ADVERTISEMENT

ಅಗೌರವ ತೋರಿಲ್ಲ; ಅಪಪ್ರಚಾರ ಮಾಡಲಾಗಿದೆ: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸ್ಪಷ್ಟನೆ

ಅಗೌರವ ತೋರಿಲ್ಲ; ಅಪಪ್ರಚಾರ ಮಾಡಲಾಗಿದೆ: ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 27 ಜನವರಿ 2022, 20:25 IST
Last Updated 27 ಜನವರಿ 2022, 20:25 IST
ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ
ರಾಯಚೂರು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ಮಲ್ಲಿಕಾರ್ಜುನ ಗೌಡ   

ರಾಯಚೂರು: ‘ಜಿಲ್ಲಾ ನ್ಯಾಯಾಲಯ ಆವರಣದಲ್ಲಿ ನಡೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆದುಕೊಂಡು ಬಂದು ಇಟ್ಟಿರುವುದನ್ನು ಮತ್ತು ಅದನ್ನು ತೆಗೆದುಕೊಂಡು ಹೋಗಿರುವುದನ್ನು ನಾನು ನೋಡಿಲ್ಲ. ಅಂಬೇಡ್ಕರ್‌ ಭಾವಚಿತ್ರ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಎಂದು ಹೇಳಿದ್ದಾಗಿ ಅಪಪ್ರಚಾರ ಮಾಡಲಾಗಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಮಲ್ಲಿಕಾರ್ಜುನಗೌಡ ಸ್ಪಷ್ಟನೆ
ನೀಡಿದ್ದಾರೆ.

ಹೈಕೋರ್ಟ್‌ನವರು ನೀಡಿದ ಎಸ್‌ಒಪಿ ಪ್ರಕಾರ ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿ, ವಕೀಲರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಸೇರಿ 200 ಜನ ಮೀರದಂತೆ ಬುಧವಾರ ಬೆಳಿಗ್ಗೆ 8.30ಕ್ಕೆ ಗಣರಾಜ್ಯೋತ್ಸವ ಆಚರಿಸಲು ನಿರ್ಣಯಿಸಿ, ನೋಟಿಸ್‌ ನೀಡಲಾಗಿತ್ತು.

ಆದರೆ, ಬೆಳಿಗ್ಗೆ 8.15ರ ವೇಳೆಗೆ ನಮ್ಮ ಸಿಬ್ಬಂದಿ ನನ್ನ ಕೊಠಡಿಗೆ ಬಂದು ಕೆಲ ವಕೀಲರು ಮಹಾತ್ಮ ಗಾಂಧಿ ಅವರ ಭಾವಚಿತ್ರದ ಜೊತೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರವನ್ನು ಸಹ ಇಟ್ಟು ಗಣರಾಜ್ಯೋತ್ಸವ ಆಚರಿಸಬೇಕು ಎಂದು ಸರ್ಕಾರದ ಸುತ್ತೋಲೆ ಇದೆ ಎನ್ನುತ್ತಿದ್ದಾರೆ ಎಂದು ತಿಳಿಸಿದರು. ನಂತರ ಕೆಲ ವಕೀಲರು ಬಂದು ಸುತ್ತೋಲೆಯ ಪ್ರಕಾರ ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ಇಟ್ಟು ಗಣರಾಜ್ಯೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದರು. ಆಗ ನಾನು ಆ ಸುತ್ತೋಲೆ ಹೈಕೋರ್ಟ್‌ನ ಫುಲ್‌ ಕೋರ್ಟ್‌ ಮುಂದೆಪರಿಗಣನೆಗೆ ಇರುವ ಕಾರಣ ನಾವು ಕಾಯಬೇಕು ಎಂದು ಹೈಕೋರ್ಟ್‌ನ ರಿಜಿಸ್ಟ್ರಾರ್‌ ನಮ್ಮ ಲೀಡರ್ಸ್‌ ಗುಂಪಿನಲ್ಲಿ ತಿಳಿಸಿದ್ದಾರೆ. ಆದ ಕಾರಣ, ಒತ್ತಾಯಿಸಬೇಡಿ ಎಂದು ವಿನಂತಿಸಿಕೊಂಡೆ.

ಅದೇ ಸಮಯದಲ್ಲಿ ರಾಯಚೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಿ.ಬಸವರಾಜ ಅವರು ಬಂದು ಉಳಿದ ವಕೀಲರಿಗೆ ಹೈಕೋರ್ಟ್‌ ರಿಜಿಸ್ಟ್ರಾರ್‌ ಅವರ ಸೂಚನೆಯ ಬಗ್ಗೆ ತಿಳಿಸಿ ಹೇಳಿ ಹೊರಗೆ ಕರೆದುಕೊಂಡು ಹೋದರು. ನಮ್ಮ ಸಿಬ್ಬಂದಿ ನನಗೆ, ಹೊರಗಡೆ ಬಹಳ ಜನ ಸೇರಿದ್ದಾರೆ ಎಂದು ತಿಳಿಸಿದರು. ನಂತರ ನಮ್ಮ ಸಿಬ್ಬಂದಿ, ಹೊರಗಡೆಯಿಂದ ಬಂದಿರುವ ಬೇರೆ ಜನರು ಹೋಗಿದ್ದಾರೆ. ತಾವು ಧ್ವಜಾರೋಹಣಕ್ಕೆ ಬರಬಹುದು ಎಂದು ತಿಳಿಸಿದ ನಂತರ ನಾನು ನಮ್ಮ ಎಲ್ಲ ನ್ಯಾಯಾಧೀಶರನ್ನು ಕರೆದುಕೊಂಡು ಧ್ವಜಾರೋಹಣ ಸ್ಥಳಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿರುತ್ತೇವೆ.

ಯಾವುದೇ ವ್ಯಕ್ತಿಗಳು ಡಾ.ಬಿ.ಆರ್‌.ಅಂಬೇಡ್ಕರ್‌ ಅವರ ಭಾವಚಿತ್ರ ತೆಗೆದುಕೊಂಡು ಬಂದು ಇಟ್ಟಿದ್ದನ್ನು ಮತ್ತು ತೆಗೆದುಕೊಂಡು ಹೋಗಿದ್ದನ್ನು ನಾನು ನೋಡಿಲ್ಲ. ಸತ್ಯ ಘಟನೆಯನ್ನು ಮರೆಮಾಚಿ ನಾನು ಅವರಿಗೆ ಡಾ.ಬಿ.ಆರ್‌. ಅಂಬೇಡ್ಕರ್‌ ಅವರ ಫೋಟೊ ತೆಗೆದರೆ ಮಾತ್ರ ಧ್ವಜಾರೋಹಣಕ್ಕೆ ಬರುತ್ತೇನೆ ಎಂದಿದ್ದಾಗಿ ಅಪಪ್ರಚಾರ ಮಾಡಿರುತ್ತಾರೆ.

ಡಾ.ಅಂಬೇಡ್ಕರ್‌ ಅವರ ಬಗ್ಗೆ ನನಗೆ ಅಪಾರ ಗೌರವ ಮತ್ತು ಅಭಿಮಾನ ಇದೆ. ಈ ಮಹಾನ್‌ ವ್ಯಕ್ತಿಗೆ ನಾನು ಯಾವತ್ತೂ ಅಗೌರವ ತೋರಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಆದರೆ,ನನ್ನ ಬಗ್ಗೆ ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಅಪಪ್ರಚಾರ ಮಾಡಿದ್ದಾರೆ ಎಂಬುದು ನನಗೆ ತಿಳಿಯದಾಗಿದೆ. ಆ ವದಂತಿಯನ್ನುನಂಬಬೇಡಿ’ ಎಂದು ಕೋರಿದ್ದಾರೆ.

ನ್ಯಾಯಾದೀಶ ಮಲ್ಲಿಕಾರ್ಜುನ ಗೌಡ ಅವರ ಸ್ಪಷ್ಟನೆ ಪೂರ್ಣಪಾಠ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.