ಬೆಂಗಳೂರು: ಮಹದೇವಪುರ ವಿಧಾನಸಭಾ ಕ್ಷೇತ್ರದ ಪೂರ್ವ ನಗರ ಪಾಲಿಕೆ ಮತ್ತು ದಕ್ಷಿಣ ನಗರ ಪಾಲಿಕೆ ನಡುವಿನ ವಿಭಜನೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್ ಆದೇಶಿಸಿದೆ.
ಈ ಸಂಬಂಧ ಪಿ.ಎಸ್.ಹರೀಶ್ ಮತ್ತು ಆರ್.ದಿಲೀಪ್ ಕುಮಾರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ನೇತೃತ್ವದ ವಿಭಾಗೀಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ಪದಾಂಕಿತ ಹಿರಿಯ ವಕೀಲ ಡಿ.ಆರ್.ರವಿಶಂಕರ್ ಮತ್ತು ಎ.ಪಿ.ರಂಗನಾಥ್ ಅವರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿ ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಲು ಆದೇಶಿಸಿ ವಿಚಾರಣೆಯನ್ನು ಡಿಸೆಂಬರ್ 17ಕ್ಕೆ ಮುಂದೂಡಿತು.
‘ಮಹದೇವಪುರ ವಿಧಾನಸಭಾ ಕ್ಷೇತ್ರದ ಗಣನೀಯ ಭಾಗವನ್ನು 2025ರ ಸೆಪ್ಟೆಂಬರ್ 2 ರಂದು ಹೊರಡಿಸಲಾಗಿರುವ ಅಧಿಸೂಚನೆಯ ಪ್ರಕಾರ ಪೂರ್ವ ನಗರ ನಿಗಮದೊಳಗೆ ಸೇರ್ಪಡೆ ಮಾಡಲಾಗಿದೆ ಮತ್ತು ಒಂದು ಪುಟ್ಟ ಭಾಗವನ್ನು ದಕ್ಷಿಣ ನಗರ ನಿಗಮಕ್ಕೆ ವರ್ಗಾಯಿಸಲಾಗಿದೆ. ಇದು ಅನಿಯಂತ್ರಿತ ಮತ್ತು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ–2024ರ ಕಲಂ 26(3) ರ ಉಲ್ಲಂಘನೆಯಾಗಿದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.
‘ಅಂಬಲಿಪುರ, ಹರಳೂರು, ಕೈಕೊಂಡನಹಳ್ಳಿ, ಕಸವನಹಳ್ಳಿ, ಕೆಪಿಸಿಎಲ್ ಲೇ–ಔಟ್, ಜುನ್ನಸಂದ್ರ, ದೊಡ್ಡಕನ್ನಳ್ಳಿ ಸೇರಿದಂತೆ ಹಲವಾರು ಗ್ರಾಮಗಳನ್ನು ಮತದಾರರು, ವಸತಿ ಕಲ್ಯಾಣ ಸಂಘಗಳು ಮತ್ತು ಇತರ ಕಾರ್ಯಕರ್ತರ ಪರವಾಗಿ ಸಲ್ಲಿಸಲಾದ ಆಕ್ಷೇಪಣೆಗಳ ಹೊರತಾಗಿಯೂ ದಕ್ಷಿಣ ಮತ್ತು ಪೂರ್ವ ನಗರ ಪಾಲಿಕೆಗಳ ನಡುವೆ ಏಕಪಕ್ಷೀಯವಾಗಿ ವಿಂಗಡಿಸಲಾಗಿದೆ’ ಎಂದು ಅರ್ಜಿದಾರರು ದೂರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.