ADVERTISEMENT

ತುಮಕೂರು | ಬಡವರ ನೆರವಿಗೆ ‘ಬಾಗಿಲು’

ತುಮಕೂರಿನ ಹೆಗ್ಗೆರೆ, ಕ್ಯಾತ್ಸಂದ್ರದಲ್ಲಿ ಆರಂಭ

ಡಿ.ಎಂ.ಕುರ್ಕೆ ಪ್ರಶಾಂತ
Published 29 ಏಪ್ರಿಲ್ 2020, 20:21 IST
Last Updated 29 ಏಪ್ರಿಲ್ 2020, 20:21 IST
ಸೊಪ್ಪು, ತರಕಾರಿ ವಿತರಿಸುವ ಮೂಲಕ ಕ್ಯಾತ್ಸಂದ್ರದಲ್ಲಿ ‘ಬಡವರ ಬಾಗಿಲು’ ಅಂಗಡಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಚಾಲನೆ ನೀಡಿದರು
ಸೊಪ್ಪು, ತರಕಾರಿ ವಿತರಿಸುವ ಮೂಲಕ ಕ್ಯಾತ್ಸಂದ್ರದಲ್ಲಿ ‘ಬಡವರ ಬಾಗಿಲು’ ಅಂಗಡಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಚಾಲನೆ ನೀಡಿದರು   

ತುಮಕೂರು: ನಗರದಲ್ಲಿ ಪೊಲೀಸರು ರೂಪಿಸಿರುವ ‘ಬಡವರ ಬಾಗಿಲು’ ಕಾರ್ಯಕ್ರಮ ಸಾರ್ವಜನಿಕರಿಂದ ಅಪಾರ ಮೆಚ್ಚುಗೆಗೆ ಪಾತ್ರವಾಗಿದೆ.

ಕಡು ಬಡವರಿಗೆ ನೆರವಾಗುವ ಉದ್ದೇಶದಿಂದ ಹೆಗ್ಗೆರೆ ಹಾಗೂ ಕ್ಯಾತ್ಸಂದ್ರದಲ್ಲಿ ‘ಬಡವರ ಬಾಗಿಲು’ ಅಂಗಡಿಗಳನ್ನು ಪೊಲೀಸರು ತೆರೆದಿದ್ದಾರೆ. ಇಲ್ಲಿ ದಾನಿಗಳು, ಸಂಘ ಸಂಸ್ಥೆಗಳ ನೆರವಿನಿಂದ ತರಕಾರಿ, ಬಿಸ್ಕತ್‌, ಬ್ರೆಡ್‌ಗಳನ್ನು ಸಂಗ್ರಹಿಸಲಾಗುತ್ತಿದೆ. ಸಿಬ್ಬಂದಿ, ಸ್ವಂತ ಹಣವನ್ನೂ ವ್ಯಯಿಸುತ್ತಿದ್ದಾರೆ.

ಅಗತ್ಯವಿದ್ದವರು ಇಲ್ಲಿಗೆ ಬಂದು ಪದಾರ್ಥಗಳನ್ನು ಉಚಿತವಾಗಿ ಕೊಂಡೊಯ್ಯಬಹುದು. ಬೆಳಿಗ್ಗೆ 10ರಿಂದ ಸಂಜೆಯವರೆಗೆ ಇದು ತೆರೆದಿರುತ್ತದೆ.

ADVERTISEMENT

ಹೆಗ್ಗೆರೆ ಚೆಕ್‌ಪೋಸ್ಟ್ ಬಳಿ ಈ ಅಂಗಡಿ ಇದೆ. ರ‍್ಯಾಕ್‌ಗಳಲ್ಲಿ ವಸ್ತುಗಳನ್ನು ಸಂಗ್ರಹಿಸಲಾಗಿದೆ. ಚೆಕ್‌ಪೋಸ್ಟ್‌ಗೆ ಕೆಲಸಕ್ಕೆ ನಿಯೋಜಿಸುವ ಸಿಬ್ಬಂದಿ ಮತ್ತು ಇಬ್ಬರು ಕೊರೊನಾ ವಾರಿಯರ್ಸ್ (ಸ್ವಯಂ ಸೇವಕರು) ಅಂಗಡಿ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕ್ಯಾತ್ಸಂದ್ರ ಉರ್ದು ಶಾಲೆ ಆವರಣದಲ್ಲಿ ಅಂಗಡಿ ನಿರ್ಮಿಸಲಾಗಿದೆ.

‘ಹೆಗ್ಗೆರೆಯಲ್ಲಿ ಅಂಗಡಿ ಆರಂಭವಾದ ಮೊದಲ ದಿನವೇ 300ಕ್ಕೂ ಹೆಚ್ಚು ಜನರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ನೀಡಿದೆವು’ ಎಂದು ತುಮಕೂರು ಗ್ರಾಮಾಂತರ ಠಾಣೆ ಪಿಎಸ್‌ಐ ಲಕ್ಷ್ಮಯ್ಯ ಮಾಹಿತಿ ನೀಡಿದರು.

‘ಬಡವರು ಮಾತ್ರ ಬನ್ನಿ’
ಠಾಣೆ ಸಿಬ್ಬಂದಿಯನ್ನು ಅಭಿನಂದಿಸಲಾಗುವುದು ಎಂದು ತಿಳಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ವಂಶಿಕೃಷ್ಣ ಅವರು, ‘ಉತ್ತಮ ಸ್ಥಿತಿಯಲ್ಲಿರುವವರೂ ವಸ್ತುಗಳನ್ನು ಪಡೆದಿರುವುದು ಕಂಡು ಬಂದಿದೆ. ಬಡವರು ಮಾತ್ರ ವಸ್ತುಗಳನ್ನು ಪಡೆಯಲು ಬನ್ನಿ’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.