ADVERTISEMENT

ಮುನಿಸು ಪಕ್ಕಕ್ಕೆ, ಪ್ರತಿಷ್ಠೆ ಪಣಕ್ಕೆ: ನಾಯಕರ ಜಿದ್ದಾಜಿದ್ದಿ

ಮೈಸೂರು ಗೆಲುವಿನಲ್ಲಿ ನನ್ನ ಭವಿಷ್ಯ–ಬಿಎಸ್‌ವೈ: ಚಾಮುಂಡೇಶ್ವರಿಯಲ್ಲಿ ಸ್ಪರ್ಧಿಸಲ್ಲ –ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2019, 20:43 IST
Last Updated 14 ಏಪ್ರಿಲ್ 2019, 20:43 IST
   

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಗರಿಷ್ಠ ಸ್ಥಾನಗಳನ್ನು ಗೆದ್ದು ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳಲು ಜೆಡಿಎಸ್‌– ಕಾಂಗ್ರೆಸ್‌ ನಾಯಕರು ಪಣ ತೊಟ್ಟಿದ್ದರೆ, ‘ಮಿಷನ್‌–22’ರ ಗುರಿಯತ್ತ ಲಕ್ಷ್ಯ ವಹಿಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ‘ಕೈ’ ತಪ್ಪುವ ಕ್ಷೇತ್ರಗಳ ಕಡೆಗೆ ಹೆಚ್ಚಿನ ಚಿತ್ತ ಹರಿಸಿದ್ದಾರೆ.ಭಾವನಾತ್ಮಕ ವಿಚಾರಗಳ ದಾಳಗಳನ್ನೂ ನಾಯಕರು ಉರುಳಿಸಿದ್ದಾರೆ.

ಮೊದಲ ಹಂತದಲ್ಲಿ 14 ಕ್ಷೇತ್ರಗಳ ಮತದಾನ ಇದೇ 18ರಂದು ನಡೆಯಲಿದ್ದು, 16ರಂದು ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಕೊನೆಯ ಹೊತ್ತಿನಲ್ಲಿ ಪ್ರಚಾರದ ಅಬ್ಬರ ಮತ್ತಷ್ಟು ತೀವ್ರಗೊಂಡಿದೆ. ಮಂಡ್ಯದಲ್ಲಿ ಮೈತ್ರಿಕೂಟದ ಅಭ್ಯರ್ಥಿ, ತಮ್ಮ ಪುತ್ರ ನಿಖಿಲ್‌ ಗೆಲುವನ್ನು ಪ್ರತಿಷ್ಠೆಯನ್ನಾಗಿ ಸ್ವೀಕರಿಸಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಬಿರು ಬಿಸಿಲನ್ನೂ ಲೆಕ್ಕಿಸದೆ ಕೊನೆ ಕ್ಷಣದಲ್ಲಿ ಬೆವರು ಹರಿಸುತ್ತಿದ್ದಾರೆ. ನಿಖಿಲ್‌ ಪರವಾಗಿ ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸೋಮವಾರ ಪ್ರಚಾರ ನಡೆಸಲಿದ್ದಾರೆ.

ಮುನಿಸು ಪಕ್ಕಕ್ಕಿಟ್ಟ ನಾಯಕರು: ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಉನ್ನತ ಶಿಕ್ಷಣ ಸಚಿವ ಸಚಿವ ಜಿ.ಟಿ.ದೇವೇಗೌಡ ಅವರು ಪರಸ್ಪರ ಭಿನ್ನಾಭಿಪ್ರಾಯ ಬದಿಗಿರಿಸಿ ಮೈಸೂರು–ಕೊಡಗು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಸಿ.ಎಚ್‌.ವಿಜಯಶಂಕರ್‌ ಪರ ಜಂಟಿ ಪ್ರಚಾರ ಕೈಗೊಂಡರು. ‘ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಐದು ಸಲ ಗೆದ್ದಿದ್ದೇನೆ. ಇನ್ನು ಇಲ್ಲಿ ಸ್ಪರ್ಧೆ ಮಾಡುವುದಿಲ್ಲ. ಇಲ್ಲಿನ ಕಾಂಗ್ರೆಸ್‌– ಜೆಡಿಎಸ್‌ ನಾಯಕರು ಒಟ್ಟಾಗಿ ಕ್ಷೇತ್ರವನ್ನು ಅಭಿವೃದ್ಧಿಪಡಿಸಬೇಕು’ ಎಂದು ಸಿದ್ದರಾಮಯ್ಯ ಹೇಳಿದರು.

ADVERTISEMENT

ವಿಧಾನಸಭಾ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡ ಅವರು ಸಿದ್ದರಾಮಯ್ಯ ವಿರುದ್ಧ 30 ಸಾವಿರಕ್ಕೂ ಅಧಿಕ ಮತಗಳಿಂದ ಗೆದ್ದಿದ್ದರು. ‘ನಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬದಿಗಿರಿಸಿ ಒಂದಾಗಿದ್ದೇವೆ. ಕಾರ್ಯಕರ್ತರು ಕೂಡಒಟ್ಟಾಗಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು’ ಎಂದು ಉಭಯ ನಾಯಕರು ಬೆಂಬಲಿಗರಿಗೆ ಕರೆಕೊಟ್ಟರು.

‘2006ರವರೆಗೆ ನಾನು ಮತ್ತು ಜಿ.ಟಿ.ದೇವೇಗೌಡ ಜತೆಯಾಗಿಯೇ ಇದ್ದೆವು. ಆ ಬಳಿಕ ಬೇರೆ ಬೇರೆಯಾದೆವು. ನನ್ನ ಜತೆಗೇ ಇದ್ದ ಅವ ಕಳೆದ ಬಾರಿ ನನ್ನನ್ನೇ ಸೋಲಿಸಿಲ್ವಾ? ಈಗ ಅವೆಲ್ಲವನ್ನೂ ಮರೆತು ಒಟ್ಟಾಗಿದ್ದೇವೆ. ದೇಶದ ಹಿತಾಸಕ್ತಿಯನ್ನು ಮುಂದಿಟ್ಟು ಪರಸ್ಪರ ಕೈಜೋಡಿಸಿದ್ದೇವೆ’ ಎಂದು ಸಿದ್ದರಾಮಯ್ಯ ತಿಳಿಸಿದರು.

ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಯಡಿಯೂರಪ್ಪ, ‘ಇಲ್ಲಿ ಪ್ರತಾಪಸಿಂಹ ಅವರಿಗೆ ಹಿನ್ನಡೆಯಾದರೆ ಅದು ಯಡಿಯೂರಪ್ಪನ ಸೋಲು. ಅವರ ಗೆಲುವಿನ ಮೇಲೆ ನನ್ನ ಭವಿಷ್ಯ ನಿಂತಿದೆ’ ಎಂದು ಭಿನ್ನವಿಸಿಕೊಂಡರು.

ಗೈರಾದವರ ವಿರುದ್ಧ ಕ್ರಮ: ದಿನೇಶ್
‘ನಿಖಿಲ್ ಕುಮಾರಸ್ವಾಮಿ ಪರ ನಾಗಮಂಗಲದಲ್ಲಿ ನಡೆದ ಜಂಟಿ ಚುನಾವಣಾ ಸಮಾವೇಶಕ್ಕೆ ಚಲುವರಾಯಸ್ವಾಮಿ ಸೇರಿದಂತೆ ಪಕ್ಷದ ಸ್ಥಳೀಯ ನಾಯಕರು ಗೈರಾಗಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ‘ರಾಹುಲ್ ಗಾಂಧಿ ಕಾರ್ಯಕ್ರಮಕ್ಕೂ ಅವರೆಲ್ಲರೂ ಗೈರಾಗಿದ್ದಾರೆ. ಪಕ್ಷದ ವಲಯದಲ್ಲೂ ಈ ಬಗ್ಗೆ ಚರ್ಚಿಸಿದ್ದೇವೆ’ ಎಂದರು.

ನಾವು ಸೋತರೆ ಸರ್ಕಾರ ಇರುತ್ತಾ?
‘ಮೈತ್ರಿ ಸರ್ಕಾರ ಐದು ವರ್ಷ ಇರಬೇಕು. ಲೋಕಸಭೆ ಚುನಾವಣೆಯಲ್ಲಿ ನಾವು 20ಕ್ಕೂ ಹೆಚ್ಚು ಸ್ಥಾನ ಗೆಲ್ಲಬೇಕು. ಇಲ್ಲದಿದ್ದರೆ ಸರ್ಕಾರ ಇರುತ್ತಾ? ಇದನ್ನೆಲ್ಲಾ ತಿಳಿದುಕೊಳ್ಳಬೇಕು’ ಎಂದು ಸಿದ್ದರಾಮಯ್ಯ ಮಾರ್ಮಿಕವಾಗಿ ಹೇಳಿದರು.

ಮೈಸೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದ ಅವರು, ‘ನಾನು ಈಗ ಮಂತ್ರಿಯಾಗಿಲ್ಲ. ಎಚ್‌.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್‌, ಡಿ.ಸಿ. ತಮ್ಮಣ್ಣ, ಸಿ.ಎಸ್‌. ಪುಟ್ಟರಾಜು ಸಚಿವರಾಗಿದ್ದಾರೆ. ಕಾಂಗ್ರೆಸ್‌ನ 22 ಮಂದಿ ಮಂತ್ರಿಗಳಿದ್ದಾರೆ. ಅದು ಬೇರೆ ವಿಚಾರ. ಬಿಜೆಪಿಯವರು ಅಧಿಕಾರಕ್ಕೆ ಬರದ ಹಾಗೆ ನೋಡಿಕೊಳ್ಳಬೇಕಲ್ಲವೇ. ಅದಕ್ಕಲ್ಲವೇ ನಾವು ಒಂದಾಗಿರೋದು’ ಎಂದು ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಜೆಡಿಎಸ್‌ ಕಾರ್ಯಕರ್ತರಿಗೆ ಸೂಚ್ಯವಾಗಿ ತಿಳಿಸಿದರು.

**
ಮೈತ್ರಿ ಧರ್ಮದಂತೆ ಕಾಂಗ್ರೆಸ್‌ ಮುಖಂಡರು ನಿಖಿಲ್‌ ಗೆಲುವಿಗಾಗಿ ಶ್ರಮಿಸಬೇಕು. ಪಕ್ಷದ ತೀರ್ಮಾನಕ್ಕೆ ವಿರುದ್ಧವಾಗಿ ನಡೆದರೆ ಶಿಸ್ತುಕ್ರಮ ಕೈಗೊಳ್ಳುವಂತೆ ರಾಹುಲ್‌ ಗಾಂಧಿ ಸೂಚನೆ ನೀಡಿದ್ದಾರೆ.

- ಜಿ.ಪರಮೇಶ್ವರ, ಉಪಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.