ಲೋಕಾಯುಕ್ತರ ದಿಢೀರ್ ಭೇಟಿ ವೇಳೆ ಹಲವು ಅಕ್ರಮಗಳು ಪತ್ತೆ | ಪ್ರಕರಣ ದಾಖಲಿಸಿ, ತನಿಖೆ ನಡೆಸುವಂತೆ ಸೂಚನೆ | ಎಲ್ಲ ವಿಭಾಗಗಳ ತಪಾಸಣೆ ನಡೆಸಿ, ವರದಿ ನೀಡುವಂತೆ ನಿರ್ದೇಶನ
ಬೆಂಗಳೂರು: ಕಿದ್ವಾಯಿ ಸ್ಮಾರಕ ಕ್ಯಾನ್ಸರ್ ಆಸ್ಪತ್ರೆಯ ಕೆಲ ಸಿಬ್ಬಂದಿಯು ಇಂಥದ್ದೇ ಅಂಗಡಿಗಳಲ್ಲಿ, ಔಷಧಗಳನ್ನು ತೆಗೆದುಕೊಳ್ಳಿ ಎಂದು ರೋಗಿಗಳಿಗೆ ಚೀಟಿ ಬರೆದುಕೊಡುತ್ತಿದ್ದು, ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್.ಪಾಟೀಲ ಅವರ ಭೇಟಿ ವೇಳೆ ಪತ್ತೆಯಾಗಿದೆ.
ಅಂತಹ ಸಿಬ್ಬಂದಿ ವಿರುದ್ಧ ತಕ್ಷಣ ಕ್ರಮ ತೆಗೆದುಕೊಳ್ಳಿ ಎಂದು ಆಸ್ಪತ್ರೆ ನಿರ್ದೇಶಕರಿಗೆ ಲೋಕಾಯುಕ್ತರು ಸೂಚಿಸಿದ್ದಾರೆ.
ಆಸ್ಪತ್ರೆಯ ಔಷಧಾಲಯದಲ್ಲಿ ಔಷಧ ಗಳು ಲಭ್ಯ ಇರುವುದಿಲ್ಲ, ರೋಗಿಗಳನ್ನು ಕಾರಣವಿಲ್ಲದೆ ಅಲೆಸಲಾಗುತ್ತದೆ ಎಂದು ಆರೋಪಿಸಿ ಬರೆಯಲಾಗಿದ್ದ ಅನಾಮಧೇಯ ಪತ್ರದ ಆಧಾರದಲ್ಲಿ ಲೋಕಾಯುಕ್ತರು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದ್ದರು. ಅದರ ಪರಿಶೀಲನೆಗಾಗಿ ಲೋಕಾಯುಕ್ತರು, ಲೋಕಾಯುಕ್ತದ ಅಧಿಕಾರಿಗಳ ಜತೆಗೆ ಕಿದ್ವಾಯಿ ಆಸ್ಪತ್ರೆಗೆ ಶುಕ್ರವಾರ ದಿಢೀರ್ ಭೇಟಿ ನೀಡಿದರು.
ಈ ವೇಳೆ ಹಲವು ರೋಗಿಗಳನ್ನು ಭೇಟಿ ಮಾಡಿ, ಅವರಿಂದ ಮಾಹಿತಿ ಪಡೆದುಕೊಂಡರು. ಆಸ್ಪತ್ರೆಗೆ ಹತ್ತಿರದ ಲಕ್ಕಸಂದ್ರ, ವಿಲ್ಸನ್‌ಗಾರ್ಡನ್‌ನಲ್ಲಿರುವ ಔಷಧದ ಅಂಗಡಿಗಳಲ್ಲೇ ಔಷಧ ತೆಗೆದುಕೊಳ್ಳಿ ಎಂದು ಕೆಲ ಸಿಬ್ಬಂದಿಯು ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸಮೇತ ಬರೆದುಕೊಟ್ಟಿದ್ದ ಚೀಟಿಗಳನ್ನು ರೋಗಿಗಳು ಲೋಕಾಯುಕ್ತರಿಗೆ ತೋರಿಸಿದರು.
ಆಸ್ಪತ್ರೆ ಅಧಿಕಾರಿಗಳನ್ನು ಈ ಬಗ್ಗೆ ಪ್ರಶ್ನಿಸಿದರು. ‘ಈ ಔಷಧಗಳ ದಾಸ್ತಾನು ಮುಗಿದಿದ್ದು, ಪೂರೈಕೆಗೆ ಟೆಂಡರ್ ಕರೆಯುವ ಪ್ರಕ್ರಿಯೆ ಚಾಲ್ತಿಯಲ್ಲಿದೆ’ ಎಂದು ಅಧಿಕಾರಿಗಳು ತಿಳಿಸಿದರು. ಈ ಉತ್ತರದಿಂದ ತೃಪ್ತರಾಗದ ಲೋಕಾಯುಕ್ತರು, ‘ಚೀಟಿ ಬರೆದುಕೊಟ್ಟ ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಿ’ ಎಂದು ನಿರ್ದೇಶನ ನೀಡಿದರು.
‘ಪ್ರಕರಣ ದಾಖಲಿಸಿಕೊಂಡು, ಶೋಧ ವಾರಂಟ್ ಹೊರಡಿಸಿ. ಆಸ್ಪತ್ರೆಯ ಎಲ್ಲ ವಿಭಾಗಗಳಲ್ಲಿ ಶೋಧ ನಡೆಸಿ, ವರದಿ ನೀಡಿ’ ಎಂದು ಲೋಕಾಯುಕ್ತ ಪೊಲೀಸರಿಗೆ ಸೂಚನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.