ADVERTISEMENT

ಕೋವಿಡ್ ಹೆಚ್ಚಳ: ರಾಜ್ಯದಲ್ಲಿ ಮೇ 31ರವರೆಗೂ ಲಾಕ್‌ಡೌನ್‌?

ಸಚಿವ ಆರ್‌.ಅಶೋಕ್‌ ಪ್ರತಿಪಾದನೆ

​ಪ್ರಜಾವಾಣಿ ವಾರ್ತೆ
Published 14 ಮೇ 2021, 20:57 IST
Last Updated 14 ಮೇ 2021, 20:57 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ವಿಧಿಸಿದ್ದರೂ ಕೋವಿಡ್‌ ಪ್ರಕರಣಗಳ ಸಂಖ್ಯೆ ಇಳಿಯದ ಕಾರಣ ಮೇ ಅಂತ್ಯದವರೆಗೂ ಲಾಕ್‌ಡೌನ್‌ ಮುಂದುವರಿಸಲು ಸರ್ಕಾರ ಚಿಂತನೆ ನಡೆಸಿದೆ.

ಮೇ 10ರಿಂದ ಜಾರಿಯಲ್ಲಿರುವ ಲಾಕ್‌ಡೌನ್ ಮೇ 24ರ ಮುಂಜಾನೆಗೆ ಕೊನೆಯಾಗಲಿದೆ. ಇದನ್ನು ಮೇ 31ರವರೆಗೂ ವಿಸ್ತರಿಸಬೇಕು ಎಂಬ ಚರ್ಚೆ ಶುರುವಾಗಿದೆ.

ಏತನ್ಮಧ್ಯೆ, ಹಲವು ಸಚಿವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಲಾಕ್‌ಡೌನ್ ಅನ್ನು ಮುಂದುವರಿಸಲು ಒತ್ತಡ ಹೇರಿದ್ದಾರೆ. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಯಡಿಯೂರಪ್ಪ ಅವರು ಮೇ 24ಕ್ಕೆ ಮೂರು ದಿನ ಮೊದಲು ಸಭೆ ಸೇರಿ ಸೂಕ್ತ ನಿರ್ಧಾರ ತೆಗೆದುಕೊಳ್ಳೋಣ ಎಂದು ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ಬೆಂಗಳೂರು, ಮತ್ತಿತರ ನಗರಗಳಿಂದ ಹಳ್ಳಿಗಳಿಗೆ ಜನ ವಲಸೆ ಹೋಗಿದ್ದಾರೆ. ಅಲ್ಲೂ ಸೋಂಕು ವ್ಯಾಪಿಸುವ ಸಾಧ್ಯತೆ ಇದೆ. ಆದ್ದರಿಂದ, ಲಾಕ್‌ಡೌನ್‌ ವಿಸ್ತರಿಸಬೇಕು. ಲಾಕ್‌ಡೌನ್ ತೆರವು ಮಾಡಿದರೆ ಮರುದಿನವೇ ಜನರು ಬೀದಿಗೆ ಬಂದು ಮೊದಲಿನಂತೆ ವರ್ತಿಸುತ್ತಾರೆ. ಇದರಿಂದ ಕೋವಿಡ್‌ ಮತ್ತಷ್ಟು ಉಲ್ಬಣಿಸುತ್ತದೆ ಎಂದು ತಜ್ಞರೂ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ ಎಂದು ಮೂಲಗಳು ಹೇಳಿವೆ.

ಸಚಿವ ಅಶೋಕ ಪ್ರತಿಪಾದನೆ
ಮೇ 24 ರ ಬಳಿಕ ಲಾಕ್‌ಡೌನ್‌ ವಿಸ್ತರಿಸಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ ಬಲವಾಗಿ ಪ್ರತಿಪಾದಿಸಿದ್ದಾರೆ. ಈ ಸಂಬಂಧ ಮುಖ್ಯಮಂತ್ರಿಯವರ ಮನವೊಲಿ ಸುವುದಾಗಿ ಅವರು ಸುದ್ದಿಗಾರರಿಗೆಶುಕ್ರವಾರ ತಿಳಿಸಿದರು.

‘ಇನ್ನೂ ಕೆಲವು ದಿನ ಲಾಕ್‌ಡೌನ್ ಮುಂದುವರಿಸುವುದರಿಂದ ಕೊರೊನಾ ಹರಡುವಿಕೆಯನ್ನು ನಿಯಂತ್ರಣಕ್ಕೆ ತರಲು ಸಾಧ್ಯ. ಬೆಂಗಳೂರಿನ ಒಬ್ಬ ಸಾಮಾನ್ಯ ಪ್ರಜೆಯಾಗಿ ಈ ಮಾತು ಹೇಳುತ್ತಿದ್ದೇನೆ. ಈಗಿನ ಲಾಕ್‌ಡೌನ್ ಮುಗಿಯುವುದಕ್ಕೆ 3–4 ದಿನ ಮೊದಲು ಮುಖ್ಯಮಂತ್ರಿಯವರು ಸಭೆ ಕರೆಯಲಿದ್ದಾರೆ, ಅಲ್ಲಿ ನನ್ನ ಅಭಿಪ್ರಾಯ ತಿಳಿಸುತ್ತೇನೆ’ ಎಂದು ಹೇಳಿದರು.

ಟ್ವೀಟ್‌ಗೆ ಸೀಮಿತರಾದ ಸಿದ್ದರಾಮಯ್ಯ

ಸರ್ಕಾರದ ವಿರುದ್ಧ ಪ್ರತಿದಿನ ಟೀಕೆ ಮಾಡುತ್ತಿರುವ ಸಿದ್ದರಾಮಯ್ಯ ಜನರ ಮಧ್ಯೆ ಹೋಗಿ, ಕಷ್ಟ ಸುಖ ಆಲಿಸುತ್ತಿದ್ದಾರೆಯೇ? ನಾವು ಜನರ ಮಧ್ಯೆ ಓಡಾಡಿ 24 ಗಂಟೆ ಕೆಲಸ ಮಾಡುತ್ತಿದ್ದೇವೆ. ಅವರು ಮನೆಯಲ್ಲಿ ಕುಳಿತು ಟ್ವೀಟ್‌ ಮಾಡುವುದಕ್ಕೆ ಸೀಮಿತರಾಗಿದ್ದಾರೆ ಎಂದು ಅಶೋಕ ಹೇಳಿದರು.

ಮೋದಿ ಎಲ್ಲಿದ್ದು ಏನು ಕೆಲಸ ಮಾಡುತ್ತಿದ್ದಾರೆ ಎಂಬುದು ಜನರಿಗೆ ಗೊತ್ತು. ಸಿದ್ದರಾಮಯ್ಯ ಎಲ್ಲಿದ್ದಾರೆ ಎಂದರೆ ಟ್ವೀಟರ್‌ನಲ್ಲಿದ್ದಾರೆ. ವೃಥಾ ರಾಜಕೀಯ ಮಾಡುವುದನ್ನು ಬಿಟ್ಟು ಸರ್ಕಾರಕ್ಕೆ ಉಪಯುಕ್ತ ಸಲಹೆಗಳನ್ನು ನೀಡಲಿ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.