ಬೆಂಗಳೂರು: ‘ನರೇಂದ್ರ ಮೋದಿ ಅವರು 2014ರ ಲೋಕಸಭಾ ಚುನಾವಣೆಗೂ ಮುನ್ನ ‘ಅಚ್ಛೇ ದಿನಗಳನ್ನು ತರುತ್ತೇವೆ’ ಎಂದು ಘೋಷಿಸಿದ್ದರು. ಆ ಒಳ್ಳೆಯ ದಿನಗಳು ಬಂದಿತಾ? ಎಲ್ಲದರ ಬೆಲೆಯನ್ನು ಏರಿಕೆ ಮಾಡಿ, ಇದ್ದ ಒಳ್ಳೆಯ ದಿನಗಳನ್ನೂ ಓಡಿಸಿದರು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು. ‘ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಪ್ರತು 10 ಗ್ರಾಂ ಚಿನ್ನದ ಬೆಲೆ ₹28,000ದಷ್ಟಿತ್ತು. ಮೋದಿ ಅವರ ಈ ಕಾಲದಲ್ಲಿ ಆ ಬೆಲೆ ₹96,000ಕ್ಕೆ ಏರಿಕೆಯಾಗಿದೆ. ಇದೇ ಒಳ್ಳೆಯ ದಿನವೇ’ ಎಂದು ಪ್ರಶ್ನಿಸಿದರು.
‘ಯುಪಿಎ ಸರ್ಕಾರದ ಅವಧಿಯಲ್ಲಿ ಪ್ರತಿ ಡಾಲರ್‌ನ ಎದುರು ರೂಪಾಯಿ ಮೌಲ್ಯ ₹56ರಷ್ಟಿತ್ತು. ತಾವು ಅಧಿಕಾರಕ್ಕೆ ಬಂದರೆ, ಡಾಲರ್ ಎದುರು ರೂಪಾಯಿ ಮೌಲ್ಯ 1ಕ್ಕೆ ಇಳಿಸುತ್ತೇವೆ ಎಂದು ಮೋದಿ ಎಲ್ಲೆಡೆ ಘೋಷಿಸಿಕೊಂಡಿದ್ದರು. ಆದರೆ ಈಗ ಡಾಲರ್ ಬೆಲೆ ₹87ರಷ್ಟಾಗಿದೆ. ಮೋದಿ ಅವರ ಒಳ್ಳೆಯ ದಿನ ಅಂದರೆ ಇದೇನಾ’ ಎಂದು ಪ್ರಶ್ನಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ‘ಬಿಜೆಪಿಯ ರಾಜ್ಯ ನಾಯಕರಿಗೆ ನಾಚಿಕೆಯಾಗಬೇಕು. ಎಲ್ಲ ಬೆಲೆ ಏರಿಕೆಗೂ ಪ್ರಧಾನಿ ನರೇಂದ್ರ ಮೋದಿ ಅವರೇ ಕಾರಣ. ಅವರು ಡೀಸೆಲ್ ಬೆಲೆ ಏರಿಕೆ ಮಾಡಿದ್ದರಿಂದ ಸಾರಿಗೆ ವೆಚ್ಚ, ವಿದ್ಯುತ್ ದರ, ಕೃಷಿ ವೆಚ್ಚ, ತರಕಾರಿ–ದಿನಸಿ ಬೆಲೆ, ಸಿಮೆಂಟ್–ಕಬ್ಬಿಣದಂತಹ ನಿರ್ಮಾಣ ಸಾಮಗ್ರಿಗಳ ವೆಚ್ಚ ವಿಪರೀತ ಏರಿಕೆಯಾಗಿದೆ. ಬಿಜೆಪಿ ಮತ್ತು ಜೆಡಿಎಸ್ ನಾಯಕರು ನ್ಯಾಯವಾಗಿ ಮೋದಿ ಅವರ ಸರ್ಕಾರದ ವಿರುದ್ಧ ಹೋರಾಡಬೇಕು. ಆದರೆ ಅವರು ರಾಜ್ಯ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ನಡೆಸುತ್ತಿದ್ದಾರೆ’ ಎಂದರು.
ಪಕ್ಷದ ರಾಜ್ಯ ಉಸ್ತುವಾರಿ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲಾ, ‘ಮನಮೋಹನ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಎಲ್‌ಪಿಜಿಗಾಗಿ ₹52,000 ಕೋಟಿ ಸಹಾಯಧನ ನೀಡಿದ್ದರು. ಮೋದಿ ಅವರು ಅದನ್ನು ₹10,600 ಕೋಟಿಗೆ ಇಳಿಸಿದ್ದಾರೆ. ಈ ಕಾರಣದಿಂದಲೇ, ಯುಪಿಎ ಅಧಿಕಾರದ ಅವಧಿಯಲ್ಲಿ ₹415 ಇದ್ದ ಸಿಲಿಂಡರ್ ಬೆಲೆ ಈಗ ₹850ಕ್ಕೆ ಏರಿಕೆಯಾಗಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.