ಹುಬ್ಬಳ್ಳಿ: 'ಪ್ರಧಾನಿ ನರೇಂದ್ರ ಮೋದಿ ಅವರು ಮೇಕ್ ಇನ್ ಇಂಡಿಯಾ ಬಗ್ಗೆ ಸಾಕಷ್ಟು ಮಾತನಾಡುತ್ತಾರೆ. ಆದರೆ, ಛತ್ರಿಯನ್ನು ಸಹ ನಾವು ವಿದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದೇವೆ. 200 ಮಿಲಿಯನ್ ಡಾಲರ್ ರಪ್ತು ವ್ಯಾಪಾರ ಕುಸಿದಿದೆ. ಮೇಕ್ ಇನ್ ಇಂಡಿಯಾ ಎಲ್ಲಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ಭಾನುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಜನರಿಗೆ ಸುಳ್ಳು ಭರವಸೆ ನೀಡಿ, ದಿಕ್ಕು ತಪ್ಪಿಸುವುದೇ ಕೇಂದ್ರದ ಕೆಲಸವಾಗಿದೆ. ವಿದೇಶದಲ್ಲಿರುವ ಕಪ್ಪು ಹಣ ತರುತ್ತೇವೆ, ಲಕ್ಷಾಂತರ ಮಂದಿಗೆ ಉದ್ಯೋಗ ನೀಡುತ್ತೇವೆ ಎಂದಿದ್ದರು. ಈಗ ಅವು ಏನಾಯ್ತು? ಯಾವ ಮಾನದಂಡದ ಆಧಾರದ ಮೇಲೆ ಅವರು ದೇಶದಲ್ಲಿ ಭ್ರಷ್ಟಾಚಾರ ಇಲ್ಲ ಎನ್ನುತ್ತಿದ್ದಾರೆ? ಭಾರತವನ್ನು ವಿಶ್ವಗುರು ಎಂದು ಬಿಂಬಿಸಲಾಗುತ್ತಿದೆ. ಆದರೆ, ಅಕ್ಕಪಕ್ಕದ ಯಾವ ದೇಶದ ಜೊತೆ ನಾವು ಚೆನ್ನಾಗಿದೆ' ಎಂದು ಪ್ರಶ್ನಿಸಿದರು.
'ಅದಾನಿ ಬಂದರಿನಲ್ಲಿ ₹21 ಸಾವಿರ ಕೋಟಿ ಮೌಲ್ಯದ ಡ್ರಗ್ಸ್ ಸಿಕ್ಕಿದೆ. ಅದರ ಹಣವನ್ನು ಪೆಹಲ್ಗಾಮ್ ದಾಳಿಗೆ ಬಳಕೆಯಾಗಿದೆ ಎಂದು ಅವರದ್ದೇ ಎನ್ಐಎ ಸುಪ್ರೀಮ್ ಕೋರ್ಟ್‌ಗೆ ವರದಿ ನೀಡಿದೆ. ಈ ಕುರಿತು ಕೇಂದ್ರ ಸರ್ಕಾರ ದೇಶದ ಜನತೆಗೆ ಏನೆಂದು ಮಾಹಿತಿ ನೀಡಬೇಕು' ಎಂದು ಆಗ್ರಹಿಸಿದರು.
'ಬೆಟ್ಟಿಂಗ್ ಆ್ಯಪ್‌ನಲ್ಲಿ ದಂಧೆ ನಡೆಸುವವರಿಂದ ಹಾಗೂ ಗೋ ಮಾಂಸ ರಪ್ತು ಮಾಡುವವರಿಂದ ಬಿಜೆಪಿ ಚಂದಾ ಎತ್ತಿ ಪಕ್ಷದ ಕಚೇರಿ ನಿರ್ಮಾಣ ಮಾಡುತ್ತಿದೆ' ಎಂದು ಸಚಿವ ಲಾಡ್ ಆರೋಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.