ಕನ್ನಡ ಸಾಹಿತ್ಯ ಸಮ್ಮೇಳನ
ಬೆಂಗಳೂರು: ಮಾರುಕಟ್ಟೆಯಲ್ಲಿಜರ್ಮನ್ ಹ್ಯಾಂಗರ್ ಟೆಂಟ್ ಸ್ಪರ್ಧಾತ್ಮಕ ಬಾಡಿಗೆ ದರ ಪ್ರತಿ ಚದರ ಅಡಿಗೆ ಗರಿಷ್ಠ ₹25ರಿಂದ ₹35. ಆದರೆ,ಗುತ್ತಿಗೆದಾರನಿಗೆ ಪಾವತಿಸಿದ್ದು ₹68.25. ಹಸಿರು ಜಾಲಿ ಮ್ಯಾಟ್ ಖರೀದಿ ದರ ಪ್ರತಿ ಚದರ ಅಡಿಗೆ ₹1.20 ರಿಂದ ₹2.80. ಆದರೆ, ಬಾಡಿಗೆಗೆ ಪಡೆದು ಸಂದಾಯ ಮಾಡಿರುವ ದರ ₹6.30. ನೀರು ನಿರೋಧಕ ಪೆಂಡಾಲ್ ಬಾಡಿಗೆ ದರ ಪ್ರತಿ ಚದರ ಅಡಿಗೆ ಗರಿಷ್ಠ ₹15ರಿಂದ ₹18. ಬಿಲ್ ಪಾವತಿಸಿದ್ದು ಪ್ರತಿ ಚದರ ಅಡಿಗೆ ₹48!
ಮಂಡ್ಯದಲ್ಲಿ ನಡೆದ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಹಣ ವೆಚ್ಚ ಮಾಡಿರುವ ಪರಿಯಿದು.
ಸಮ್ಮೇಳನದ ಖರ್ಚು ವೆಚ್ಚದ ಬಗ್ಗೆ ಮಾಹಿತಿ ಹಕ್ಕಿನಡಿ ಪಡೆದ 400ಕ್ಕೂಹೆಚ್ಚು ಪುಟಗಳ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ. ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾಯ್ದೆಯ 4ಜಿ ವಿನಾಯಿತಿ ಪಡೆದು, ಗುತ್ತಿಗೆದಾರರು ಹಾಗೂ ಏಜೆನ್ಸಿಗಳೊಂದಿಗೆ ಕೆಎಸ್‌ಎಂಸಿಎ, ಸಾಹಿತ್ಯ ಪರಿಷತ್ ಮತ್ತು ಸಮಿತಿಗಳು ಒಳ ಒಪ್ಪಂದ ಮಾಡಿಕೊಂಡು ಹಣ ದುರುಪಯೋಗ ಮಾಡಿರುವುದು ಈ ದಾಖಲೆಗಳಿಂದ ಬಹಿರಂಗವಾಗಿದೆ.
ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಮತ್ತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಈ ಬಗ್ಗೆ ದೂರು ಸಲ್ಲಿಸಲಾಗಿದೆ. ಎಫ್.ಎಂ. ಇಟಗಿ ಎಂಬವರು ಎಂ. ಬಿ. ಪಾಟೀಲ ಅವರಿಗೆ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ವಿವರಣೆ ನೀಡುವಂತೆ ಕರ್ನಾಟಕ ಸ್ಟೇಟ್ ಮಾರ್ಕೆಟಿಂಗ್ ಕಮ್ಯೂನಿಕೇಷನ್ ಆ್ಯಂಡ್ ಅಡ್ವಟೈಸಿಂಗ್ ಲಿಮಿಟೆಡ್ (ಕೆಎಸ್‌ಎಂಸಿಎ) ವ್ಯವಸ್ಥಾಪಕ ನಿರ್ದೇಶಕರಿಗೆ ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನಿರ್ದೇಶನ ನೀಡಿದ್ದಾರೆ. ಶಿವಮೊಗ್ಗದ ಬಿ. ಚಂದ್ರೇಗೌಡ ಅವರು ಆರ್ಥಿಕ ಇಲಾಖೆಗೆ ಸಲ್ಲಿಸಿದ ದೂರಿನ ಮೇಲೆ ಕ್ರಮ ತೆಗೆದುಕೊಳ್ಳುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ತಮ್ಮ ಇಲಾಖೆಯ ನಿರ್ದೇಶಕರಿಗೆ ಸೂಚನೆ ನೀಡಿದ್ದಾರೆ.
2024ರ ಡಿಸೆಂಬರ್ 20ರಿಂದ 22ರವರೆಗೆ ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಸಮ್ಮೇಳನಕ್ಕೆ ಒಟ್ಟು ₹29.65 ಕೋಟಿ ವೆಚ್ಚವಾಗಿತ್ತು. ಅದರಲ್ಲಿ ₹3.17 ಕೋಟಿ ಜಿಎಸ್‌ಟಿ, ₹1.08 ಕೋಟಿ ಕೆಎಸ್‌ಎಂಸಿಎ ಸೇವಾ ಶುಲ್ಕ ಸೇರಿದೆ. ಸರ್ಕಾರ ಎರಡು ಹಂತಗಳಲ್ಲಿ ಒಟ್ಟು ₹30 ಕೋಟಿ ಅನುದಾನ ನೀಡಿತ್ತು. ಅಲ್ಲದೆ, ಇತರ ಮೂಲಗಳಿಂದ ಸೇರಿ ಒಟ್ಟು ₹32.74 ಕೋಟಿ ಸಂಗ್ರಹವಾಗಿತ್ತು.
‘ಸಮ್ಮೇಳನದ ಅಗತ್ಯಕ್ಕೆಂದು ಶಾಮಿಯಾನ, ಮ್ಯಾಟ್... ಹೀಗೆ ವಿವಿಧ ಸಾಮಗ್ರಿಗಳ ಖರೀದಿ ಹಾಗೂ ಹಲವು ಸೇವೆಗಳಿಗೆ ಮಾರುಕಟ್ಟೆ ದರಕ್ಕಿಂತ ದುಪ್ಪಟ್ಟು, ಮೂರು ಪಟ್ಟು ದರ ವಿಧಿಸಿ ಸಲ್ಲಿಕೆಯಾಗಿದ್ದ ಬಿಲ್‌ಗಳಿಗೆ ಕೆಎಸ್‌ಎಂಸಿಎ ಹಣ ಪಾವತಿಸಿದೆ. ಸಾಹಿತ್ಯ ಸಮ್ಮೇಳನ ನಡೆಯುವ ಸ್ಥಳ ವರ್ಷದ ಮೊದಲೇ ನಿಗದಿಯಾಗಿದ್ದರೂ ಕೆಟಿಟಿಪಿ ಕಾಯ್ದೆಯಡಿ ಟೆಂಡರ್ ಕರೆಯದೆ, 4ಜಿ ವಿನಾಯಿತಿ ಪಡೆದು ಕೆಎಸ್‌ಎಂಸಿಎ ಮೂಲಕ ಕಾರ್ಯಕ್ರಮ ಆಯೋಜಿ ಸಲಾಗುತ್ತದೆ. ಈ ಸಂಸ್ಥೆಯು ಸರ್ಕಾರಿ ಸಂಸ್ಥೆಯಾಗಿದ್ದು, ಅದರ ಮೂಲಕ ಕೆಲಸ ಆಗಿದೆ ಎಂದು ತೋರಿಸಿ ತಮಗೆ ಬೇಕಾದ ವ್ಯಕ್ತಿ, ಸಂಸ್ಥೆಗಳಿಗೆ ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರದಲ್ಲಿ ಗುತ್ತಿಗೆ ವಹಿಸಿ, ಕಾಮಗಾರಿ ನಿರ್ವಹಿಸದೆಯೂ ಬಿಲ್ ನೀಡಿರುವುದು ದಾಖಲೆಗಳಿಂದ ಗೊತ್ತಾಗುತ್ತಿದೆ’ ಎಂದೂ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಮ್ಮೇಳನ ಆಯೋಜಿಸಲು 28 ಸಮಿತಿಗಳನ್ನು ಜಿಲ್ಲಾಡಳಿತ ರಚಿಸಿತ್ತು. ಈ ಸಮಿತಿಗಳಲ್ಲಿ 6–7 ಸ್ಥಳೀಯ ಅಧಿಕಾರಿಗಳೂ ಇದ್ದರು. ಖರ್ಚು ವೆಚ್ಚದ ಬಿಲ್‌ಗಳನ್ನು ಈ ಸಮಿತಿಗಳು ಅನುಮೋದಿಸಿವೆ. ಸಮಿತಿಗಳು ಅನುಮೋದನೆ ನೀಡಿದ ಬಳಿಕ ನಾವೇನು ಮಾಡಲು ಆಗುತ್ತದೆ. ನಮ್ಮ ಮೂಲಕ ಹಣ ಪಾವತಿಯಾಗಿದೆ. ನಮ್ಮದು ‘ಪೋಸ್ಟ್ ಮ್ಯಾನ್’ ಕೆಲಸ ಅಷ್ಟೆ.ಮೊಹಮ್ಮದ್ ಅತೀಕುಲ್ಲಾ ಷರೀಫ್, ವ್ಯವಸ್ಥಾಪಕ ನಿರ್ದೇಶಕ, ಕೆಎಸ್‌ಎಂಸಿಎ
ಕೆಟಿಟಿಪಿ ಕಾಯ್ದೆಯ ನಿಯಮಗಳನ್ನು ಪಾಲಿಸಿಯೇ ಶಾಮಿಯಾನ, ಧ್ವನಿವರ್ಧಕಗಳು, ಅಲಂಕಾರ ವ್ಯವಸ್ಥೆ, ಬೆಳಕಿನ ವ್ಯವಸ್ಥೆ, ಆಹಾರ ಪೂರೈಕೆ, ಸಾಗಣೆ ಮತ್ತು ಇತರ ಸೇವೆಗಳ ಅವಶ್ಯಕತೆಗಳನ್ನು ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಮಾತ್ರ 4ಜಿ ವಿನಾಯಿತಿ ಪಡೆಯಲು ಆರ್ಥಿಕ ಇಲಾಖೆ ಅವಕಾಶ ನೀಡಿದೆ. ಉತ್ತಮ ಗುಣಮಟ್ಟದ ಸೇವೆ ಹಾಗೂ ಸಮಜಾಯಿಷಿ ದರದಲ್ಲಿ ಸೇವೆ ನೀಡಬೇಕೆಂದು 4ಜಿ ವಿನಾಯಿತಿ ಆದೇಶದಲ್ಲಿ ವಿವರಿಸಲಾಗಿದೆ. ಆದರೆ, ತಮಗೆ ಬೇಕಾದವರಿಗೆ ಕಾಮಗಾರಿ ನೀಡಲು ಎಲ್ಲ ನಿಯಮಗಳನ್ನು ಕೆಎಸ್‌ಎಂಸಿಎ ಉಲ್ಲಂಘಿಸಿದೆ. ಸಾರ್ವಜನಿಕ ಬಳಕೆಗೆ ಶೌಚಾಲಯಗಳನ್ನು ಸ್ಟೀಲ್ ತಗಡು ಬಾಡಿಗೆಗೆ ಪಡೆದು ₹ 400ರಿಂದ ₹ 500ರಲ್ಲಿ ಅಚ್ಚುಕಟ್ಟಾಗಿ ನಿರ್ಮಿಸಬಹುದು. ಆದರೆ, ಅದೇ ತಗಡುಗಳಿಗೆ ಬಾಡಿಗೆ ₹ 4,500ರಂತೆ ಒಟ್ಟು 200 ಶೌಚಾಲಯಗಳನ್ನು ನಿರ್ಮಿಸಲು ₹ 66.32 ಲಕ್ಷ ಬಿಲ್ ಪಾವತಿಸಲಾಗಿದೆ ಎಂದು ದೂರಿನಲ್ಲಿಉಲ್ಲೇಖಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.