ADVERTISEMENT

₹2 ಲಕ್ಷ ಲಂಚ: ಈಶಾನ್ಯ ಸೆನ್‌ ಠಾಣೆ ಎಸಿಪಿ, ಎಎಸ್‌ಐ ಬಂಧನ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2025, 3:42 IST
Last Updated 26 ಮಾರ್ಚ್ 2025, 3:42 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ಖಾಸಗಿ ಕಂಪನಿಯೊಂದರ ವೆಬ್‌ಸೈಟ್‌ ಹ್ಯಾಕಿಂಗ್‌ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದಲ್ಲಿ ಆರೋಪಿಗಳನ್ನು ಬಂಧಿಸಲು ₹4 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, ₹ 2 ಲಕ್ಷ ಪಡೆಯುತ್ತಿದ್ದ ಈಶಾನ್ಯ ವಿಭಾಗದ ಸೆನ್‌ ಪೊಲೀಸ್‌ ಠಾಣೆಯ ಎಸಿಪಿ ತನ್ವೀರ್‌ ಎಸ್.ಆರ್.‌ ಮತ್ತು ಸಹಾಯಕ ಸಬ್‌ ಇನ್‌ಸ್ಪೆಕ್ಟರ್‌ (ಎಎಸ್‌ಐ) ಕೃಷ್ಣಮೂರ್ತಿ ಅವರನ್ನು ಲೋಕಾಯುಕ್ತ ಪೊಲೀಸರು ಮಂಗಳವಾರ ತಡರಾತ್ರಿ ಬಂಧಿಸಿದ್ದಾರೆ.

ADVERTISEMENT

ಅದ್ವಿ ಗ್ರೂಪ್‌ ಆಪ್‌ ಕಂಪನೀಸ್‌ ಎಂಬ ಉದ್ಯಮ ಸಮೂಹದ ವೆಬ್‌ಸೈಟ್‌ ಅನ್ನು ಹ್ಯಾಕ್‌ ಮಾಡಿದ್ದ ದುಷ್ಕರ್ಮಿಗಳು, ಅದರಲ್ಲಿ ತಪ್ಪು ಮಾಹಿತಿ ಪ್ರಕಟಿಸಿದ್ದರು. ಇದರಿಂದ ಕಂನಿಗೆ ನಷ್ಟವಾಗುತ್ತಿತ್ತು. ಈ ಸಂಬಂಧ ಕಂಪನಿಯ ಮಾಲೀಕ ಮಧುಸೂದನ್‌ ಬಿ.ಎಸ್‌. ಅವರು ಈಶಾನ್ಯ ವಿಭಾಗದ ಸೆನ್‌ ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದರೂ, ಆರೋಪಿಗಳನ್ನು ಬಂಧಿಸಿರಲಿಲ್ಲ.

ಆರೋಪಿಗಳನ್ನು ಬಂಧಿಸುವಂತೆ ಮಧುಸೂದನ್‌ ಅವರು ಮನವಿ ಮಾಡಿದ್ದರು. ಆರೋಪಿಗಳನ್ನು ಬಂಧಿಸಲು ₹ 4 ಲಕ್ಷ ಲಂಚ ನೀಡುವಂತೆ ಎಸಿಪಿ ಮತ್ತು ಎಎಸ್‌ಐ ಬೇಡಿಕೆ ಇಟ್ಟಿದ್ದರು. ಚೌಕಾಸಿ ಮಾಡಿದಾಗ ₹ 2 ಲಕ್ಷ ನೀಡಿದರೆ ಆರೋಪಿಗಳನ್ನು ಬಂಧಿಸುವುದಾಗಿ ಹೇಳಿದ್ದರು. ಮಧುಸೂದನ್‌ ಅವರು ಈ ಕುರಿತು ಲೋಕಾಯುಕ್ತ ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ-2ಕ್ಕೆ ದೂರು ಸಲ್ಲಿಸಿದ್ದರು.

ಲಂಚದ ಹಣವನ್ನು ಎಎಸ್‌ಐ ಬಳಿ ನೀಡುವಂತೆ ಎಸಿಪಿ ತನ್ವೀರ್‌ ಸೂಚಿಸಿದ್ದರು. ಮಂಗಳವಾರ ರಾತ್ರಿ ಆರ್‌.ಟಿ. ನಗರದ ಸ್ಥಳವೊಂದಕ್ಕೆ ಬಂದು ಹಣ ತಲುಪಿಸುವಂತೆ ಕೃಷ್ಣಮೂರ್ತಿ ಸೂಚಿಸಿದ್ದರು. ಅದರಂತೆ ಅಲ್ಲಿಗೆ ತಲುಪಿದ ದೂರುದಾರರು ಹಣ ತಲುಪಿಸಿದರು. ತಕ್ಷಣ ದಾಳಿಮಾಡಿದ ಲೋಕಾಯುಕ್ತ ಪೊಲೀಸರು ಆರೋಪಿಯನ್ನು ಬಂಧಿಸಿದರು. ಎಸಿಪಿ ತನ್ವೀರ್‌ ಅವರ ಮನೆಯನ್ನು ಪತ್ತೆಮಾಡಿ ತಡರಾತ್ರಿ ವೇಳೆಗೆ ಬಂಧಿಸಿದರು.

ಇಬ್ಬರೂ ಆರೋಪಿಗಳನ್ನು ಲೋಕಾಯುಕ್ತ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಬುಧವಾರ ಬೆಳಿಗ್ಗೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆ ಇದೆ.

ಪೊಲೀಸ್‌ ವಿಭಾಗದ ಬೆಂಗಳೂರು ನಗರ ಘಟಕ-2ರ ಎಸ್‌ಪಿ ಕೆ. ವಂಶಿಕೃಷ್ಣ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿವೈಎಸ್‌ಪಿ ಎಚ್‌.ಜೆ. ತಿಪ್ಪೇಸ್ವಾಮಿ, ಇನ್‌ಸ್ಪೆಕ್ಟರ್‌ಗಳಾದ ವಿಜಯ್‌ ಕೃಷ್ಣ, ಪ್ರಶಾಂತ್‌, ಅಂಜನ್‌ಕುಮಾರ್‌ ಮತ್ತು ಸಿಬ್ಬಂದಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.