ADVERTISEMENT

ಏಪ್ರಿಲ್‌ನಲ್ಲಿ ದೊಡ್ಡ ಸಮಾವೇಶ ಆಯೋಜಿಸಿ ಕಾಂಗ್ರೆಸ್ ಸೇರುತ್ತೇನೆ: ಮಧು ಬಂಗಾರಪ್ಪ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2021, 19:00 IST
Last Updated 11 ಮಾರ್ಚ್ 2021, 19:00 IST
ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ
ಸೊರಬ ಕ್ಷೇತ್ರದ ಜೆಡಿಎಸ್ ಮಾಜಿ ಶಾಸಕ ಮಧು ಬಂಗಾರಪ್ಪ   

ಬೆಂಗಳೂರು: ಜೆಡಿಎಸ್‌ ತ್ಯಜಿಸಿ ಕಾಂಗ್ರೆಸ್‌ ಸೇರಲು ತೀರ್ಮಾನಿಸಿರುವ ಸೊರಬ ಕ್ಷೇತ್ರದ ಮಾಜಿ ಶಾಸಕ ಮಧು ಬಂಗಾರಪ್ಪ ಅವರು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಗುರುವಾರ ಭೇಟಿಯಾಗಿ ಮಾತುಕತೆ ನಡೆಸಿದರು.

ತಮ್ಮ ನಿವಾಸಕ್ಕೆ ಬಂದ ಮಧು ಬಂಗಾರಪ್ಪ ಅವರನ್ನು ಹೂಗುಚ್ಛ ನೀಡಿ ಸಿದ್ದರಾಮಯ್ಯ ಸ್ವಾಗತಿಸಿದರು. ಬಳಿಕ ಇಬ್ಬರೂ ಕೆಲಹೊತ್ತು ಚರ್ಚೆ ನಡೆಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಮಧು ಬಂಗಾರಪ್ಪ, ‘ಕಾಂಗ್ರೆಸ್ ಸೇರಲು ನಿರ್ಧರಿಸಿದ್ದು, ಹೀಗಾಗಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದೇನೆ. ಇಂದಿನಿಂದಲೇ ಕಾರ್ಯಕರ್ತನಾಗಿ ಕೆಲಸ ಮಾಡಲು ಸಿದ್ದರಾಮಯ್ಯ ಸೂಚಿಸಿದ್ದಾರೆ. ಏಪ್ರಿಲ್ ತಿಂಗಳಲ್ಲಿ ಶಿವಮೊಗ್ಗದಲ್ಲಿ ದೊಡ್ಡ ಸಮಾವೇಶ ಮಾಡಿ ಅಧಿಕೃತವಾಗಿ ಕಾಂಗ್ರೆಸ್ ಸೇರುತ್ತೇನೆ’ ಎಂದರು.

ADVERTISEMENT

‘ಸಿದ್ದರಾಮಯ್ಯ ಹಿರಿಯರು, ಮುಖ್ಯಮಂತ್ರಿ ಆಗಿದ್ದವರು. ನಮ್ಮ ತಂದೆಯೂ (ಎಸ್‌. ಬಂಗಾರಪ್ಪ) ಕೂಡಾ ಮುಖ್ಯಮಂತ್ರಿ ಆಗಿದ್ದವರು. ಹೀಗಾಗಿ ಅವರನ್ನು ಭೇಟಿ ಮಾಡಿದ್ದೇನೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರನ್ನು ಶುಕ್ರವಾರ ಭೇಟಿ ಮಾಡುತ್ತೇನೆ’ ಎಂದರು.

ಎಚ್‌ಡಿಕೆ ಬಗ್ಗೆ ಗೌರವವಿದೆ: ದ್ರೋಹ ಮಾಡಿದರೆಂಬ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ‘ಕುಮಾರಸ್ವಾಮಿ ದೊಡ್ಡವರು. ನನ್ನ ಮತ್ತು ಕುಮಾರಸ್ವಾಮಿ ನಡುವೆ ವೈಯಕ್ತಿಕವಾಗಿ ಏನೂ ಇಲ್ಲ.ಅವರ ಬಗ್ಗೆ ಗೌರವ ಇದೆ. ಈಗ ಯಾವುದೇ ಚರ್ಚೆ ಬೇಡ. ಅವರು ಏಕೆ ಹಾಗೆ ಹೇಳಿದರೊ ಗೊತ್ತಿಲ್ಲ. ನಾನು ಜೆಡಿಎಸ್‌ನಲ್ಲಿ ಯಾವುದೇ ಅಧಿಕಾರ ಅನುಭವಿಸಿಲ್ಲ. ಶಾಸಕನಾಗಿ ಸೋತವನು. ಇನ್ನು ಜೆಡಿಎಸ್‌ನಲ್ಲಿ ಯಾವ ಅಧಿಕಾರ ಅನುಭವಿಸಲು ಸಾಧ್ಯ. ಒಂದು ವರ್ಷ ಸುದೀರ್ಘವಾಗಿ ಯೋಚಿಸಿ ಕಾಂಗ್ರೆಸ್‌ ಸೇರುವ ನಿರ್ಧಾರಕ್ಕೆ ಬಂದಿದ್ದೇನೆ. ಈ ಸಂದರ್ಭದಲ್ಲಿ ದೇಶಕ್ಕೆ ಕಾಂಗ್ರೆಸ್ ಅಗತ್ಯತೆ ಇದೆ’ ಎಂದರು.

‘ಪಕ್ಷ ನನ್ನನ್ನು ಹೇಗೆ ಉಪಯೋಗಿಸಿಕೊಳ್ಳುತ್ತೊ ಹಾಗೇ ಕೆಲಸ ಮಾಡುತ್ತೇನೆ. ಕಾಂಗ್ರೆಸ್ ಇದೇ 13ರಂದು ಹಮ್ಮಿಕೊಂಡಿರುವ ಶಿವಮೊಗ್ಗ ಚಲೋ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುವುದಿಲ್ಲ. ಈ ಬಗ್ಗೆ ಪಕ್ಷದ ನಾಯಕರಿಗೆ ತಿಳಿಸಿದ್ದೇನೆ. ಚುನಾವಣೆ ಎನ್ನುವುದು ಪರೀಕ್ಷೆ. ಪಾಸ್, ಫೇಲ್ ಇದ್ದಿದ್ದೆ. ಆದರೆ ನಾಯಕತ್ವ ಎಂದೂ ಸೋಲುವುದಿಲ್ಲ. ಕಾಂಗ್ರೆಸ್‌ನಲ್ಲಿ ಬೆಳೆಯಲು ಅವಕಾಶ ಇದೆ. ಅದಕ್ಕೆ ಸೇರ್ಪಡೆ ಆಗುತ್ತಿದ್ದೇನೆ’ ಎಂದು ಸಮರ್ಥನೆ ನೀಡಿದರು.

ಪಕ್ಷಕ್ಕೆ ಮತ್ತಷ್ಟು ಶಕ್ತಿ: ಖಂಡ್ರೆ
ಯಾದಗಿರಿ:
‘ಮಧು ಬಂಗಾರಪ್ಪ ಕಾಂಗ್ರೆಸ್ ಸೇರಿದ್ದರಿಂದ ಪಕ್ಷಕ್ಕೆ ಮತ್ತಷ್ಟು ಶಕ್ತಿ ಬರಲಿದೆ. ಕಾಂಗ್ರೆಸ್ ತೊರೆದವರು ಪುನಃ ಮರಳಲು ಬಯಸಿದರೆ, ಮುಖಂಡ ಅಲ್ಲಂ ವೀರಭದ್ರಪ್ಪ ಅವರ ನೇತೃತ್ವದ ಸಮಿತಿಯೊಂದಿಗೆ ಚರ್ಚಿಸಿ ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಎಲ್ಲಿ ಬೇಕಾದರೂ ಹೋಗಲು ಅವಕಾಶಗಳಿವೆ: ಕುಮಾರಸ್ವಾಮಿ

ಮೈಸೂರು: ‘ಮಧು ಬಂಗಾರಪ್ಪ ಅವರು ಸರ್ವಸ್ವತಂತ್ರರಿದ್ದಾರೆ. ಪಕ್ಷ ತ್ಯಜಿಸುವ ವಿಷಯಕ್ಕೆ ಮಹತ್ವ ಕೊಡುವ ಅವಶ್ಯಕತೆ ನನಗಂತೂ ಇಲ್ಲ. ಜೆಡಿಎಸ್ ಬಾಗಿಲು ಸದಾ ತೆರೆದಿರುತ್ತದೆ. ಎಲ್ಲಿ ಬೇಕಾದರೂ ಹೋಗಲು ಅವಕಾಶಗಳಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಈ ಹಿಂದೆಯೂ ಎಷ್ಟೋ ಮಂದಿ ಬಿಟ್ಟು ಹೋಗಿದ್ದಾರೆ. ಆದರೂ ಈ ಪಕ್ಷ ಮುಳುಗಿ ಹೋಗಿಲ್ಲ. ಪಕ್ಷ ನಿಷ್ಠೆಗೆ ಮಹತ್ವ ಕೊಡದೆ, ತಾತ್ಕಾಲಿಕವಾಗಿ ಯಶಸ್ಸು ಕಾಣಲು ಕೆಲವರನ್ನು ಸೇರಿಸಿಕೊಂಡಿದ್ದರಿಂದ ಇಂತಹ ಘಟನೆ ಪುನರಾವರ್ತನೆಯಾಗುತ್ತಿದೆ. ನಿಷ್ಠೆ ಇಲ್ಲದವರನ್ನೆಲ್ಲಾ ಪಕ್ಷಕ್ಕೆ ಸೇರಿಸುವುದನ್ನು ನಿಲ್ಲಿಸಬೇಕು ಎಂಬ ಪಾಠ ಕಲಿತಿದ್ದೇವೆ’ ಎಂದು ಹೇಳಿದರು.

ಎಲ್ಲಿ ಬೇಕಾದರೂ ಹೋಗಲು ಅವಕಾಶಗಳಿವೆ: ಕುಮಾರಸ್ವಾಮಿ
ಮೈಸೂರು:
‘ಮಧು ಬಂಗಾರಪ್ಪ ಅವರು ಸರ್ವಸ್ವತಂತ್ರರಿದ್ದಾರೆ. ಪಕ್ಷ ತ್ಯಜಿಸುವ ವಿಷಯಕ್ಕೆ ಮಹತ್ವ ಕೊಡುವ ಅವಶ್ಯಕತೆ ನನಗಂತೂ ಇಲ್ಲ. ಜೆಡಿಎಸ್ ಬಾಗಿಲು ಸದಾ ತೆರೆದಿರುತ್ತದೆ. ಎಲ್ಲಿ ಬೇಕಾದರೂ ಹೋಗಲು ಅವಕಾಶಗಳಿವೆ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

ಮಧು ಬಂಗಾರಪ್ಪ ಕಾಂಗ್ರೆಸ್‌ ಸೇರುವ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ‘ಈ ಹಿಂದೆಯೂ ಎಷ್ಟೋ ಮಂದಿ ಬಿಟ್ಟು ಹೋಗಿದ್ದಾರೆ. ಆದರೂ ಈ ಪಕ್ಷ ಮುಳುಗಿ ಹೋಗಿಲ್ಲ. ಪಕ್ಷ ನಿಷ್ಠೆಗೆ ಮಹತ್ವ ಕೊಡದೆ, ತಾತ್ಕಾಲಿಕವಾಗಿ ಯಶಸ್ಸು ಕಾಣಲು ಕೆಲವರನ್ನು ಸೇರಿಸಿಕೊಂಡಿದ್ದರಿಂದ ಇಂತಹ ಘಟನೆ ಪುನರಾವರ್ತನೆಯಾಗುತ್ತಿದೆ. ನಿಷ್ಠೆ ಇಲ್ಲದವರನ್ನೆಲ್ಲಾ ಪಕ್ಷಕ್ಕೆ ಸೇರಿಸುವುದನ್ನು ನಿಲ್ಲಿಸಬೇಕು ಎಂಬ ಪಾಠ ಕಲಿತಿದ್ದೇವೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.