ADVERTISEMENT

ರೈತರಿಗೆ ಎಂದಿನಂತೆ ಬೆಳೆ ಸಾಲ ವಿತರಣೆ: ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2020, 5:49 IST
Last Updated 19 ಏಪ್ರಿಲ್ 2020, 5:49 IST
ಸಚಿವ ಎಸ್.ಟಿ.ಸೋಮಶೇಖರ್ ಅವರು ರಾಮನಗರಕ್ಕೆ ಭೇಟಿ ನೀಡಿದ್ದರು.
ಸಚಿವ ಎಸ್.ಟಿ.ಸೋಮಶೇಖರ್ ಅವರು ರಾಮನಗರಕ್ಕೆ ಭೇಟಿ ನೀಡಿದ್ದರು.   

ರಾಮನಗರ: ಸಹಕಾರ ಬ್ಯಾಂಕ್ ಹಾಗೂ ಸಂಘಗಳ ಮೂಲಕ ಈ ವರ್ಷವೂ ರೈತರಿಗೆ ಎಂದಿನಂತೆ ಬೆಳೆ ಸಾಲ ಸಿಗಲಿದೆ. ಇನ್ನೆರಡು ದಿನದಲ್ಲಿ ಈ ಬಗ್ಗೆ ಮಾಹಿತಿ‌ ನೀಡಲಾಗುವುದು ಎಂದು ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ತಿಳಿಸಿದರು.

ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಗೆ ಭಾನುವಾರ ಭೇಟಿ ಮಾಡಿರೈತರು, ವರ್ತಕರ ಸಮಸ್ಯೆ ಆಲಿಸಿದ ಸಂದರ್ಭ ಅವರು ಮಾತನಾಡಿದರು. ಕಳೆದ ವರ್ಷ ರೈತರಿಗೆ 13 ಸಾವಿರ ಕೋಟಿ ಬೆಳೆ ಸಾಲ ನೀಡಲಾಗಿತ್ತು. ಈ ವರ್ಷವೂ ಅಷ್ಟೇ ಪ್ರಮಾಣದ ಸಾಲ ವಿತರಣೆ ಆಗಲಿದೆ ಎಂದರು.

ಬೆಳೆನಷ್ಟಕ್ಕೆ ಪರಿಹಾರ: ಯಾವ ಬೆಳೆಗಳು ಮಾರಾಟವಾಗದೇ ಹೊಲದಲ್ಲೇ ಉಳಿಯುತ್ತದೆಯೋ ಅಂತಹದ್ದಕ್ಕೆ ಮಾತ್ರ ಸರ್ಕಾರ ಬೆಳೆನಷ್ಟ ಪರಿಹಾರ ನೀಡಲಿದೆ. ಬೆಂಗಳೂರಿನ‌ 1400 ಅಪಾರ್ಟ್ಮೆಂಟ್‌ಗಳಿಗೆ ಈಗಾಗಲೇ ತರಕಾರಿ ಪೂರೈಕೆ ಮಾಡಲಾಗುತ್ತಿದೆ. ರೈತರು ಎಷ್ಟೇ ಉತ್ಪನ್ನ ತಂದರೂ‌ ಖರೀದಿ ಮಾಡಿ‌ ಮಾರಾಟ ಮಾಡುವಂತೆ ಹಾಪ್‌ಕಾಮ್ಸ್‌ಗಳಿಗೆ ಸೂಚಿಸಲಾಗಿದೆ ಎಂದರು.

ADVERTISEMENT

ಲಾಕ್‌ಡೌನ್ ಸಡಿಲಿಕೆ ಸಂಬಂಧ ಸರ್ಕಾರ ಕೆಲವು‌ ನಿರ್ಧಾರಗಳನ್ನು‌ ತೆಗೆದುಕೊಂಡಿದೆ. ಈ ಸಂಬಂಧ ಚರ್ಚೆಗೆ ಸೋಮವಾರ ಮುಖ್ಯಮಂತ್ರಿಗಳು ಸಚಿವ ಸಂಪುಟ ಸಭೆ ಕರೆದಿದ್ದಾರೆ. ರಾಜ್ಯದಲ್ಲಿ ಕೃಷಿ‌ ಉತ್ಪನ್ನಗಳ ಸಾಗಾಟ ಮತ್ತು ಮಾರಾಟಕ್ಕೆ ಯಾವುದೇ ಪಾಸ್ ಬೇಕಿಲ್ಲ. ರೈತರು ಬೆಂಗಳೂರಿನಲ್ಲಿ ಸಹ ತರಕಾರಿಯನ್ನು ಯಾವುದೇ ಅಡ್ಡಿ ಇಲ್ಲದೇ ಮಾರಬಹುದಾಗಿದೆ ಎಂದರು.

ಕೊರೊನಾ ವಿರುದ್ಧ ಜಾಗೃತಿ ಮೂಡಿಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ಬಮೂಲ್ ಈಗಾಗಲೇ ತಲಾ 3 ಸಾವಿರ ರೂಪಾಯಿ ಪ್ರೋತ್ಸಾಹ ಧನ ಘೋಷಿಸಿದೆ. ಕೆಲವು ಸಂಘಗಳು 5 ಸಾವಿರ ನೀಡುತ್ತಿವೆ. ರಾಜ್ಯದಲ್ಲಿನ ಇತರ ಹಾಲು ಉತ್ಪಾದಕ ಸಂಘಗಳೂ ಈ ನಡೆ ಅನುಸರಿಸಬೇಕು ಎಂದು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.