ADVERTISEMENT

ಲೋಕಾಯುಕ್ತ ದಾಳಿ: ಜಮೀರ್‌ ಆಪ್ತ ₹14 ಕೋಟಿ ಆಸ್ತಿ ಒಡೆಯ

ಸರ್ಫ್‌ರಾಜ್‌ ಖಾನ್‌ಗೆ ಸೇರಿದ 13 ಸ್ಥಳಗಳಲ್ಲಿ ಲೋಕಾಯುಕ್ತ ಶೋಧ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 23:30 IST
Last Updated 24 ಡಿಸೆಂಬರ್ 2025, 23:30 IST
ಸರ್ಫರಾಜ್‌ ಖಾನ್
ಸರ್ಫರಾಜ್‌ ಖಾನ್   

ಬೆಂಗಳೂರು: ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿಗಳಿಸಿದ ಆರೋಪದಲ್ಲಿ, ಸರ್ದಾರ್ ಸರ್ಫ್‌ರಾಜ್‌ ಖಾನ್‌ ಅವರಿಗೆ ಸೇರಿದ ಸ್ಥಳಗಳಲ್ಲಿ ದಾಳಿ ನಡೆಸಿದ ಲೋಕಾಯುಕ್ತ ಪೊಲೀಸರು ₹14.38 ಕೋಟಿ ಮೌಲ್ಯದ ಸ್ವತ್ತುಗಳನ್ನು ಪತ್ತೆ ಮಾಡಿದ್ದಾರೆ.

ಸರ್ಫ್‌ರಾಜ್‌ ಖಾನ್ ಅವರು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಅವರ ಆಪ್ತ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಸಹಕಾರ ಸಂಘಗಳ ಲೆಕ್ಕಪರಿಶೋಧನಾ ವಿಭಾಗದ ನಿರ್ದೇಶಕರಾಗಿರುವ ಸರ್ಫ್‌ರಾಜ್‌, ಬಹಳಷ್ಟು ವರ್ಷ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಈಗಿನ ಜಿಬಿಎ) ಕಾರ್ಯನಿರ್ವಹಿಸುತ್ತಿದ್ದರು. ನಿಯೋಜನೆ ಮೇರೆಗೆ ಸಚಿವಾಲಯದಲ್ಲಿದ್ದಾರೆ. ಅವರ ನಿವೃತ್ತಿಗೆ ಕೆಲವೇ ದಿನಗಳು ಉಳಿದಿವೆ. ಅವರ ವಿರುದ್ಧ ಬಾಗಲಕೋಟೆಯ ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ದೂರಿನ ಅನ್ವಯ ಬೆಂಗಳೂರು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

ADVERTISEMENT

ಬೆಂಗಳೂರು, ಕೊಡಗು ಸೇರಿ ಸರ್ಫ್‌ರಾಜ್‌ ಖಾನ್ ಅವರಿಗೆ ಸೇರಿದ ಒಟ್ಟು 13 ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಬುಧವಾರ ಬೆಳಿಗ್ಗೆ ದಾಳಿ ನಡೆಸಿದರು. ನಗರದ ಹಲಸೂರಿನಲ್ಲಿರುವ ಅಧಿಕಾರಿ ಅವರ ಮನೆ, ಅವರ ಆಪ್ತರ ಮನೆ ಮತ್ತು ಕಚೇರಿಗಳು, ಅವರಿಗೆ ಸೇರಿದ ಕೊಡಗಿನ ತೋಟದ ಮನೆಗಳಲ್ಲಿ ಶೋಧ ನಡೆಸಲಾಗಿತ್ತು.

ಈ ವೇಳೆ ಅಂದಾಜು ₹8.44 ಕೋಟಿ ಮೌಲ್ಯದ 37 ಎಕರೆ ಜಮೀನು, 4 ಮನೆಗಳಿಗೆ ಸಂಬಂಧಿಸಿದ ದಾಖಲೆ ಪತ್ರಗಳು ಪತ್ತೆಯಾಗಿವೆ. ಇವು ಸರ್ಫ್‌ರಾಜ್‌ ಮತ್ತು ಕುಟುಂಬದವರ ಹೆಸರಿನಲ್ಲಿವೆ. ಆರೋಪಿ ಅಧಿಕಾರಿಯು ಬೇನಾಮಿ ಹೆಸರಿನಲ್ಲಿ ಆಸ್ತಿ ಹೊಂದಿದ್ದಾರೆಯೇ ಎಂಬುದರ ಬಗ್ಗೆ ಶೋಧ ನಡೆಯುತ್ತಿದೆ ಎಂದು ಮೂಲಗಳು ಮಾಹಿತಿ ನೀಡಿವೆ.

ದಾಳಿ ವೇಳೆ ಒಟ್ಟು ₹2.99 ಕೋಟಿ ಮೌಲ್ಯದಷ್ಟು ಚಿನ್ನಾಭರಣಗಳು, ₹66,500 ನಗದು ಮತ್ತು ₹1.64 ಕೋಟಿ ಮೌಲ್ಯದ ವಾಹನಗಳು ಪತ್ತೆಯಾಗಿವೆ. ಅಧಿಕಾರಿ ಮತ್ತು ಅವರ ಕುಟುಂಬದವರ ಹೆಸರಿನಲ್ಲಿರುವ ಬ್ಯಾಂಕ್‌ ಖಾತೆಗಳಲ್ಲಿ ಒಟ್ಟು ₹1.29 ಕೋಟಿ ಠೇವಣಿ ಇವೆ. ಇವೆಲ್ಲವುಗಳ ಮೌಲ್ಯವು ಅಧಿಕಾರಿ ಅವರ ಅಧಿಕೃತ ಮೂಲದ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚು. ಈ ಬಗ್ಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ ಎಂದು ತಿಳಿಸಿವೆ.

₹30 ಸಾವಿರ ಲಂಚ: ಮಲ್ಲೇಶ್ವರ ಎಸಿಪಿ ಬಂಧನ

ತಡರಾತ್ರಿಯವರೆಗೂ ಹೋಟೆಲ್‌ ವಹಿವಾಟು ನಡೆಸಲು ಅನುಮತಿ ನೀಡುವ ಸಲುವಾಗಿ ₹30ಸಾವಿರ ಲಂಚ ಪಡೆಯುವಾಗ ಮಲ್ಲೇಶ್ವರ ಉಪವಿಭಾಗದ ಎಸಿಪಿ ಕೃಷ್ಣಮೂರ್ತಿ ಅವರು ಲೋಕಾಯುಕ್ತ ಪೊಲೀಸ್‌ ಬಲೆಗೆ ಬಿದಿದ್ದಾರೆ. ನಗರದ ರಾಜಾಜಿನಗರದಲ್ಲಿ ಇರುವ ‘ಹೋಟೆಲ್‌ ಸಾಗರ್‌’ನ ವ್ಯವಸ್ಥಾಪಕ ಸಂಜಯ್‌ ಕುಮಾರ್‌ ಅವರು ತಡರಾತ್ರಿಯವರೆಗೂ ವಹಿವಾಟು ನಡೆಸುವ ಸಂಬಂಧ ಎಸಿಪಿ ಕೃಷ್ಣಮೂರ್ತಿ ಅವರಿಗೆ ಮನವಿ ಸಲ್ಲಿಸಿದ್ದರು. ಅನುಮತಿ ನೀಡಲು ₹50000 ಲಂಚ ನೀಡುವಂತೆ ಎಸಿಪಿ ಬೇಡಿಕೆ ಇಟ್ಟಿದ್ದರು ಮತ್ತು ₹30000ಕ್ಕೆ ಒಪ್ಪಿಕೊಂಡಿದ್ದರು ಎಂದು ಲೋಕಾಯುಕ್ತ ಪೊಲೀಸರ ಪ್ರಕಟಣೆ ತಿಳಿಸಿದೆ.

ಈ ಬಗ್ಗೆ ಸಂಜಯ್ ಅವರು ನೀಡಿದ ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಲಾಗಿತ್ತು. ಅದರಂತೆ ಸಂಜಯ್ ಅವರು ಬುಧವಾರ ಎಸಿಪಿ ಕೃಷ್ಣಮೂರ್ತಿ ಅವರನ್ನು ಭೇಟಿ ಮಾಡಿ ₹30000 ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಎಸಿಪಿ ಅವರನ್ನು ಬಂಧಿಸಲಾಯಿತು. ಹಣವನ್ನು ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆದಿದೆ ಎಂದು ಪ್ರಕಟಣೆ ವಿವರಿಸಿದೆ.

₹2 ಲಕ್ಷ ಲಂಚ: ಪಿಎಸ್‌ಐ ಬಂಧನ

ಅಪರಾಧ ಪ್ರಕರಣವೊಂದರಲ್ಲಿ ಆರೋಪಿಯ ಪರವಾಗಿ ‘ಬಿ’ ರಿಪೋರ್ಟ್‌ ಸಲ್ಲಿಸಲು ₹2 ಲಕ್ಷ ಲಂಚ ಪಡೆಯುವಾಗ ಚಿಕ್ಕಜಾಲ ಪೊಲೀಸ್‌ ಠಾಣೆಯ ಪಿಎಸ್‌ಐ ಶಿವಣ್ಣ ಅವರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ರವಿಕುಮಾರ್‌ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ ಅವರ ಪರವಾಗಿ ‘ಬಿ’ ರಿಪೋರ್ಟ್‌ ಸಲ್ಲಿಸಲು ಪಿಎಸ್‌ಐ ಶಿವಣ್ಣ ಅವರು ₹3 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಕಡೆಗೆ ₹2 ಲಕ್ಷ ಲಂಚಕ್ಕೆ ಒಪ್ಪಿಕೊಂಡಿದ್ದರು. ಈ ಸಂಬಂಧ ರವಿಕುಮಾರ್‌ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದಲ್ಲಿ ಕಾರ್ಯಾಚರಣೆ ರೂಪಿಸಿ ಆರೋಪಿ ಪಿಎಸ್‌ಐಗೆ ಹಣ ನೀಡುವಂತೆ ದೂರುದಾರರಿಗೆ ಸೂಚಿಸಲಾಗಿತ್ತು. ಅದರಂತೆ ದೂರುದಾರರಿಂದ ಲಂಚ ಪಡೆಯುವಾಗ ಪಿಎಸ್‌ಐ ಶಿವಣ್ಣ ಅವರನ್ನು ಬಂಧಿಸಲಾಯಿತು. ಬಂಧಿತರಿಂದ ಹಣ ವಶಕ್ಕೆ ಪಡೆದಿದ್ದು ತನಿಖೆ ಮುಂದುವರೆಸಲಾಗಿದೆ ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.