ಹುಬ್ಬಳ್ಳಿ: ‘ಎಐಸಿಸಿ ಅಧ್ಯಕ್ಷ, ದಲಿತ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ನೋಡೋಣ ಎಂದು ಬಿಜೆಪಿ ವ್ಯಂಗ್ಯವಾಡುತ್ತಿದೆ. ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿದ್ದು, ಆ ವ್ಯಂಗ್ಯವೇ ಸತ್ಯವಾದರೂ ಅಚ್ಚರಿಯಿಲ್ಲ’ ಎಂದು ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಅಭಿಪ್ರಾಯಪಟ್ಟರು.
ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘75 ವರ್ಷ ಮೀರಿದವರು ರಾಜಕೀಯ ನಿವೃತ್ತಿಯಾಗಲಿ ಎಂದು ಆರ್‌ಎಸ್‌ಎಸ್ ಮುಖಂಡ ಮೋಹನ ಭಾಗವತ್ ಅವರು ಇತ್ತೀಚಿಗೆ ಹೇಳಿದ್ದಾರೆ. ಬರುವ ಸೆಪ್ಟೆಂಬರ್‌ನಲ್ಲಿ 75 ವರ್ಷ ಪೂರ್ಣಗೊಳಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಧಾನಿ ಸ್ಥಾನದಿಂದ ಕೆಳಗಿಳಿಸಿದರೆ, ಆಗ ಜೆಡಿಯು ಹಾಗೂ ಟಿಡಿಪಿ ಬಿಜೆಪಿಗೆ ನೀಡಿದ್ದ ಬೆಂಬಲ ವಾಪಸ್ ಪಡೆಯಬಹುದು. ಆಗ ಕಾಂಗ್ರೆಸ್ ನೇತೃತ್ವದಲ್ಲಿ ಇತರ ಪಕ್ಷಗಳು ಸೇರಿ ಕೇಂದ್ರದಲ್ಲಿ ಸರ್ಕಾರ ರಚಿಸಿದರೆ, ಆಗ ಖರ್ಗೆ ಪ್ರಧಾನಿಯಾಗಬಹುದು’ ಎಂದರು.
‘ಮಲ್ಲಿಕಾರ್ಜುನ ಖರ್ಗೆ ಕಾಂಗ್ರೆಸ್‌ನ ಧೀಮಂತ ನಾಯಕ. ಅವರ ಬಗ್ಗೆ ಬಿಜೆಪಿಯವರು ಹಗುರವಾಗಿ ಮಾತನಾಡುತ್ತಿದ್ದಾರೆ. ದಲಿತರ ಬಗ್ಗೆ ಕಾಳಜಿ ಇದ್ದರೆ ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಿ ಎಂದು ಹೇಳುತ್ತಿದ್ದಾರೆ. ಗಾಂಧಿ ಮನೆತನ ಅಧಿಕಾರ ತ್ಯಾಗಕ್ಕೆ ಹೆಸರಾಗಿದೆ. ಈ ಹಿಂದೆ ಸೋನಿಯಾ ಗಾಂಧಿ ಅವರು ಪ್ರಧಾನಿ ಸ್ಥಾನ ತ್ಯಾಗ ಮಾಡಿದಂತೆ, ರಾಹುಲ್ ಗಾಂಧಿಯೂ ತ್ಯಾಗ ಮಾಡಿದರೆ ನಿಸ್ಸಂದೇಹವಾಗಿ ಖರ್ಗೆ ಅವರು ಪ್ರಧಾನಿಯಾಗುತ್ತಾರೆ’ ಎಂದು ಹೇಳಿದರು.
‘ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗುತ್ತಾರೆ, ಸಾಧನಾ ಸಮಾವೇಶದಲ್ಲಿ ಡಿ.ಕೆ. ಶಿವಕುಮಾರ್ ಅವರ ಹೆಸರು ಪ್ರಸ್ತಾಪಿಸಿಲ್ಲ ಎನ್ನುವ ಚಿಲ್ಲರೆ ಆರೋಪಗಳಲ್ಲಿಯೇ ವಿರೋಧ ಪಕ್ಷದ ನಾಯಕರು ಕಾಲ ಕಳೆಯುತ್ತಿದ್ದಾರೆ. ಅಭಿವೃದ್ಧಿ ಹಾಗೂ ಆರ್ಥಿಕತೆ ಕುರಿತು ಮಾತನಾಡಲು ಸಾಕಷ್ಟು ವಿಷಯಗಳಿವೆ’ ಎಂದು ರಾಯರಡ್ಡಿ ಕಿಡಿಕಾರಿದರು.
ಮುಖ್ಯಮಂತ್ರಿ ಬದಲಾವಣೆಯನ್ನು ಹೈಕಮಾಂಡ್ ಮಾಡಬೇಕೇ ಹೊರತು ಮತ್ಯಾರೂ ಅಲ್ಲ. ಸಂಪೂರ್ಣ ಐದು ವರ್ಷ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಆಗಿರುತ್ತಾರೆ
–ಬಸವರಾಜ ರಾಯರಡ್ಡಿ, ಮುಖ್ಯಮಂತ್ರಿ ಆರ್ಥಿಕ ಸಲಹೆಗಾರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.