ADVERTISEMENT

ಬಿಜೆಪಿ ಸೋಲಿಸದಿದ್ದರೆ ಪ್ರಜಾಪ್ರಭುತ್ವಕ್ಕೆ ಆಪತ್ತು: ಮಲ್ಲಿಕಾರ್ಜುನ ಖರ್ಗೆ

42,345 ಮನೆಗಳ ಹಂಚಿಕೆ, ಹಕ್ಕುಪತ್ರಗಳ ವಿತರಣಾ ಸಮಾರಂಭ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 23:30 IST
Last Updated 24 ಜನವರಿ 2026, 23:30 IST
<div class="paragraphs"><p>ಹುಬ್ಬಳ್ಳಿಯಲ್ಲಿ ಶನಿವಾರ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು.&nbsp;ಸಚಿವರಾದ ಸಂತೋಷ ಲಾಡ್‌, ಜಮೀರ್‌ ಅಹಮದ್ ಖಾನ್‌, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪ್ರಮುಖರು ಹಾಜರಿದ್ದರು</p></div>

ಹುಬ್ಬಳ್ಳಿಯಲ್ಲಿ ಶನಿವಾರ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಹಕ್ಕುಪತ್ರ ವಿತರಿಸಿದರು. ಸಚಿವರಾದ ಸಂತೋಷ ಲಾಡ್‌, ಜಮೀರ್‌ ಅಹಮದ್ ಖಾನ್‌, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ ಹಾಗೂ ಪ್ರಮುಖರು ಹಾಜರಿದ್ದರು

   

ಹುಬ್ಬಳ್ಳಿ: ‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನರ ಹಕ್ಕುಗಳನ್ನು ಕಸಿದು ಕೊಳ್ಳುವ ಕಾನೂನುಗಳನ್ನು ರೂಪಿಸುತ್ತಿದೆಯೇ ಹೊರತು ಜನಪರವಾದ ಕಾನೂನುಗಳನ್ನಲ್ಲ’ ಎಂದು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದರು.

ಇಲ್ಲಿನ ಮಂಟೂರು ರಸ್ತೆಯಲ್ಲಿ ಶನಿವಾರ ವಸತಿ ಇಲಾಖೆ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ನಡೆದ 42,345 ಮನೆಗಳ ಹಂಚಿಕೆ ಮತ್ತು ಹಕ್ಕುಪತ್ರಗಳ ವಿತರಣಾ ಸಮಾರಂಭ ದಲ್ಲಿ ಮಾತನಾಡಿದ ಅವರು, ‘ಕೇಂದ್ರ ಸರ್ಕಾರವು ಸಂವಿಧಾನ ಆಶಯಕ್ಕೆ ವಿರುದ್ಧವಾಗಿ ಆಡಳಿತ ನಡೆಸುತ್ತಿದೆ. ಇದರಿಂದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯಾಗಲಿದೆ’ ಎಂದರು.

ADVERTISEMENT

‘ಮನರೇಗಾ’ ಯೋಜನೆಯಲ್ಲಿದ್ದ ಉತ್ತಮ ಅಂಶಗಳು ಸೇರಿ ಎಲ್ಲವನ್ನೂ ಕಿತ್ತು ಹಾಕಿ, ವಿಬಿ–ಜಿ ರಾಮ್‌ ಜಿ ಯೋಜನೆಯನ್ನಾಗಿ ಮಾಡಿರುವ ಕೇಂದ್ರ ಸರ್ಕಾರವು ಬಡವರಿಗೆ ಇನ್ನಷ್ಟು ಸಂಕಷ್ಟಗಳನ್ನು ತಂದಿದೆ’ ಎಂದರು. 

‘ಕಾಂಗ್ರೆಸ್‌ ಮತ್ತು ಇತರೆ ಪಕ್ಷಗಳು ಆಡಳಿತವಿರುವ ರಾಜ್ಯಗಳ ರಾಜ್ಯಪಾಲರಿಗೆ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಸಹಕರಿಸದಂತೆ, ಕಡತಗಳಿಗೆ ಸಹಿ ಹಾಕದಂತೆ ಸೂಚಿಸುತ್ತಿದೆ. ಈ ಬಗ್ಗೆ ರಾಜ್ಯಪಾಲರನ್ನೇ ಕೇಳಿದರೆ, ‘ನಮಗೆ ಕೇಂದ್ರದ ಸೂಚನೆಯಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸುತ್ತಾರೆ’ ಎಂದರು.

ಆರ್ಥಿಕವಾಗಿ ದಿವಾಳಿಯಾಗಿಲ್ಲ: ‘ಗ್ಯಾರಂಟಿ ಯೋಜನೆಗಳಿಗೆ ಎರಡು ವರ್ಷಗಳಲ್ಲಿ ನಮ್ಮ ಸರ್ಕಾರ ₹1.16 ಲಕ್ಷ ಕೋಟಿ ಹಣ ಖರ್ಚು ಮಾಡಿದೆ. ವ್ಯಕ್ತಿ ತಲಾ ಆದಾಯದಲ್ಲಿ (ಪಿಸಿಐ) ನಮ್ಮ ರಾಜ್ಯ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಆದರೆ, ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

‘ಪ್ರತಿ ವರ್ಷ 3 ಲಕ್ಷ ಮನೆಗಳನ್ನು ನಿರ್ಮಿಸಿ ಅರ್ಹರಿಗೆ ಹಂಚಿಕೆ ಮಾಡುತ್ತೇವೆ ಎಂಬ ಭರವಸೆ ನೀಡಿದ್ದೆವು. ಅದರಂತೆ 2013–18ರ ಅವಧಿಯಲ್ಲಿ ನಾವು 14.58 ಲಕ್ಷ ಮನೆಗಳನ್ನು ನಿರ್ಮಿಸಿ ಹಂಚುವ ಮೂಲಕ ವಸತಿ ಕ್ರಾಂತಿಯನ್ನು ಮಾಡಿದ್ದೇವೆ. ಬಿಜೆಪಿಯವರು ತಾವು ಆಡಳಿತ ನಡೆಸಿದ 2018–23ರ ಅವಧಿಯಲ್ಲಿ 5ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದರು’ ಎಂದರು. 

ವಿಧಾನ ಪರಿಷತ್‌ ಸಭಾಪತಿ ಬಸವರಾಜ ಹೊರಟ್ಟಿ, ಸಚಿವರಾದ ಜಮೀರ್‌ ಅಹಮದ್ ಖಾನ್‌, ಸಂತೋಷ ಲಾಡ್, ಎಚ್.ಕೆ.ಪಾಟೀಲ,  ಕೆ.ಎಚ್.ಮುನಿಯಪ್ಪ, ಸತೀಶ ಜಾರಕಿಹೊಳಿ, ಎಚ್.ಸಿ.ಮಹದೇವಪ್ಪ, ಕೊಳೆಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ, ಶಾಸಕ ಪ್ರಸಾದ ಅಬ್ಬಯ್ಯ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್, ಶಾಸಕ ಕೋನರೆಡ್ಡಿ ಹಾಗೂ ಪ್ರಮುಖರು ಹಾಜರಿದ್ದರು.

ಹುಬ್ಬಳ್ಳಿಯಲ್ಲಿ ಶನಿವಾರ ನಡೆದ ಮನೆಗಳ ಹಂಚಿಕೆ ಕಾರ್ಯಕ್ರಮದಲ್ಲಿ ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮನೆಗಳ ಕೀ ವಿತರಿಸಿದರು. ವಸತಿ ಸಚಿವ ಜಮೀರ್‌ ಅಹ್ಮದ್ ಖಾನ್‌ ಕೊಳಗೇರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಪ್ರಸಾದ ಅಬ್ಬಯ್ಯ ಹಾಜರಿದ್ದರು

ಕಟೌಟ್‌ ಬಿದ್ದು ಮೂವರಿಗೆ ಗಾಯ

ಸಮಾರಂಭದ ವೇದಿಕೆಗೆ ತೆರಳು ಮಾರ್ಗದ ಅಕ್ಕಪಕ್ಕದಲ್ಲಿ ನಿಲ್ಲಿಸಿದ್ದ ಬೃಹತ್ ಕಟೌಟ್‌ಗಳು ಬಿದ್ದು ಬ್ಯಾಹಟ್ಟಿಯ ಶಂಕರ ಹಡಪದ ಗಂಗಾಧರ ನಗರದ ಶಾಂತಾ ಕ್ಯಾರಕಟ್ಟಿ ಮತ್ತು ಧಾರವಾಡದ ಮಂಜುನಾಥ ಕುಲಕರ್ಣಿ ಅವರಿಗೆ ಗಾಯಗಳಾದವು. ಅವರನ್ನು ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರಾದ ಜಮೀರ್ ಅಹಮದ್ ಖಾನ್ ಸಂತೋಷ ಲಾಡ್ ಮತ್ತಿತರರು ಗಾಯುಳುಗಳ ಆರೋಗ್ಯಸ್ಥಿತಿಯನ್ನು ವಿಚಾರಿಸಿದರು. ಘಟನೆ ಕುರಿತು ವಿಷಾದ ವ್ಯಕ್ತಪಡಿಸಿದ ಸಿದ್ದರಾಮಯ್ಯ ‘ಗಾಯಾಳುಗಳು ಸಂಪೂರ್ಣ ಗುಣಮುಖರಾಗುವವರೆಗೆ ಉಚಿತವಾಗಿ ಅಗತ್ಯ ಚಿಕಿತ್ಸೆ ಹಾಗೂ ಔಷಧಿ ಸೌಲಭ್ಯ ಕಲ್ಪಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. 

ಶಿಷ್ಟಾಚಾರ ಉಲ್ಲಂಘನೆ ಆರೋಪ: ಬಿಜೆಪಿ ಪ್ರತಿಭಟನೆ

‘ಮನೆಗಳ ಹಂಚಿಕೆ ಸಮಾರಂಭಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಮತ್ತು ಬಿಜೆಪಿ ಶಾಸಕರನ್ನು ಆಹ್ವಾನಿಸದೆ ಶಿಷ್ಟಾಚಾರ ಉಲ್ಲಂಘಿಸಿದೆ’ ಎಂದು ಆರೋಪಿಸಿ ರಾಜ್ಯ ಸರ್ಕಾರ ವಿರುದ್ಧ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಶನಿವಾರ ದುರ್ಗದಬೈಲ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ ‘ಪ್ರಧಾನಮಂತ್ರಿ ಆವಾಸ ಯೋಜನೆಯಡಿ ಮನೆಗಳನ್ನು ನಿರ್ಮಿಸಲಾಗಿದೆ. ಆದರೆ ಕಾಂಗ್ರೆಸ್ ಸರ್ಕಾರವು ಈ ಯೋಜನೆ ತನ್ನದೆಂದು ಜನರ ದಾರಿ ತಪ್ಪಿಸುತ್ತಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಡವರಿಗೆ ನೀಡಲು 1.30 ಲಕ್ಷ ಮನೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗಿತ್ತು. ಆದರೆ ಕಾಂಗ್ರೆಸ್ ಸರ್ಕಾರವು ಅನುದಾನ ಕೊರತೆಯ ನೆಪವೊಡ್ಡಿ 42 ಸಾವಿರ ಮನೆ ನಿರ್ಮಿಸಿದೆ. ಬಡವರ ಮೇಲೆ ಕಾಂಗ್ರೆಸ್‌ನದ್ದು ಡೋಂಗಿ ಪ್ರೀತಿ’ ಎಂದು ಟೀಕಿಸಿದರು.

ಶಾಸಕರಾದ ಮಹೇಶ ಟೆಂಗಿನಕಾಯಿ ಎಂ.ಆರ್. ಪಾಟೀಲ ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್ ಮತ್ತು ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರು ಪರಿಸರ ಇಲಾಖೆಯಿಂದ ಅನುಮತಿ ಕೊಡಿಸಲಿ. ಕೃಷ್ಣಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರ್ಕಾರವು 5300 ಕೋಟಿ ಹಣ ಕೊಡಲಿ.
-ಸಿದ್ದರಾಮಯ್ಯ ಮುಖ್ಯಮಂತ್ರಿ
ಸಂವಿಧಾನ ರಕ್ಷಿಸುವ ಮತ್ತು ಪ್ರಜಾಪ್ರಭುತ್ವ ಉಳಿಸುವ ನಿಟ್ಟಿನಲ್ಲಿ ನಮ್ಮ ಹೋರಾಟಕ್ಕೆ ನೀವೆಲ್ಲರೂ ಕೈಜೋಡಿಸಬೇಕು.
-ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ರಾಜ್ಯಸಭಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.