ADVERTISEMENT

ಶಿವರಾತ್ರಿ | ಗೋಕರ್ಣದಲ್ಲಿ ಆತ್ಮಲಿಂಗಕ್ಕೆ ಪೂಜೆಗೈದು ಪಾವನರಾದ ಶಿವ ಭಕ್ತರು

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2026, 5:30 IST
Last Updated 15 ಫೆಬ್ರುವರಿ 2026, 5:30 IST
<div class="paragraphs"><p>ಆತ್ಮಲಿಂಗಕ್ಕೆ ಪೂಜೆ</p></div>

ಆತ್ಮಲಿಂಗಕ್ಕೆ ಪೂಜೆ

   

ಗೋಕರ್ಣ: ಪುರಾಣ ಪ್ರಸಿದ್ಧ ಕ್ಷೇತ್ರ ಗೋಕರ್ಣದಲ್ಲಿ ಶಿವರಾತ್ರಿ ಅಂಗವಾಗಿ ಭಾನುವಾರ ಸಾವಿರಾರು ಭಕ್ತರು ಉತ್ಸಾಹದಲ್ಲಿ ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ.

ಕೋಟಿತೀರ್ಥದಲ್ಲಿ ಸ್ನಾನ ಮಾಡಿ, ಶನಿವಾರ ಮಧ್ಯರಾತ್ರಿಯಿಂದಲೇ ಮಹಾಗಣಪತಿ ಮತ್ತು ಮಹಾಬಲೇಶ್ವರನ ಪೂಜೆಗಾಗಿ ಸರತಿ ಸಾಲಿನಲ್ಲಿ ಭಕ್ತರು ನಿಂತು, ಬೆಳಗಿನ ಜಾವ ಪೂಜೆ ಅರ್ಪಿಸಿದರು.

ADVERTISEMENT

ಸ್ಥಳೀಯರು ನಸುಕಿನ ಜಾವದಲ್ಲೇ ಆತ್ಮಲಿಂಗದ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಭಕ್ತರ ಸಂಖ್ಯೆ ಪ್ರತಿ ವರ್ಷಕ್ಕಿಂತ ಕಡಿಮೆ ಇತ್ತು. ದೇವಸ್ಥಾನದ ಮೇಲ್ವಿಚಾರಣಾ ಸಮಿತಿಯ ಉಪಾಧ್ಯಕ್ಷ ಹಾಗೂ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಪರಮೇಶ್ವರ ಪಿ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್, ಸಮಿತಿಯ ಕಾರ್ಯದರ್ಶಿ ಹಾಗೂ ಕುಮಟಾ ಉಪವಿಭಾಗಾಧಿಕಾರಿ ಪಿ. ಶ್ರವಣಕುಮಾರ್ ಶಿವನ ಆತ್ಮಲಿಂಗಕ್ಕೆ ಬೆಳಗಿನ ಜಾವ 2 ಗಂಟೆಗೆ ಪೂಜೆ ಸಲ್ಲಿಸುವುದರೊಂದಿಗೆ ಚಾಲನೆ ನೀಡಿದರು.

ಸಮಿತಿಯ ಸದಸ್ಯರಾದ ವೇ.ಗಣಪತಿ ಶಿವರಾಮ ಹಿರೇ, ವೇ. ಸುಬ್ರಹ್ಮಣ್ಯ ಅಡಿ, ವೇ. ಪರಮೇಶ್ವರ ಪ್ರಸಾದ ರಮಣಿ ಮತ್ತು ಮಹೇಶ ಹಿರೇಗಂಗೆ ದೇವಸ್ಥಾನದಲ್ಲಿಯೇ ಉಪಸ್ಥಿತರಿದ್ದರು. ದೇವಸ್ಥಾನದ ಸಿಬ್ಬಂದಿ ಎಲ್ಲ ವ್ಯವಸ್ಥೆಯನ್ನೂ ಅಚ್ಚುಕಟ್ಟಾಗಿ ನಿರ್ವಹಿಸಿದರು.

ಮರಳಿನ ಲಿಂಗಕ್ಕೆ ಪೂಜೆ ಸಲ್ಲಿಕೆ...

ಕೆಲವು ಭಕ್ತರು ಸಮುದ್ರದಲ್ಲಿ ಮರಳಿನ ಲಿಂಗ ಮಾಡಿ ಪೂಜೆ ಮಾಡಿದರು. ಅರಿಶಿನ, ಕುಂಕುಮ ಹಚ್ಚಿ, ಹೂವು ಬಿಲ್ವಪತ್ರ ಹಾಕಿ, ಕರ್ಪೂರದ ಆರತಿ ಎತ್ತಿ ಭಕ್ತಿ ಪರವಶರಾದರು. ಮುಖ್ಯ ಕಡಲ ತೀರದಲ್ಲಿ ಭಕ್ತ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿದ್ದರು. ಮಹಾರಾಷ್ಟ್ರದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು.

ಕೋಟಿತೀರ್ಥ ಮತ್ತು ಕಡಲತೀರದಲ್ಲಿ ಪ್ರವಾಸಿಗರು ಎಚ್ಚರಿಕೆ ವಹಿಸುವಂತೆ ಫಲಕ ಅಳವಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.