿಕೆಯಾಗದೇ ಇರುವ ಸಿಎಲ್–2 ಮತ್ತು ಸಿಎಲ್–11ಸಿ ಸನ್ನದುಗಳನ್ನು ಈ ಹರಾಜು ಪ್ರಕ್ರಿಯೆ ಅಡಿಯಲ್ಲಿ ‘ಸಿಎಲ್–2ಎ’ ಎಂದು ವರ್ಗೀಕರಿಸಲಾಗಿದೆ. ಸ್ಥಗಿತಗೊಂಡಿರುವ ಸಿಎಲ್–9 ಸನ್ನದುಗಳನ್ನು ‘ಸಿಎಲ್–9ಎ’ ಎಂದು ಮರುಹೆಸರಿಸಲಾಗಿದೆ. ಈ ಪ್ರಕಾರ 477 ಸಿಎಲ್–2ಎ ಮತ್ತು 92 ಸಿಎಲ್–9ಎ ಸನ್ನದುಗಳು ಹರಾಜಿಗೆ ಲಭ್ಯವಿವೆ.
ಯಾವುದೇ ವ್ಯಕ್ತಿ, ಏಕವ್ಯಕ್ತಿ ಮಾಲೀಕತ್ವದ ಸಂಸ್ಥೆ, ಟ್ರಸ್ಟ್, ಸೊಸೈಟಿ, ಪಾಲುದಾರಿಕೆ ಸಂಸ್ಥೆ, ಸೀಮಿತ ಪಾಲುದಾರಿಕೆ ಸಂಸ್ಥೆಗಳು ಇ–ಹರಾಜಿನಲ್ಲಿ ಭಾಗವಹಿಸಬಹುದಾಗಿದೆ.
ಇ–ಹರಾಜು ಪ್ರಕ್ರಿಯೆಯನ್ನು ಭಾರತ ಸರ್ಕಾರದ ಎಂಎಸ್‌ಟಿಸಿ ಲಿಮಿಟೆಡ್‌ನ ಇ–ಪೋರ್ಟಲ್‌ನಲ್ಲಿ ನಡೆಸಲಾಗುತ್ತದೆ. ಹರಾಜಿನಲ್ಲಿ ಭಾಗವಹಿಸಲು ಬಯಸುವವರು ಎಂಎಸ್‌ಟಿಸಿ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಳ್ಳಬೇಕು. ಪ್ರತಿ ನೋಂದಣಿಗೆ ₹1,000 ಶುಲ್ಕ ನಿಗದಿಪಡಿಸಲಾಗಿದೆ ಎಂದು ಇಲಾಖೆಯ ಪ್ರಕಟಣೆ ತಿಳಿಸಿದೆ.
ಅರ್ಜಿಗೆ ₹50,000 ಶುಲ್ಕ
ಒಂದು ನೋಂದಣಿ ಅಡಿಯಲ್ಲಿ ಹಲವು ಸನ್ನದುಗಳಿಗಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಪ್ರತಿ ಅರ್ಜಿಗೆ ₹50,000 ಶುಲ್ಕವನ್ನು ಪ್ರತ್ಯೇಕವಾಗಿ ಪಾವತಿ ಮಾಡಬೇಕು. ಅರ್ಜಿ ಶುಲ್ಕವನ್ನು ವಾಪಸ್ ಮಾಡಲಾಗುವುದಿಲ್ಲ. ಜತೆಗೆ ಪ್ರತಿ ಸನ್ನದಿಗೆ ಸಲ್ಲಿಸುವ ಅರ್ಜಿಯ ಜತೆಗೆ, ಸನ್ನದಿನ ಮೂಲ ಬೆಲೆಯ ಶೇ 2ರಷ್ಟು ಇಎಂಡಿ ಇರಿಸಬೇಕಾಗುತ್ತದೆ. ಹರಾಜು ಮೊತ್ತ ಹೆಚ್ಚಳದ ವೇಳೆ ಕನಿಷ್ಠ ₹2 ಲಕ್ಷ ಅಥವಾ ಅದರ ಗುಣಾಕಾರದಷ್ಟು (ಉದಾಹರಣೆಗೆ ₹4 ಲಕ್ಷ/₹ 6 ಲಕ್ಷ/ ₹8 ಲಕ್ಷ) ಮೊತ್ತವನ್ನು ನಮೂದಿಸಬೇಕಾಗುತ್ತದೆ ಎಂದು ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.