ADVERTISEMENT

ಸಾಕಿದ ಕೋಳಿ, ಹಂದಿ ಮಾರಾಟ: ಅವಕಾಶಕ್ಕೆ ಒತ್ತಾಯ

ಲಾಕ್‍ಡೌನ್ ವಿನಾಯಿತಿ ಸಮಯ ವಿಸ್ತರಿಸಲು ಮಂಡುವಂಡ ಬಿ. ಜೋಯಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2020, 10:39 IST
Last Updated 11 ಏಪ್ರಿಲ್ 2020, 10:39 IST
ಬಿ. ಜೋಯಪ್ಪ
ಬಿ. ಜೋಯಪ್ಪ   

ಮಡಿಕೇರಿ: ಲಾಕ್‍ಡೌನ್ ವಿನಾಯಿತಿಯನ್ನು ವಾರದ ಮೂರು ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 12ರ ತನಕ ನೀಡುವ ಬದಲು, ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5 ಗಂಟೆ ತನಕ ನೀಡಿದರೆ ಜನಜಂಗುಳಿ ಏರ್ಪಡುವುದಿಲ್ಲ. ಜಿಲ್ಲೆಯ ಜನರ ಕೆಲಸ, ಕಾರ್ಯಗಳಿಗೂ ಅನುಕೂಲವಾಗಲಿದೆ ಎಂದು ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಮಂಡುವಂಡ ಬಿ. ಜೋಯಪ್ಪ ಸಲಹೆ ನೀಡಿದ್ದಾರೆ.

ಕೊರೊನಾ ವೈರಸ್ ಹರಡದಂತೆ ತಡೆಯಲು ಜಿಲ್ಲಾಡಳಿತ ತೆಗೆದುಕೊಂಡಿರುವ ಕ್ರಮಗಳು ಸ್ವಾಗತಾರ್ಹ. ಆದರೆ, ವಾರದ ಮೂರು ದಿನದ ವಿನಾಯಿತಿ ಮತ್ತು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ವಸ್ತುಗಳ ಖರೀದಿಗೆ ಅವಕಾಶ ನೀಡಿರುವುದರಿಂದ ಜನಸಂದಣಿ ಹೆಚ್ಚಾಗುತ್ತಿದೆ. ಇದು ಲಾಕ್‍ಡೌನ್‌ನ ಉದ್ದೇಶ ವಿಫಲಗೊಳಿಸುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 5ರ ತನಕ ಸಮಯಾವಕಾಶ ನೀಡಿದರೆ, ಯಾವ ಅಂಗಡಿಯ ಮುಂದೆಯೂ ನೂಕುನುಗ್ಗಲು ಇರುವುದಿಲ್ಲ. ತಮ್ಮ ಅನುಕೂಲದ ಸಮಯದಲ್ಲಿ ಜನರು ಬಂದು ಅಗತ್ಯ ವಸ್ತುಗಳನ್ನು ಕೊಂಡು ಮರಳುತ್ತಾರೆ. ಕೊಡಗಿನಲ್ಲಿ ಸೋಂಕು ನಿಯಂತ್ರಣದಲ್ಲಿರುವುದರಿಂದ ಜನರ ಸಂಚಾರಕ್ಕೆ ಮುಕ್ತ ಅವಕಾಶವನ್ನು ಕಲ್ಪಿಸುವ ಕುರಿತು ಜಿಲ್ಲಾಡಳಿತ ಚಿಂತನೆ ನಡೆಸಬೇಕೆಂದು ಜೋಯಪ್ಪ ಮನವಿ ಮಾಡಿದ್ದಾರೆ.

ADVERTISEMENT

ಎಲ್ಲ ವರ್ಗದ ಜನರ ಸಂಕಷ್ಟಕ್ಕೆ ಸಿಲುಕಿರುವುದರಿಂದ ಆಟೊ ರಿಕ್ಷಾ, ಗೂಡ್ಸ್ ಆಟೋ, ಟ್ಯಾಕ್ಸಿ, ಲಾರಿ, ಟಿಪ್ಪರ್ ಮತ್ತು ಸ್ವಂತ ವಾಹನಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಆದರೆ, ಹೊರ ಜಿಲ್ಲೆಯ ವಾಹನಗಳ ಮತ್ತು ಜನರ ಸಂಚಾರವನ್ನು ನಿರ್ಬಂಧಿಸಬೇಕು. ಮಳೆಗಾಲ ಆರಂಭವಾಗುವುದಕ್ಕೂ ಮೊದಲು ಕೊಡಗಿನಲ್ಲಿ ಕೃಷಿ ಚಟುವಟಿಕೆಗಳಿಗೆ ತಯಾರಿ ನಡೆಯಬೇಕಾಗಿದೆ. ಗ್ರಾಮೀಣ ಪ್ರದೇಶಗಳಲ್ಲಿ ಮನೆಗಳ ದುರಸ್ತಿ ಕಾರ್ಯ ನಡೆಯಬೇಕಾಗಿದೆ. ಇವುಗಳಿಗೆ ಸಂಬಂಧಿಸಿದ ಸಾಮಗ್ರಿಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಹೆಚ್ಚಿನ ಸಮಯಾವಾಕಾಶ ನೀಡಬೇಕು. ರೈತರು ಬೆಳೆದ ಕೃಷಿ ಫಸಲು, ಸಾಕಿದ ಕೋಳಿ, ಕುರಿ, ಹಂದಿ, ಮೀನುಗಳನ್ನು ಮಾರಾಟ ಮಾಡಲು ಅನುಕೂಲ ಕಲ್ಪಿಸಬೇಕು ಎಂದು ಕೋರಿದ್ದಾರೆ.

ಕಾರ್ಮಿಕರ ಸ್ಥಿತಿ ಶೋಚನೀಯವಾಗಿದೆ. ಅಂತರ ಕಾಯ್ದುಕೊಂಡು ಕೆಲಸ ನಿರ್ವಹಿಸಲು ಅನುಮತಿ ನೀಡಬೇಕು. ಅರ್ಧದಲ್ಲೇ ಸ್ಥಗಿತಗೊಂಡಿರುವ ವಿವಿಧ ಇಲಾಖೆಗಳ ಕಾಮಗಾರಿಗಳನ್ನು ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಅವಕಾಶ ನೀಡಬೇಕು. ಕಂದಾಯ ಇಲಾಖೆ, ತಾಲ್ಲೂಕು ಕಚೇರಿ ಸೇರಿದಂತೆ ಸರ್ಕಾರಿ ಕಚೇರಿಗಳಲ್ಲಿ ಬಾಕಿಯಿರುವ ಅರ್ಜಿಗಳ ವಿಲೇವಾರಿಗೆ ಸಾರ್ವಜನಿಕರಿಗೆ ಸೂಕ್ತ ವಾತಾವರಣ ಸೃಷ್ಟಿಸಬೇಕು. ಹೋಟೆಲ್‌, ಮೆಸ್ ಮತ್ತು ರಸ್ತೆ ಬದಿ ಆಹಾರ ಸೇವನೆಗೆ ಅವಕಾಶ ನೀಡಬಾರದು. ಈ ರೀತಿಯ ಕ್ರಮಗಳನ್ನು ಕೈಗೊಳ್ಳುವುದರೊಂದಿಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದನ್ನು ಸಾರ್ವಜನಿಕರಿಗೆ ಕಡ್ಡಾಯಗೊಳಿಸಬೇಕು ಎಂದು ಜೋಯಪ್ಪ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.