ADVERTISEMENT

ಹಳೆ ಮೈಸೂರು ಭಾಗದ ನಾಯಕರ ಸಭೆ: ಜೆಡಿಎಸ್‌ಗೆ ಸೀಟು ಬಿಡಲು ಕಾಂಗ್ರೆಸ್‌ ವಿರೋಧ

ಸುಮಲತಾ ಕಣಕ್ಕೆ ಇಳಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಜನವರಿ 2019, 20:21 IST
Last Updated 31 ಜನವರಿ 2019, 20:21 IST
   

ಬೆಂಗಳೂರು: ಜೆಡಿಎಸ್‌ ಪ್ರಾಬಲ್ಯದ, ಆದರೆ, ಕಾಂಗ್ರೆಸ್‌ ಸಾಂಪ್ರದಾಯಿಕ ಮತ ಬ್ಯಾಂಕ್ ಹೊಂದಿರುವ ಹಳೇ ಮೈಸೂರು ಭಾಗದಲ್ಲಿ ಲೋಕಸಭೆ ಚುನಾವಣೆಗೆ ಸೀಟು ಹೊಂದಾಣಿಕೆ ವಿಚಾರ ‘ದೋಸ್ತಿ’ ಪಕ್ಷಗಳ ಮಧ್ಯೆ ಹಗ್ಗ ಜಗ್ಗಾಟಕ್ಕೆ ಕಾರಣವಾಗುವ ಲಕ್ಷಣ ಗೋಚರಿಸಿದೆ.

ಕೆಪಿಸಿಸಿ ಕಚೇರಿಯಲ್ಲಿ ಈ ಭಾಗದ ಪಕ್ಷದ ಮುಖಂಡರ ಜೊತೆ ಗುರುವಾರ ರಾಜ್ಯ ಕಾಂಗ್ರೆಸ್‌ ನಾಯಕರು ಸಭೆ ನಡೆಸಿದರು. ಸೀಟು ಬಿಟ್ಟು ಕೊಡುವ ವಿಚಾರದಲ್ಲಿ ಸ್ಥಳೀಯ ಮುಖಂಡರು ಭಿನ್ನ ಅಭಿಪ್ರಾಯ ವ್ಯಕ್ತಪಡಿಸಿರುವುದು ಗೊಂದಲಕ್ಕೆ ಕಾರಣವಾಗಿದೆ.

ಹಳೇ ಮೈಸೂರು ಭಾಗದಲ್ಲಿ ಮಂಡ್ಯ, ಮೈಸೂರು, ಹಾಸನ, ಚಿತ್ರದುರ್ಗ, ಕೋಲಾರ, ಚಿಕ್ಕಬಳಾಪುರ, ಚಾಮರಾಜನಗರ, ತುಮಕೂರು, ಬೆಂಗಳೂರು ಗ್ರಾಮಾಂತರ, ಬೆಂಗಳೂರು ಕೇಂದ್ರ, ದಕ್ಷಿಣ, ಉತ್ತರ ಸೇರಿ ಒಟ್ಟು 12 ಲೋಕಸಭಾ ಕ್ಷೇತ್ರಗಳಿವೆ. ಈ ಕ್ಷೇತ್ರಗಳ ಪೈಕಿ ಬಿಜೆಪಿ – 4 (ಅನಂತಕುಮಾರ್‌ ನಿಧನದ ಬಳಿಕ 3), ಜೆಡಿಎಸ್‌ – 2 , ಕಾಂಗ್ರೆಸ್‌– 6 ಸ್ಥಾನ ಹೊಂದಿವೆ.

ADVERTISEMENT

ತಮ್ಮ ಬಳಿ ಇರುವ ಹಾಲಿ ಎರಡು ಕ್ಷೇತ್ರಗಳ (ಮಂಡ್ಯ, ಹಾಸನ) ಜೊತೆಗೆ ಇನ್ನೂ ಕನಿಷ್ಠ ಎರಡು ಸ್ಥಾನಗಳನ್ನು ಬಿಟ್ಟುಕೊಡಬೇಕೆಂದು ಜೆಡಿಎಸ್‌ ಪಟ್ಟು ಹಿಡಿಯಲಿದೆ. ಆದರೆ, ಜೆಡಿಎಸ್‌ ಪ್ರತಿನಿಧಿಸುತ್ತಿರುವ ಕ್ಷೇತ್ರಗಳ ಕಾಂಗ್ರೆಸ್‌ನ ಸ್ಥಳೀಯ ನಾಯಕರು ಆ ಪಕ್ಷಕ್ಕೆ ಸೀಟು ಬಿಟ್ಟು ಕೊಡುವ ವಿಷಯದಲ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

‘ಹಾಸನ ಕ್ಷೇತ್ರ ಕಾಂಗ್ರೆಸ್‌ಗೆ ಬಿಟ್ಟುಕೊಡುವಂತೆ ಬೇಡಿಕೆ ಮುಂದಿಟ್ಟಿದ್ದೇವೆ. ಎ. ಮಂಜು ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಂತಿಮವಾಗಿ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳಲಿದೆ’ ಎಂದು ಕಾಂಗ್ರೆಸ್ ಮುಖಂಡ ಬಿ. ಶಿವರಾಂ ಹೇಳಿದರು.

‘ಮಂಡ್ಯದಿಂದ ಅಂಬರೀಷ್‌ ಕುಟುಂಬದ ಒಬ್ಬರಿಗೆ ಟಿಕೆಟ್ ಕೊಡಬೇಕು ಎಂಬ ಕೂಗು ಎದ್ದಿದೆ. ಸುಮಲತಾ ಹೆಸರು ಚರ್ಚೆಯಲ್ಲಿದೆ. ಸಭೆಯಲ್ಲಿ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ’ ಎಂದು ಚಲುವರಾಯಸ್ವಾಮಿ ಹೇಳಿದರು.

ಸಭೆ ಬಳಿಕ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ‘ಮಂಡ್ಯ, ಹಾಸನ, ತುಮಕೂರು ಮತ್ತು ಹಾಸನ ಕ್ಷೇತ್ರಗಳಲ್ಲಿ ಕಾಂಗ್ರೆಸ್- ಜೆಡಿಎಸ್ ಮಧ್ಯೆ ನೇರ ಸ್ಪರ್ಧೆ ಇದೆ. ಮೈತ್ರಿ ಮಾಡಿಕೊಂಡು ಹೆಚ್ಚಿನ ಕ್ಷೇತ್ರಗಳನ್ನು ಗೆಲ್ಲಬೇಕೆಂಬ ಬಗ್ಗೆ ಚರ್ಚೆ ನಡೆದಿದೆ’ ಎಂದರು.

‘ಸ್ಥಳೀಯ ಮಟ್ಟದಲ್ಲಿ ಸಣ್ಣ ಪುಟ್ಟ ಸಮಸ್ಯೆಗಳಿವೆ. ಹೈಕಮಾಂಡ್ ತೀರ್ಮಾನಕ್ಕೆ ಎಲ್ಲರೂ ಬದ್ಧ ಎಂದೂ ಹೇಳಿದ್ದಾರೆ’ ಎಂದರು.

‘ಇದೇ 6ರಂದು ಪಕ್ಷದ ಸರ್ವ ಸದಸ್ಯರ ಸಭೆ ಇದೆ. ಆ ವೇಳೆ ಜೆಡಿಎಸ್ ಮುಖಂಡರ ಜೊತೆ ಸೀಟು ಹಂಚಿಕೆಯ ದಿನ ನಿಗದಿ ಮಾಡುತ್ತೇವೆ’ ಎಂದು ದಿನೇಶ್‌ ಹೇಳಿದರು.

**

ಕಣಕ್ಕಿಳಿಯುವಂತೆ ಒತ್ತಾಯವಿದೆ:ಸುಮಲತಾ ಅಂಬರೀಷ್‌

‘ಅಂಬರೀಷ್‌ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡವರು. ಹಲವು ವರ್ಷ ಆ ಪಕ್ಷದಲ್ಲೇ ಇದ್ದವರು. ಹೀಗಾಗಿ ನಾನೂ ಕೂಡ ಕಾಂಗ್ರೆಸ್ ಪರವಾಗಿ ಇರಬೇಕಾಗುತ್ತದೆ. ಅಂಬರೀಷ್‌ ಮೇಲಿನ ಅಭಿಮಾನದಿಂದ ಸ್ಪರ್ಧಿಸುವಂತೆ ಮಂಡ್ಯ ಕ್ಷೇತ್ರದ ‌ಕಾಂಗ್ರೆಸ್ ಕಾರ್ಯಕರ್ತರು ‌ಒತ್ತಾಯಿಸುತ್ತಿದ್ದಾರೆ’ ಎಂದು ಸುಮಲತಾ ಅಂಬರೀಷ್‌ ಹೇಳಿದರು.

‘ರಾಜಕೀಯದಲ್ಲಿ ಮುಂದುವರಿಯಬೇಕೆ, ಬೇಡವೇ ಎಂಬ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಮಾಡಿಲ್ಲ. ಆದರೆ, ಚಿತ್ರರಂಗದಿಂದಲೂ ನನ್ನ ನಿರ್ಧಾರಕ್ಕೆ ಬೆಂಬಲ ಸಿಗುವ ನಿರೀಕ್ಷೆ ಇದೆ’ ಎಂದರು.

**

ವೈಯಕ್ತಿಕವಾಗಿ ಹೇಳಿಕೆ ನೀಡದಂತೆ ಪಕ್ಷದ ಸ್ಥಳೀಯ ನಾಯಕರಿಗೆ ಸೂಚಿಸಿದ್ದೇವೆ. ಈ ವಿಚಾರ ಜೆಡಿಎಸ್ ಮುಖಂಡರಿಗೂ ಅನ್ವಯವಾಗುತ್ತದೆ.

-ದಿನೇಶ್‌ ಗುಂಡೂರಾವ್‌, ಕೆಪಿಸಿಸಿ ಅಧ್ಯಕ್ಷ

**

ಸೀಟು ಹಂಚಿಕೆ ಬಗ್ಗೆ ಅಭಿಪ್ರಾಯ ವ್ಯಕ್ತವಾಗಿದೆ. ದೇವೇಗೌಡರೊಂದಿಗೆ ಮಾತುಕತೆಯ ಬಳಿಕ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದೇವೆ.

-ಜಿ.ಪರಮೇಶ್ವರ, ಉಪ ಮುಖ್ಯಮಂತ್ರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.