ADVERTISEMENT

ರೈತರಿಗೆ ಶೀಘ್ರ ಮಹದಾಯಿ ನೀರು: ಅಮಿತ್ ಶಾ ಭರವಸೆ

ಎಂ.ಕೆ.ಹುಬ್ಬಳ್ಳಿ: ಜನ ಸಂಕಲ್ಪ ಯಾತ್ರೆಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ

​ಪ್ರಜಾವಾಣಿ ವಾರ್ತೆ
Published 28 ಜನವರಿ 2023, 18:59 IST
Last Updated 28 ಜನವರಿ 2023, 18:59 IST
   

ಎಂ.ಕೆ.ಹುಬ್ಬಳ್ಳಿ (ಬೆಳಗಾವಿ ಜಿಲ್ಲೆ): ‘ಮಹದಾಯಿ ಜಲ ವಿವಾದವನ್ನು ಸಂಪೂರ್ಣ ಬಗೆಹರಿಸಿದ್ದೇವೆ. ಅತಿ ಶೀಘ್ರದಲ್ಲಿಯೇ ಕರ್ನಾಟಕದ ರೈತರಿಗೆ ಅವರ ಪಾಲಿನ ನೀರು ಸಿಗಲಿದೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಭರವಸೆ ನೀಡಿದರು.

ಚನ್ನಮ್ಮನ ಕಿತ್ತೂರು ತಾಲ್ಲೂಕಿನ ಎಂ.ಕೆ.ಹುಬ್ಬಳ್ಳಿಯಲ್ಲಿ ಶನಿವಾರ ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕ ಆಯೋಜಿಸಿದ್ದ ಜನಸಂಕಲ್ಪ ಯಾತ್ರೆ ಉದ್ಘಾಟಿಸಿ ಅವರು ಮಾತನಾಡಿದರು.

‘ಕಳಸಾ– ಬಂಡೂರಿ ನಾಲಾ ನೀರು ಸಂಬಂಧ ಕರ್ನಾಟಕ ಹಾಗೂ ಗೋವಾ ಸರ್ಕಾರಗಳ ಮಧ್ಯದ ಗೊಂದಲಗಳು ಬಗೆಹರಿದಿವೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತುಂಬ ಸೌಹಾರ್ದದಿಂದ ಈ ಸಮಸ್ಯೆಗೆ ಅಂತ್ಯ ಹಾಡಿದ್ದಾರೆ’ ಎಂದರು.

ADVERTISEMENT

‘ಮಹದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಕೊಡಬೇಕಾಗಿಲ್ಲ’ ಎಂದು 2007ರ ಚುನಾವಣೆ ಪ್ರಚಾರ ಸಭೆಯಲ್ಲಿ ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ ಹೇಳಿದ್ದರು. ಅವರು ಎಬ್ಬಿಸಿಹೋದ ವಿವಾದವನ್ನು ಬಿಜೆಪಿ ಮುಗಿಸಿದೆ’ ಎಂದು ಹೇಳಿದರು.

‘ವೀರ ಸಾವರ್ಕರ್‌ ಅವರ ಹೋರಾಟಕ್ಕೆ ಕರ್ನಾಟಕದ ಆಲೂರು ವೆಂಕಟರಾಯರು ಬೆನ್ನೆಲುಬಾಗಿದ್ದರು. ಸುವರ್ಣ ವಿಧಾನಸೌಧದಲ್ಲಿ ವೀರ ಸಾವರ್ಕರ್‌ ಭಾವಚಿತ್ರ ಅಳವಡಿಸಿ ಇಡೀ ಕರ್ನಾಟಕ ಅವರಿಗೆ ನಮನ ಸಲ್ಲಿಸಿದ್ದು ಖುಷಿ ತಂದಿದೆ’
ಎಂದರು.

ಕೆಎಲ್ಇ ಸಂಸ್ಥೆಯ ಬಿವಿಬಿಯ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಹಳೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಪ್ರಜಾವಾಣಿ ಚಿತ್ರ

‘ಬಿಜೆಪಿ– ಕಾಂಗ್ರೆಸ್‌ ನೇರ ಸ್ಪರ್ಧೆ’

ಹುಬ್ಬಳ್ಳಿ: ನಾಲ್ಕೈದು ತಿಂಗಳಲ್ಲಿ ರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು, ಈ ಸಲ ತ್ರಿಕೋನ ಸ್ಪರ್ಧೆಯಿಲ್ಲ, ಬಿಜೆಪಿ- ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಶನಿವಾರ ಬಿಜೆಪಿ ಹಮ್ಮಿಕೊಂಡ ‘ವಿಜಯ ಸಂಕಲ್ಪ ಅಭಿಯಾನ’ ಅಂಗವಾಗಿ ರೋಡ್ ಶೋ ನಡೆಸಿದ ನಂತರ ಅವರು ಮಾತನಾಡಿದರು.

ರಾಜ್ಯದಲ್ಲಿ ತ್ರಿಕೋನ ಸ್ಪರ್ಧೆ ನಡೆಯಲಿದೆ ಎಂದು ಕೆಲವರು ಹೇಳುತ್ತಿದ್ದಾರೆ. ಕಾಂಗ್ರೆಸ್‌ಗೆ ಅಷ್ಟೆ ಅಲ್ಲ, ಜೆಡಿಎಸ್‌ಗೆ ಮತ ನೀಡಿದರೂ ಅದು ಕಾಂಗ್ರೆಸ್‌ಗೆ ಹೋದಂತೆ. ಚುನಾವಣೆ ಬಿಜೆಪಿ- ಕಾಂಗ್ರೆಸ್ ನಡುವೆ ನೇರಾನೇರವಾಗಿ ನಡೆಯಲಿದೆ ಎಂದರು.

25-30 ಸ್ಥಾನ ಗೆದ್ದು ಮುಖ್ಯಮಂತ್ರಿಯಾಗುವ ಕನಸನ್ನು ಜೆಡಿಎಸ್ ನವರು ಕಾಣುತ್ತಿದ್ದಾರೆ. ಇನ್ನು ಕೆಲವು ಕಾಂಗ್ರೆಸ್ಸಿಗರು, ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಕನಸು ಕಾಣುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಿದ್ದರಾಮಯ್ಯ ಸರ್ಕಾರ ಇದ್ದಾಗ, ಕಾಂಗ್ರೆಸ್ ಹೈಕಮಾಂಡ್‌ಗೆ ಪೇಟಿಎಂ ಆಗಿತ್ತು ಎಂದು ಟೀಕಿಸಿದ ಅವರು, ಕಾಂಗ್ರೆಸ್ ಗಾಂಧಿ ಕುಟುಂಬದ
ಪಕ್ಷವಾಗಿದ್ದರೆ, ಜೆಡಿಎಸ್ ಪಕ್ಷವು ಅಪ್ಪ, ಮಕ್ಕಳು, ಮೊಮ್ಮಕ್ಕಳ ಪಕ್ಷ
ವಾಗಿದೆ. ಅಲ್ಲಿ ಸಾಮಾನ್ಯ ಜನರಿಗೆ, ಯುವಕರಿಗೆ ಎಲ್ಲಿದೆ ಅವಕಾಶ
ಎಂದು ಪ್ರಶ್ನಿಸಿದರು.

ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳು ಕುಟುಂಬ ರಾಜಕಾರಣ ಹಾಗೂ ಭ್ರಷ್ಟಾಚಾರದಲ್ಲಿ ಮುಳುಗಿವೆ. ಇದಕ್ಕೆ ಕೊನೆ ಹಾಡಲು ಬಿಜೆಪಿಗೆ ಮತ ನೀಡಿ ಎಂದು ಮನವಿ ಮಾಡಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.