ADVERTISEMENT

ಗುಸುಗುಸು: ಗೆಲಿಸುವ, ಸೋಲಿಸುವ ಆಟ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2024, 20:16 IST
Last Updated 2 ಏಪ್ರಿಲ್ 2024, 20:16 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸ್ಥಾನ ದಕ್ಕಿಸಿಕೊಳ್ಳಬೇಕೆಂಬ ಕಾರಣಕ್ಕೆ ಸಚಿವರ ಮಕ್ಕಳಿಗೆ ಕಾಂಗ್ರೆಸ್‌ ಟಿಕೆಟ್ ಕೊಟ್ಟು ಕಣಕ್ಕೆ ಇಳಿಸಿದೆ. ಸಚಿವರ ಪ್ರತಿಷ್ಠೆಯೇ ಪಣವಾಗಿದ್ದು, ಯಾರ ಮಕ್ಕಳು ಗೆದ್ದರೆ ಯಾರಿಗೆ ಅನುಕೂಲ, ಯಾರು ಸೋತರೆ ಮತ್ತ್ಯಾರಿಗೆ ಹಿನ್ನಡೆ ಎಂಬ ಗುಸುಗುಸು ಬೆಳಗಾವಿಯ ಜಿಲ್ಲೆಯಾದ್ಯಂತ ಹಬ್ಬುತ್ತಲೇ ಇದೆ.

ಜಿಲ್ಲೆ ಒಂದೇ ಆದರೂ ಎರಡು ಲೋಕಸಭಾ ಕ್ಷೇತ್ರಗಳು ಇಲ್ಲಿವೆ. ಜಿಲ್ಲೆಯ ಹಿಡಿತದಲ್ಲಿ ಮೇಲುಗೈ ಸಾಧಿಸಲು ಹಲವು ಕುಟುಂಬಗಳು ಯತ್ನ ನಡೆಸುತ್ತಲೇ ಇವೆ. ಈ ಬಾರಿ ಜಾರಕಿಹೊಳಿ, ಜೊಲ್ಲೆ, ಹೆಬ್ಬಾಳ್ಕರ ಕುಟುಂಬಗಳ ಪೈಪೋಟಿ ಈ ಕ್ಷೇತ್ರಗಳಲ್ಲಿದೆ. ಜಿಲ್ಲಾ ಉಸ್ತುವಾರಿ ಸಚಿವ, ಮುಖ್ಯಮಂತ್ರಿಯಾಗಲೇಬೇಕೆಂಬ ಆಕಾಂಕ್ಷೆ ಹೊಂದಿರುವ ಸತೀಶ ಜಾರಕಿಹೊಳಿ ಕುಟುಂಬ ಹೆಚ್ಚಿನ ಪ್ರಾಬಲ್ಯ ಹೊಂದಿರುವುದು ರಹಸ್ಯವೇನಲ್ಲ. ಇದಕ್ಕೆ, ಸಡ್ಡುಹೊಡೆದಂತೆ ತಮ್ಮ ಪತಿ ಅಣ್ಣಾಸಾಹೇಬ ಜೊಲ್ಲೆಯವರನ್ನು ಗೆಲ್ಲಿಸಿಕೊಂಡಿದ್ದು ಶಾಸಕ ಶಶಿಕಲಾ ಜೊಲ್ಲೆ. ಈ ಬಾರಿ ಜೊಲ್ಲೆಗೆ ಎದುರಾಳಿ ಜಾರಕಿಹೊಳಿ ಮಗಳು ಪ್ರಿಯಾಂಕಾ. ಅತ್ತ ಬೆಳಗಾವಿ ಕ್ಷೇತ್ರ ಉಪಚುನಾವಣೆಯಲ್ಲಿ ಜಾರಕಿಹೊಳಿ ಕೇವಲ 5 ಸಾವಿರ ಮತಗಳಿಂದ ಸೋತಿದ್ದರು. ಅದೇನೂ ಸೋಲಲ್ಲ; ‘ಸಾವ್ಕಾರ್‌’ ಮನಸ್ಸು ಮಾಡಿದ್ದರೆ ಗೆಲ್ಲಬಹುದಿತ್ತು. ಅಂದರೆ, ಅಷ್ಟರಮಟ್ಟಿಗೆ ಸಾವ್ಕಾರ್ ಹಿಡಿತ ಇದೆ ಅಂತಾಯ್ತು. ಹೀಗಾಗಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ತಮ್ಮ ಮಗ ಮೃಣಾಲ್ ನಿಂತು ಗೆಲ್ಲಬೇಕಾದರೆ, ಅತ್ತ ಪ್ರಿಯಾಂಕಾಳನ್ನೇ ಕಣಕ್ಕೆ ಇಳಿಸಬೇಕು ಎಂದು ಪಟ್ಟು ಹಿಡಿದಿದ್ದಾರಂತೆ. ಜಾರಕಿಹೊಳಿ ಕುಟುಂಬ ಕ್ಷೇತ್ರದತ್ತ ಹಾಯದೇ, ಚಿಕ್ಕೋಡಿಗೆ ಗಮನ ಕೇಂದ್ರೀಕರಿಸಿದರೆ ಸಾಕು. ಹೇಗಾದರೂ ತಮ್ಮ ಮಗನನ್ನು ಗೆಲ್ಲಿಸಿಕೊಂಡು ಬರುವೆ ಎಂಬುದು ಇದರ ಹಿಂದಿನ ಗುಟ್ಟಂತೆ. ಒಂದು ವೇಳೆ, ಅವರು ತಮ್ಮ ಕುಟುಂಬದವರನ್ನು ನಿಲ್ಲಿಸದಿದ್ದರೆ ಬೆಳಗಾವಿಯ ಹಿಡಿತಕ್ಕಾಗಿ ನಡೆಸುವ ತಂತ್ರಗಾರಿಕೆ ಹಿನ್ನಡೆ ತಂದೀತು ಎಂಬುದು ಲಕ್ಷ್ಮೀ ಲೆಕ್ಕಾಚಾರವಂತೆ. ಇದ ಹಿಂದಿನ ಸತ್ಯ ಸಾವ್ಕಾರ್ ಮತ್ತು ಕೆಪಿಸಿಸಿ ಅಧ್ಯಕ್ಷರಿಗಷ್ಟೇ ಗೊತ್ತು ಎಂಬ ಗುಸುಗುಸೂ ಹರಿದಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.