ADVERTISEMENT

ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ ಕಾನ್‌ಸ್ಟೆಬಲ್ ಅಮಾನತು

ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನ ಶೌಚಾಲಯದಲ್ಲಿ ರಿವಾಲ್ವಾರ್ ಬಿಟ್ಟು ಹೋಗಿದ್ದ ಮಂಡ್ಯ DR ಕಾನ್‌ಸ್ಟೆಬಲ್ ನಾಗರಾಜು– ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್‌ ಕ್ರಮ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2023, 14:57 IST
Last Updated 18 ಡಿಸೆಂಬರ್ 2023, 14:57 IST
<div class="paragraphs"><p>ರೈಲು (ಪ್ರಾತಿನಿಧಿಕ ಚಿತ್ರ)</p></div>

ರೈಲು (ಪ್ರಾತಿನಿಧಿಕ ಚಿತ್ರ)

   

ಮಂಡ್ಯ: ರೈಲಿನ ಶೌಚಾಲಯದಲ್ಲೇ ಸರ್ವೀಸ್ ರಿವಾಲ್ವಾರ್ ಬಿಟ್ಟು ಬಂದಿದ್ದ ಜಿಲ್ಲಾ ಸಶಸ್ತ್ರ ಪೊಲೀಸ್ ಮೀಸಲು ಪಡೆಯ ಕಾನ್‌ಸ್ಟೆಬಲ್‌ ನಾಗರಾಜು ಸೇವೆಯಿಂದ ಅಮಾನತುಗೊಂಡಿದ್ದಾರೆ.

ನಾಗರಾಜು ನಿವೃತ್ತ ವಿಶೇಷ ಸರ್ಕಾರಿ ಅಭಿಯೋಜಕರೊಬ್ಬರಿಗೆ ಗನ್‌ಮ್ಯಾನ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಬೆಂಗಳೂರಿನಿಂದ ಮಂಡ್ಯಕ್ಕೆ ಭಾನುವಾರ ಮಧ್ಯಾಹ್ನ ಕಾಚಿಗುಡ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಪ್ರಯಾಣ ಮಾಡಿದ್ದರು. ಈ ವೇಳೆ ರೈಲಿನ ಒಳಗಿನ ಶೌಚಾಲಯಕ್ಕೆ ತೆರಳಿದ್ದು, ಸೊಂಟದ ಬೆಲ್ಟ್‌ನಲ್ಲಿದ್ದ ರಿವಾಲ್ವರ್‌ ಅನ್ನು ತೆಗೆದು ಅಲ್ಲಿನ ವಾಶ್‌‌ಬೇಸಿನ್‌ ಮೇಲಿಟ್ಟಿದ್ದರು. ಶೌಚ ಮುಗಿಸಿದ ನಂತರ ರಿವಾಲ್ವರ್ ಅನ್ನು‌ ಶೌಚಾಲಯದಲ್ಲೇ ಬಿಟ್ಟು ಕೆಳಗೆ ಇಳಿದಿದ್ದರು.

ADVERTISEMENT

ರೈಲುಗಾಡಿ ಮಂಡ್ಯ ರೈಲು ನಿಲ್ದಾಣಕ್ಕೆ ಬಂದ ನಂತರ ಶೌಚಾಲಯದಲ್ಲಿ ರಿವಾಲ್ದಾರ್ ಗಮನಿಸಿ ಪ್ರಯಾಣಿಕರು ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದರು. ರೈಲ್ವೆ ಪೊಲೀಸರು ತಪಾಸಣೆ ನಡೆಸಿ ರಿವಾಲ್ವರ್‌ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿದರು. ರಿವಾಲ್ವಾರ್ ಮೇಲಿನ ಸಂಖ್ಯೆಯ ಆಧಾರದಲ್ಲಿ ತಪಾಸಣೆ ನಡೆಸಿದಾಗ ಇದು ಕಾನ್‌ಸ್ಟೆಬಲ್‌ ನಾಗರಾಜು ಅವರಿಗೆ ನೀಡಿದ್ದು, ಅವರು ನಿವೃತ್ತ ವಿಶೇಷ ಸರ್ಕಾರಿ ಅಭಿಯೋಜಕರ ಅಂಗರಕ್ಷಕರಾಗಿರುವುದು ತಿಳಿದುಬಂದಿತು.

ಕರ್ತವ್ಯ ಲೋಪದ ಆರೋಪದ ಮೇಲೆ ನಾಗರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್‌. ಯತೀಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.